ನವದೆಹಲಿ : ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಕಾಂಗ್ರೆಸ್ ತೀವ್ರ ಸಮರ ಸಾರಿರುವ ನಡುವೆಯೇ, ಈ ಕುರಿತು ಸಮಗ್ರ ಚರ್ಚೆ ನಡೆಸಲು ಸಿದ್ಧರಿದ್ದೇವೆ ಎಂದು ಕೇಂದ್ರ ಸರ್ಕಾರ ಬುಧವಾರ ಘೋಷಿಸಿದೆ. ಈ ಬೆನ್ನಲ್ಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಚರ್ಚೆಗೆ ಸಮಯ ನಿಗದಿಪಡಿಸುವಂತೆ ಕೋರಿದ್ದಾರೆ.
ಬುಧವಾರ ಮಧ್ಯಾಹ್ನ ಕಲಾಪ ಮರುಸಮಾವೇಶವಾದ ಬಳಿಕ ಬಿರ್ಲಾ ಅವರು ಹೇಳಿಕೆ ನೀಡುವಂತೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜುಗೆ ಸೂಚಿಸಿದರು. ಆದರೆ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಮಧ್ಯಪ್ರವೇಶಿಸಿ, ‘ನಾವು ಪ್ರಧಾನ್ ರಾಜೀನಾಮೆಗೂ ಆಗ್ರಹಿಸುತ್ತಿದ್ದೇವೆ. ವಿದ್ಯಾರ್ಥಿಗಳಿಗಾಗಿ ಇಡೀ ದೇಶವೇ ನೋವುಣ್ಣುತ್ತಿರುವಾಗ, ಎಲ್ಲ ವಿಷಯಗಳನ್ನು ಬದಿಗಿಟ್ಟು ಕೇವಲ ನೀಟ್ ಬಗ್ಗೆ ಚರ್ಚೆ ನಡೆಸಬೇಕು’ ಎಂದು ಒತ್ತಾಯಿಸಿದರು.
ಬಳಿಕ ಮಾತನಾಡಿದ ರಿಜಿಜು, ‘ನೀಟ್ ಸೋರಿಕೆ ಕುರಿತು ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ. ಆದರೆ, ಚರ್ಚೆಯನ್ನು ಯಾವ ನಿಯಮದಡಿ ನಡೆಸಬೇಕು, ಅದರ ದಿನಾಂಕ ಮತ್ತು ಅವಧಿ ಎಷ್ಟು ಎಂಬುದನ್ನು ನಿರ್ಧರಿಸಲು ಸಭಾಧ್ಯಕ್ಷರು ಎಲ್ಲಾ ಪಕ್ಷಗಳ ಸಂಸದರನ್ನು ಭೇಟಿಯಾಗಬೇಕಾಗುತ್ತದೆ’ ಎಂದರು.
ಬೀದಿ ಪ್ರತಿಭಟನೆ ಪರಿಹಾರವಲ್ಲ:
ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈ ಬಗ್ಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಜನರಿಗೆ ತಿಳಿಯಬೇಕಾಗಿದೆ. ಹೀಗಾಗಿ, ವಿವರವಾದ ಚರ್ಚೆಗೆ ಸರ್ಕಾರ ಸಿದ್ಧವಿದೆ. ಯುವಜನರಿಗೆ ಸಂಬಂಧಿಸಿದ ಸೂಕ್ಷ್ಮ ವಿಷಯಗಳು ಸಂಸತ್ತಿನಲ್ಲಿ ಚರ್ಚೆಯಾಗಬೇಕು. ಬೀದಿ ಪ್ರತಿಭಟನೆಗಳು ಯಾವುದೇ ಫಲಿತಾಂಶವನ್ನು ನೀಡುವುದಿಲ್ಲ’ ಎಂದು ವಿಪಕ್ಷಗಳಿಗೆ ಚಾಟಿ ಬೀಸಿದರು.
ಸ್ಪೀಕರ್ ಭೇಟಿಯಾದ ಪ್ರಧಾನ್:
ನೀಟ್ ಬಗ್ಗೆ ಲೋಕಸಭೆಯಲ್ಲಿ ಚರ್ಚಿಸಲು ಸರ್ಕಾರ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾದರು. ಚರ್ಚೆಯ ನಿಯಮ, ದಿನಾಂಕ ಮತ್ತು ಅವಧಿಯ ಕುರಿತು ನಿರ್ಧರಿಸಲು ಸರ್ವಪಕ್ಷ ಸಭೆ ಕರೆಯುವಂತೆ ಮನವಿ ಮಾಡಿದರು.
ನಿಯಮ 267ರಡಿ ಚರ್ಚೆ ಮಾಡಿ: ‘ನೀಟ್ ವಿಷಯದಲ್ಲಿ ನಿಯಮ 267ರ ಅಡಿಯಲ್ಲಿ ಚರ್ಚೆ ನಡೆಯಬೇಕು. ಸದನದ ಪಟ್ಟಿಯಲ್ಲಿರುವ ಎಲ್ಲಾ ವಿಷಯಗಳನ್ನು ಸ್ಥಗಿತಗೊಳಿಸಿ, ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ, ವಿಪಕ್ಷ ನಾಯಕರ ವಿರುದ್ಧ ಕ್ರಮ ಮತ್ತು ನೀಟ್ ವಿವಾದಗಳ ಬಗ್ಗೆ ತಕ್ಷಣ ಚರ್ಚೆ ನಡೆಸಬೇಕು’ ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಒತ್ತಾಯಿಸಿದ್ದಾರೆ. ಈ ಬಗ್ಗೆ ವಿಪಕ್ಷಗಳು ರಾಜ್ಯಸಭೆಗೆ ನೋಟಿಸ್ ಸಲ್ಲಿಸಿವೆ.
ಸದನದ ಪಟ್ಟಿಯಲ್ಲಿರುವ ಎಲ್ಲ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿ ಒಂದೇ ವಿಷಯದ ಬಗ್ಗೆ ಚರ್ಚೆ ನಡೆಸಲು ರಾಜ್ಯಸಭಾ ನಿಯಮ 267 ಅವಕಾಶ ನೀಡುತ್ತದೆ. ಆದರೆ ಇದನ್ನು ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಬಳಸಲಾಗುತ್ತದೆ.
