ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ವಜಾಗೆ ಆಗ್ರಹ

KannadaprabhaNewsNetwork |  
Published : Jun 05, 2025, 02:15 AM IST
ಪೋಟೊ೩ಸಿಪಿಟಿ೩: ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ವಜಾಗೆ ಆಗ್ರಹಿಸಿ  ಕಸಾಪ ಅಜೀವ ಸದಸ್ಯರ ಒಕ್ಕೂಟದಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಮಹೇಶ್ ಜೋಶಿ ಪ್ರಜಾಪ್ರಭುತ್ವ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಇವರಿಂದಾಗಿ ಪರಿಷತ್ತಿನ ಘನತೆ ಗೌರವ ಹಾಳಾಗಿದೆ.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಅಧಿಕಾರ ದುರುಪಯೋಗ, ಭ್ರಷ್ಟಾಚಾರ, ಬೈಲಾ ತಿದ್ದುಪಡಿಯಂತಹ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿರುವ ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಮಹೇಶ್ ಜೋಶಿ ಅವರನ್ನು ವಜಾಗೊಳಿಸಿ, ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಕ.ಸಾ.ಪ ಆಜೀವ ಸದಸ್ಯರ ಒಕ್ಕೂಟ, ರೈತಪರ ಸಂಘಟನೆ, ಜನಪರ ಸಂಘಟನೆಗಳ ವೇದಿಕೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಪ್ರೇಮಿಗಳು ಪ್ರತಿಭಟನೆ ನಡೆಸಿದರು.

ನಗರದ ಗಾಂಧಿಭವನ ಭವನ ಬಳಿ ಜಮಾಯಿಸಿದ ಕಸಾಪ ಅಜೀವ ಒಕ್ಕೂಟದ ಸದಸ್ಯರು, ಬೆಂ-ಮೈ ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಮಹೇಶ್ ಜೋಶಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಗಾಂಧಿ ಭವನದ ಬಳಿಯಿಂದ ತಾಲೂಕು ಕಚೇರಿಯವರೆಗೆ ಬೆಂ-ಮೈ ಹೆದ್ದಾರಿಯಲ್ಲಿ ಮೆರವಣಿ ನಡೆಸಿದ ತಹಸೀಲ್ದಾರ್ ನರಸಿಂಹಮೂರ್ತಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಬಿ. ಜಯಪ್ರಕಾಶ್ ಗೌಡ ಮಾತನಾಡಿ, ಮಹೇಶ್ ಜೋಶಿ ಪ್ರಜಾಪ್ರಭುತ್ವ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಇವರಿಂದಾಗಿ ಪರಿಷತ್ತಿನ ಘನತೆ ಗೌರವ ಹಾಳಾಗಿದೆ. ಇವರ ಧೋರಣೆಯನ್ನು ಪ್ರಶ್ನಿಸಿದ ಪರಿಷತ್ತಿನ ಅಜೀವ ಸದಸ್ಯರಿಗೆ, ಜಿಲ್ಲಾಧ್ಯಕ್ಷರಿಗೆ ಬೆದರಿಕೆ ಹಾಕುತ್ತಿದ್ದಾರೆ, ಈಚೆಗೆ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಖರ್ಚಾದ ಕೋಟ್ಯಾಂತರ ರೂಪಾಯಿಗಳ ಲೆಕ್ಕ ಪತ್ರ ನೀಡದೆ ಭ್ರಷ್ಟಾಚಾರ ನಡೆಸಿದ್ದಾರೆ, ಇವರನ್ನು ಸರ್ಕಾರ ಕೂಡಲೇ ಅಧಿಕಾರದಿಂದ ಕೆಳಗಿಳಿಸಬೇಕು. ಸೂಕ್ತ ತನಿಖೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಅವಿಭಜಿತ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಸು.ತ.ರಾಮೇಗೌಡ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್, ನಾಡು, ನುಡಿ, ಸಂಸ್ಕೃತಿ ಉಳಿಸಲು ಕೆಲಸ ಮಾಡಬೇಕು. ಆದರೆ ಮೂರು ವರ್ಷದಿಂದ ಅಧಿಕಾರ ಹಿಡಿದಿರುವ ಮಹೇಶ್ ಜೋಷಿ ಸರ್ವಾಧಿಕಾರಿ ಧೋರಣೆ, ದಬ್ಬಾಳಿಕೆ ಮೂಲಕ ಆಡಳಿತ ನಡೆಸುತ್ತಿದ್ದಾರೆ. ಪರಿಷತ್ತಿನಲ್ಲಿ ಕೋಟ್ಯಂತರ ರುಪಾಯಿ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದರು. ಜನಪದ ವಿದ್ವಾಂಸ ಡಾ. ಚಕ್ಕೆರೆ ಶಿವಶಂಕರ್ ಮಾತನಾಡಿ, ಸಾಹಿತ್ಯ ಪರಿಷತ್ ಜನರ ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ಒಬ್ಬ ವ್ಯಕ್ತಿಯ ಆಸ್ತಿಯಲ್ಲ. ಈಗಿರುವ ಅಧ್ಯಕ್ಷರು ಸಾಹಿತಿಯಲ್ಲ. ಸಂಸ್ಕೃತಿಯ ಬಗ್ಗೆ ಅರಿವೂ ಇಲ್ಲ. ಕನ್ನಡಿಗರನ್ನು ಪ್ರೀತಿಸುವ ಬದಲು ಪರಿಷತ್ತಿನಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಪ್ರಶ್ನಿಸಿದವರಿಗೆ ಬೆದರಿಕೆ ಹಾಕುವುದು, ಸದಸ್ಯತ್ವವನ್ನು ರದ್ದು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.ಕೇಂದ್ರ ಕ.ಸಾ.ಪ ಮಾಜಿ ಗೌರವಾಧ್ಯಕ್ಷ ಸಿ.ಕೆ. ರಾಮೇಗೌಡ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆರ್ಥಿಕ ಅಶಿಸ್ತು ತಾಂಡವವಾಡುತ್ತಿದೆ, ದುಂದು ವೆಚ್ಚದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಹಣ ಅನಗತ್ಯ ಖರ್ಚಾಗುತ್ತಿದೆ. ಪರಿಷತ್ತಿನ ಬೈಲಾ ತಿದ್ದುಪಡಿ ಮೂಲಕ ತನ್ನ ಅಸ್ತಿತ್ವವನ್ನು ಭದ್ರಪಡಿಸಿಕೊಳ್ಳುವ ಹುನ್ನಾರ ನಡೆಸುತ್ತಿರುವ ಮಹೇಶ್ ಜೋಶಿ ಅವರನ್ನು ಕೂಡಲೇ ಅಮಾನತ್ತಿನಲ್ಲಿಟ್ಟು, ಆಡಳಿತಾಧಿಕಾರಿಯನ್ನು ನೇಮಿಸಬೇಕೆಂದು ಒತ್ತಾಯಿಸಿದರು.ಕನ್ನಡಪರ ಹೋರಾಟಗಾರ ಕೆ.ಎನ್.ಲಿಂಗೇಗೌಡ ಮಾತನಾಡಿದರು. ಈ ಸಂದರ್ಭದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ, ಭಾರತ ವಿಕಾಸ ಪರಿಷತ್ ಪ್ರಾಂತ್ಯ ಸಂಘಟನಾ ಕಾರ್ಯದರ್ಶಿ ವಸಂತಕುಮಾರ್ , ಎಸ್. ಡಿ. ಎಂ. ಸಿ ಸಮನ್ವಯ ಸಮಿತಿ ರಾಜ್ಯ ಉಪಾಧ್ಯಕ್ಷ ನಾಗವಾರ ಶಂಭುಗೌಡ, ನೇಗಿಲಯೋಗಿ ಟ್ರಸ್ಟ್ ಅಧ್ಯಕ್ಷ ಧರಣೇಶ್ ರಾಂಪುರ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಮಾಜಿ ಅಧ್ಯಕ್ಷರಾದ ಎಂ. ಶಿವಮಾದು, ಮತ್ತಿಕೆರೆ ಚೆಲುವರಾಜು, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ. ಸಿ ಮಲ್ಲಯ್ಯ, ಭಾರತ ವಿಕಾಸ ಪರಿಷತ್ ಅಧ್ಯಕ್ಷ ಪುಟ್ಟಸ್ವಾಮಿಗೌಡ (ಡಿಪಿಎಸ್), ರೈತ ಸಂಘದ ರಾಜ್ಯ ಉಪಾಧ್ಯಕ್ಷ ಆಣಿಗೆರೆ ಮಲ್ಲಯ್ಯ, ರೈತ ಸಂಘದ ಜಿಲ್ಲಾಧ್ಯಕ್ಷ, ತಿಮ್ಮೇಗೌಡ, ತಾಲೂಕು ಅಧ್ಯಕ್ಷ ರಾಮೇಗೌಡ ಇತರರು ಇದ್ದರು.

ಪೋಟೊ೩ಸಿಪಿಟಿ೩: ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ವಜಾಗೆ ಆಗ್ರಹಿಸಿ ಕಸಾಪ ಅಜೀವ ಸದಸ್ಯರ ಒಕ್ಕೂಟದಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ