ವಸತಿ ಶಿಕ್ಷಣ ಪ್ರತ್ಯೇಕ ನಿರ್ದೇಶನಾಲಯ ರಚನೆಗೆ ಒತ್ತಾಯ

KannadaprabhaNewsNetwork | Published : Jun 4, 2025 1:22 AM
ಪ್ರತ್ಯೇಕ ವಸತಿ ಶಿಕ್ಷಣ ನಿರ್ದೇಶನಾಲಯ ರಚನೆಗೆ ಒತ್ತಾಯಿಸಿ ವಸತಿ ಶಾಲೆಗಳ ನೌಕರರ ಸಂಘದಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಪ್ರತ್ಯೇಕ ವಸತಿ ಶಿಕ್ಷಣ ನಿರ್ದೇಶನಾಲಯ ರಚನೆಗೆ ಒತ್ತಾಯಿಸಿ ವಸತಿ ಶಾಲೆಗಳ ನೌಕರರ ಸಂಘದಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಯಿತು.

ರಾಜ್ಯದಲ್ಲಿ 6400ಕ್ಕೂ ಹೆಚ್ಚಿನ ಕಾಯಂ ಸಿಬ್ಬಂದಿ ಇದ್ದೇವೆ. ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ವಸತಿ ಶಾಲೆಗಳ ನಿರ್ವಹಣೆಗಾಗಿ ಕರ್ನಾಟಕ ವಸತಿ ಶಿಕ್ಷಣ ನಿರ್ದೇಶನಾಲಯ ಸ್ಥಾಪಿಸಬೇಕು. ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಅಧೀನದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ರಾಜ್ಯಾದ್ಯಂತ 823 ವಸತಿ ಶಾಲೆ, ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳು ವಸತಿ ಶಿಕ್ಷಣವನ್ನು ಉಚಿತವಾಗಿ ಪಡೆಯುತ್ತಿದ್ದಾರೆ. ಎಲ್ಲ ವಸತಿ ಶಾಲೆಗಳು ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರತಿ ವರ್ಷವೂ ಉತ್ತಮ ಫಲಿತಾಂಶ ನೀಡುತ್ತಾ ಬರುತ್ತಿವೆ. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ಶಾಲೆಗಳನ್ನು 2001-02ನೇ ಸಾಲಿನಿಂದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ನಿರ್ವಹಣೆ ಮಾಡಲಾಗುತ್ತಿತ್ತು. ಆದರೆ ಅನುದಾನ ಬಿಡುಗಡೆ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿರುವುದರಿಂದ ಸರ್ಕಾರದ ಯೋಜನೆಯನ್ನು ಸಮರ್ಪಕ ಮತ್ತು ಸಕಾಲದಲ್ಲಿ ಬಳಕೆಯಾಗದೆ ವಸತಿ ಶಾಲೆಯ ವಿದ್ಯಾರ್ಥಿಗಳು ಹಲವಾರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪರಿಹಾರ ಸಿಕ್ಕಿಲ್ಲ. ವಸತಿ ಶಾಲೆಗಳ ನೌಕರರ ಸಂಘದಿಂದ ಮೇ 26ರಿಂದ 28ರವರೆಗೆ ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ಸಂವಿಧಾನಾತ್ಮಕ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಮೇ 29ರಂದು ವಸತಿ ಶಾಲೆಯಲ್ಲಿ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗಿತ್ತು. ಮೇ 30ರಂದು ತರಗತಿಗಳ ಬಹಿಷ್ಕಾರ ಮಾಡಿ ಅಸಹಕಾರ ವ್ಯಕ್ತಪಡಿಸಿದ್ದೆವು. ಮೇ 31ರಂದು ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಆದರೂ ನಮ್ಮ ಬೇಡಿಕೆಗಳಿಗೆ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ವಸತಿ ಶಿಕ್ಷಣ ನಿರ್ದೇಶನಾಲಯ ರಚನೆ ಅಥವಾ ಎಸ್ಸಿ, ಎಸ್ಟಿ, ಒಬಿಸಿ ವಸತಿ ಶಾಲೆಗಳನ್ನು ಸಿಬ್ಬಂದಿಗಳೊಂದಿಗೆ ಸಂಬಂಧಿಸಿದ ಇಲಾಖೆಗಳ ವಶಕ್ಕೆ ನೀಡುವುದು. ನಗದು ರಹಿತ ಚಿಕಿತ್ಸೆಗಾಗಿ ಜ್ಯೋತಿ ಸಂಜೀವಿನಿ ಅನುಷ್ಠಾನ, ಮರಣ ಮತ್ತು ನಿವೃತ್ತಿ ಉಪದಾನ ಸೌಲಭ್ಯ ಒದಗಿಸಬೇಕು. ಮನೆ ಬಾಡಿಗೆ ಭತ್ಯೆ ಕಡಿತದಿಂದ ವಿನಾಯಿತಿ ನೀಡಬೇಕು. ಹೆಚ್ಚುವರಿ ಕಾರ್ಯಭಾರ ಇರುವುದರಿಂದ ಶೇ.10 ವಿಶೇಷ ಭತ್ಯೆ ಮಂಜೂರಾತಿ ಮಾಡಬೇಕು ಎಂದು ಒತ್ತಾಯಿಸಿದರು.

ಸಂಘದ ಗೌರಾವಾಧ್ಯಕ್ಷ ಎ.ಎಂ. ಗಂಗಾಧರ, ಅಧ್ಯಕ್ಷ ಈ.ಉಮೇಶ್, ಪದಾಧಿಕಾರಿಗಳಾದ ಶಾರದಾ, ದೀಲಿಪ್ ಕುಮಾರ್, ಗೋಪಿನಾಥ, ತುಳಚಾ ನಾಯ್ಕ, ಅಶೋಕ್‌, ಮೋಹನ್ ಕುಮಾರ್, ರಾಜಪ್ಪ, ದೇವಿಕಾ ಕೆ.ಜೋಗಿ, ಆರ್.ಲಕ್ಷ್ಮಿ ಮತ್ತಿತರರಿದ್ದರು.