ಮಂಜುನಾಥ ಸಾಯೀಮನೆ
ಶಿರಸಿ:ಮಲೆನಾಡಿನ ಕೃಷಿಕರ ತಲೆ ಮೇಲೆ ಮಾತ್ರ ಕಾಣಸಿಗುವ, ಈ ಹಾಳೆ ಟೊಪ್ಪಿಗೆ ಹಾಕಿಕೊಂಡವರನ್ನು ಕೃಷಿಕರು, ಅದರಲ್ಲೂ ವಿಶೇಷವಾಗಿ ಮಲೆನಾಡ ಕೃಷಿಕರು ಎಂದು ಗುರುತಿಸಲಾಗುತ್ತಿದೆ. ಈ ಹಾಳೆ ಟೊಪ್ಪಿಗೆಗೆ ಈಗ ಒಮ್ಮೆಲೇ ಬೇಡಿಕೆ ಬಂದಿದೆ. ಆದರೆ, ಲಭ್ಯತೆ ಮಾತ್ರ ಕಡಿಮೆ.ಹೌದು, ವಿಶೇಷವಾಗಿ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಕೃಷಿಕರು ಮಾತ್ರ ಅಡಕೆ ಹಾಳೆ ಟೊಪ್ಪಿ ಬಳಸುತ್ತಾರೆ. ಬೈಕ್ ಸವಾರರು ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸುವಂತೆ ಮಲೆನಾಡಿನ ಅನೇಕ ಕೃಷಿಕರು ಯಾವುದೇ ಕೆಲಸಕ್ಕೆ ತೆರಳಲಿ, ತಲೆಯ ಮೇಲೆ ಹಾಳೆ ಟೊಪ್ಪಿ ಧರಿಸಿಯೇ ತೆರಳುತ್ತಾರೆ.ಕ್ವಿಂಟಲ್ ತೂಕ ತೂಗುವ ಭಾರದ ಗೊಬ್ಬರದ ಚೂಳಿ ಇರಲಿ, ಚೂಳಿಯ ತುಂಬ ಇರುವ ಅಡಕೆ ಗೊನೆಗಳಿರಲಿ, ಇಲ್ಲಿಯ ಕೃಷಿಕರು ತಲೆಯ ಮೇಲೆ ಹಾಳೆ ಟೊಪ್ಪಿಯೊಂದಿದ್ದರೆ ಭಾರ ಹೊರಲು ಸಿದ್ಧ. ಗಟ್ಟಿ ಆಳುಗಳಷ್ಟೇ ಹಾಳೆ ಟೊಪ್ಪಿಗೆಯೂ ಬಲಿಷ್ಠ.ಸಾಮಾನ್ಯವಾಗಿ ಡಿಸೆಂಬರ್ ತಿಂಗಳು ಬಂತೆಂದರೆ ಕೂಲಿ ಕಾರ್ಮಿಕರು ತಮ್ಮ ಹಳೆಯ ಹಾಳೆ ಟೊಪ್ಪಿಗೆ ಬದಿಗಿಟ್ಟು ಹೊಸ ಹಾಳೆ ಟೊಪ್ಪಿಗೆ ಖರೀದಿಸಲು ಉತ್ಸುಕರಾಗುತ್ತಾರೆ. ಕೆಲಸದ ದಿನಗಳು, ಅಡಕೆ ಗೊನೆ ಇಳಿಸುವ ಕಾರ್ಯ ಇನ್ನು ಆರಂಭವಾಗುವುದರಿಂದ ಅದಕ್ಕೆ ಸಿದ್ಧಗೊಳ್ಳುವಿಕೆಯಲ್ಲಿ ಹೊಸ ಟೊಪ್ಪಿಗೆಯ ಖರೀದಿಯೂ ಒಂದಾಗಿದೆ. ಗ್ರಾಮೀಣ ಪ್ರದೇಶದ ಕೆಲವೇ ಆಯ್ದ ಅಂಗಡಿಗಳಲ್ಲಿ ಆಗೊಮ್ಮೆ ಈಗೊಮ್ಮೆ ಹಾಳೆ ಟೊಪ್ಪಿಗೆ ಮಾರಾಟಕ್ಕೆ ಬರುತ್ತದೆಯಾದರೂ, ಅಷ್ಟೇ ತ್ವರಿತವಾಗಿ ಖಾಲಿಯೂ ಆಗುತ್ತದೆ. ₹ ೭೫ ರಿಂದ ₹ ೧೦೦ ವರೆಗೆ ಮಾರುಕಟ್ಟೆ ದರವಿದ್ದರೂ ಖರೀದಿಯೂ ಅಷ್ಟೇ ಜೋರಾಗಿರುತ್ತದೆ.ತಯಾರಕರು ಕ್ಷೀಣ!
ಹಾಳೆ ಟೊಪ್ಪಿಗೆ ಇಷ್ಟೆಲ್ಲ ಬೇಡಿಕೆ ಇದ್ದರೂ ತಯಾರಕರ ಸಂಖ್ಯೆ ಮಾತ್ರ ಮಲೆನಾಡಿನಲ್ಲಿ ಕೈ ಬೆರಳೆಣಿಕೆಯಷ್ಟಿದೆ. ಗ್ರಾಮದಲ್ಲಿ ಒಬ್ಬರು ಅಥವಾ ಇಬ್ಬರು ಹಿರಿತಲೆಗಳಿಗೆ ಮಾತ್ರ ಈ ಹಾಳೆ ಟೊಪ್ಪಿಗೆ ಕಟ್ಟುವ ಕಲೆ ತಿಳಿದಿದೆ.ಎಲ್ಲ ಹಾಳೆಗಳಿಂದಲೂ ಟೊಪ್ಪಿ ತಯಾರಿಸಲು ಸಾಧ್ಯವಿಲ್ಲ. ಆಗಷ್ಟೇ ಅಡಕೆ ಮರದಲ್ಲಿ ಹೊಸ ಸಿಂಗಾರ ಅರಳಿ, ಅದಕ್ಕೆ ಆವರಿಸಿದ್ದ ಮೆದು ಹಾಳೆಗಳಿಂದ ಮಾತ್ರ ಹಾಳೆ ಟೊಪ್ಪಿ ತಯಾರಿಸಲು ಸಾಧ್ಯವಿದೆ. ಇಂತಹ ಆಯ್ದ ಹಾಳೆಗಳನ್ನು ಹದಗೊಳಿಸಿದ ಬಳಿಕ ಒಂದು ಟೊಪ್ಪಿಗೆ ಎರಡು ಹಾಳೆ ಬಳಸಲಾಗುತ್ತದೆ. ಒಡೆದು ಹೋಗದಂತೆ ನಾಜೂಕಾಗಿ ಎರಡೂ ತುದಿಗಳಲ್ಲಿ ನೆರಿಗೆ ಮಾಡಲಾಗುತ್ತದೆ. ಬಳಿಕ ವಿಶೇಷ ದಾರದಿಂದ ಟೊಪ್ಪಿಯ ಎರಡೂ ಕಡೆ, ವಿಶೇಷ ಕೆಂಪು ದಾರದಿಂದ ನೇಯ್ಗೆ ಮಾಡಿ ಪುನಃ ಸಂಸ್ಕರಣೆ ಮಾಡುತ್ತಾರೆ. ಒಂದು ಟೊಪ್ಪಿಯ ತಯಾರಿಕೆ ಪೂರ್ಣಗೊಳಿಸಲು ಮೂರರಿಂದ ನಾಲ್ಕು ದಿನಗಳ ಸಮಯ ಹಿಡಿಯುತ್ತದೆ.ಬಳಕೆಗೂ ಅತಿ ಹಗುರವಾದ ಹಾಳೆ ಟೊಪ್ಪಿಗಳು ಭಾರ ಹೊತ್ತಾಗ ತಲೆಯ ಮೇಲೆ ಒತ್ತಡ, ಉರಿ ಉಂಟು ಮಾಡುವುದಿಲ್ಲ. ರಣ ಬೇಸಿಗೆಯಾದರೂ ಹಾಳೆ ಟೊಪ್ಪಿ ಹಾಕಿ ನಡೆದರೆ ತಲೆಗೆ ತಂಪನೆಯ ಅನುಭವವನ್ನೇ ನೀಡುತ್ತದೆ.ಹಾಳೆ ಟೊಪ್ಪಿ ಕಟ್ಟುವ ಅಪರೂಪದ ಕಲೆ ಮಲೆನಾಡಿನ ಯುವಕರಿಗೆ ಕೈಗೆ ಹತ್ತುತ್ತಿಲ್ಲ, ಅವರಿಗೆ ಅದರಲ್ಲಿ ಆಸಕ್ತಿಯೂ ಇಲ್ಲ. ಆದರೆ, ಬೇಡಿಕೆ ಮಾತ್ರ ಹೆಚ್ಚು. ಕಣ್ಣು ಮಂಜಾದ ಹಿರಿ ತಲೆಗಳಿಗೆ ಬೇಡಿಕೆಯ ಕಾಲು ಭಾಗದಷ್ಟೂ ಹಾಳೆ ಟೊಪ್ಪಿಗೆ ಸಿದ್ಧಪಡಿಸಲಾಗುತ್ತಿಲ್ಲ. ಗ್ರಾಮೀಣ ಪ್ರದೇಶದ ಕಂಚಿಕೈ, ಹೆಗ್ಗರಣಿ, ಹೇರೂರು ಇನ್ನು ಕೆಲವೇ ಪ್ರದೇಶದ ಒಂದೆರಡು ಅಂಗಡಿಗಳಲ್ಲಿ ಮಾತ್ರ ಹಾಳೆ ಟೊಪ್ಪಿ ಆಗೊಮ್ಮೆ ಈಗೊಮ್ಮೆ ಮಾರಾಟಕ್ಕೆ ಲಭ್ಯವಾಗುತ್ತಿದೆ.ಜಿಲ್ಲೆಯ ಪ್ರವಾಸಿ ಸ್ಥಳಗಳಲ್ಲಿ ಈ ಹಾಳೆಟೊಪ್ಪಿಗೆ ಮಾರಾಟ ಮಾಡಲು ಉತ್ತಮ ಮಾರುಕಟ್ಟೆ ಇದೆ. ನಮ್ಮ ಮಲೆನಾಡಿನ ಈ ಅಪರೂಪದ ಸಂಗತಿಯನ್ನು ಹೊರ ಜನತೆಗೆ ತಲುಪಿಸಲು ಉತ್ತಮ ವೇದಿಕೆಯೂ ಇದೆ. ಆದರೆ ಟೊಪ್ಪಿ ಕಟ್ಟುವ ಈ ಕಲೆ ಹಿರಿ ತಲೆಗಳಿಗೆ ಮಾತ್ರ ಸೀಮಿತಗೊಂಡು ಉತ್ತಮ ಅವಕಾಶವೊಂದು ಕೈ ತಪ್ಪಿದೆ. ಹಾಳೆ ಟೊಪ್ಪಿಗೆ ಮಾಡಿಕೊಡುವಂತೆ ಅನೇಕರು ಕೇಳುತ್ತಾರೆ. ಆದರೆ, ಇಳಿ ವಯಸ್ಸಿನಲ್ಲಿ ಬೇಡಿಕೆಯ ಪ್ರಮಾಣದ ಕಾಲು ಭಾಗದಷ್ಟೂ ಹಾಳೆ ಟೊಪ್ಪಿ ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ ಎಂದು ತಯಾರಕರಾದ ನಾರಾಯಣ ಪುಟ್ಟಾ ಕಾನಡೆ ತಿಳಿಸಿದ್ದಾರೆ.