ರಾಜ್ಯದಲ್ಲಿ ನೀರು ಬಳಕೆದಾರರ ಸಂಘಗಳ ಬಲವರ್ಧನೆಗೆ ಟಿ.ಎಂ.ವಿಜಯಭಾಸ್ಕರ್ ವರದಿಯನ್ನು ಅನುಷ್ಠಾನಕ್ಕೆ ತರುವಂತೆ ಕೆಆರ್‌ಎಸ್ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾ ಮಂಡಳ ನಿರ್ದೇಶಕ ಎಂ. ಯೋಗೀಶ್ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯದಲ್ಲಿ ನೀರು ಬಳಕೆದಾರರ ಸಂಘಗಳ ಬಲವರ್ಧನೆಗೆ ಟಿ.ಎಂ.ವಿಜಯಭಾಸ್ಕರ್ ವರದಿಯನ್ನು ಅನುಷ್ಠಾನಕ್ಕೆ ತರುವಂತೆ ಕೆಆರ್‌ಎಸ್ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾ ಮಂಡಳ ನಿರ್ದೇಶಕ ಎಂ. ಯೋಗೀಶ್ ಒತ್ತಾಯಿಸಿದರು.ನಿಗಮಗಳು ಸಂಘಗಳಿಗೆ ನೀರಿನ ದರ ಸಂಗ್ರಹಿಸುವ ಜವಾಬ್ದಾರಿ ನೀಡುವುದು. ಅವುಗಳ ನಿರ್ವಹಣೆಗೆ ಪ್ರತಿ ಹೆಕ್ಟೇರ್‌ಗೆ ೪೦ ರು. ಗಳನ್ನು ಸಂಗ್ರಹಿಸಿದ ಮೊತ್ತದ ಶೇ.೨೦ರಷ್ಟನ್ನು ಆಡಳಿತಾತ್ಮಕ ವೆಚ್ಚಗಳಿಗೆ ಉಳಿಸಿಕೊಂಡು ಉಳಿದ ಹಣವನ್ನು ಸರ್ಕಾರಕ್ಕೆ ಪಾವತಿಸುವುದು. ನೀರಿನ ಕರ ಸಂಗ್ರಹಣೆಗೆ ನಿಗಮಗಳಲ್ಲಿರುವ ಕಂದಾಯ ನಿರೀಕ್ಷಕರ ಹುದ್ದೆಗಳನ್ನು ರದ್ದುಪಡಿಸಿ ಅದರಿಂದಾಗುವ ಉಳಿತಾಯವು ನೀರು ಬಳಕೆದಾರರ ಸಹಕಾರ ಸಂಘಕ್ಕೆ ನಿರ್ವಹಣಾ ಅನುದಾನವಾಗಿ ನೀಡಲು ಕ್ರಮ ವಹಿಸುವಂತೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಪಡಿಸಿದರು.ನೀರು ಬಳಕೆದಾರರ ಸಹಕಾರ ಸಂಘಗಳಿಗೆ ೨೦೧೮ ಮತ್ತು ೨೦೧೯ರಲ್ಲಿ ತಲಾ ೧ ಲಕ್ಷ ರು. ನಿರ್ವಹಣಾ ಅನುದಾವನ್ನು ನೀಡಲಾಗಿತ್ತು. ಕೋವಿಡ್ ವರ್ಷಗಳಲ್ಲಿ ಅದನ್ನು ಸ್ಥಗಿತಗೊಳಿಸಲಾಗಿದ್ದು, ಈ ಅನುದಾನವನ್ನು ವಾರ್ಷಿಕ ತಲಾ ೨ ಲಕ್ಷ ರು. ಗಳಿಗೆ ಹೆಚ್ಚಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ನಿಗಮಗಳಲ್ಲಿ ಹೆಚ್ಚಿನ ಬಜೆಟ್ ಹಂಚಿಕೆ ಲಭ್ಯವಿರುವುದರಿಂದ ಹಣವನ್ನು ನಿಗಮಗಳ ಮೂಲಕ ಹಂಚಿಕೆ ಮಾಡುವಂತೆ ಒತ್ತಾಯಿಸಿದರು.ಅಚ್ಚುಕಟ್ಟು ಪ್ರದೇಶದಲ್ಲಿ ೫ ಲಕ್ಷ ರು.ಗಿಂತ ಕಡಿಮೆ ವೆಚ್ಚದ ಕಾಲುವೆಗಳ ನಿರ್ವಹಣೆ ಸಿವಿಲ್ ಕಾಮಗಾರಿಗಳನ್ನು ನೀರು ಬಳಕೆದಾರರ ಸಹಕಾರ ಸಂಘಗಳ ಮೂಲಕ ಮಾತ್ರ ಕಾರ್ಯಗೊಳಿಸುವಂತೆ ನಿಗಮಗಳಿಗೆ ಆದೇಶ ಹೊರಡಿಸಿ ನಿಷ್ಕ್ರೀಯವಾಗಿರುವ ನೀರು ಬಳಕೆದಾರರ ಸಹಕಾರ ಸಂಘಗಳನ್ನು ಪುನಶ್ಚೇತನಗೊಳಿಸುವಂತೆ ಮನವಿ ಮಾಡಿದರು.ನೀರು ಬಳಕೆದಾರರ ಸಂಘಗಳು ಸಕ್ರಿಯವಾದಾಗ ಇಲಾಖೆಗಳ ಜವಾಬ್ದಾರಿ ಕಡಿಮೆಯಾಗುತ್ತದೆ. ಉತ್ತಮ ನಿರ್ವಹಣೆಗೆ ತಮ್ಮದೇ ಆದ ಸಂಪನ್ಮೂಲಗಳನ್ನು ಸಂಗ್ರಹಿಸುವ ಮೂಲಕ ಸಂಘಗಳಿಗೆ ಸರ್ಕಾರದ ಅನುದಾನ ಪೂರಕವಾಗುತ್ತದೆ. ವಿಎಸ್‌ಎಸ್‌ಎನ್, ಪಿಎಸಿಎಸ್, ಹಾಪ್‌ಕಾಮ್ಸ್‌ಗಳು ಕೈಗೊಂಡಿರುವ ರಸಗೊಬ್ಬರ ಮತ್ತು ಬಿತ್ತನೆ ಬೀಜ ವಿತರಣೆಯಂತಹ ಕೆಲವು ಆರ್ಥಿಕ ಚಟುವಟಿಕೆಗಳನ್ನು ಸಂಘಗಳು ಮಾಡಬಹುದು. ಗೋದಾಮು ನಿರ್ಮಾಣದಂತಹ ಚಟುವಟಿಕೆಗಳನ್ನು ಉತ್ತೇಜಿಸುವುದು. ಸಕ್ರಿಯ ಹಾಗೂ ಸಮರ್ಥ ಸಂಘಗಳಿಗೆ ಷೇರು ಬಂಡವಾಳಕ್ಕೆ ಅಥವಾ ಬೀಜ-ಹಣವನ್ನು ಒದಗಿಸುವ ಯೋಜನೆಯನ್ನು ಕಾರ್ಯಗತಗೊಳಿಸಲು ಜಲಸಂಪನ್ಮೂಲ ಇಲಾಖೆ ಪರಿಗಣಿಸಬಹುದು ಎಂದು ಹೇಳಿದರು.ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು ರೈತರಿಗೆ ಸಾಲ ವಿತರಿಸುವಾಗ ನೀರು ಬಳಕೆದಾರರ ಸಹಕಾರ ಸಂಘಗಳಿಂದ ಬೇ-ಬಾಕಿ ಪ್ರಮಾಣ ಪತ್ರವನ್ನು ಪಡೆದುಕೊಳ್ಳುವಂತೆ ಸೂಚಿಸಬೇಕು.ಕೇಂದ್ರ ಸರ್ಕಾರದ ಧನ ಸಹಾಯದ ಕಾರ್ಯಕ್ರಮದಲ್ಲಿ ನೀರು ಬಳಕೆದಾರರ ಸಂಘಗಳಿಗೆ ಮೂಲಭೂತ ಸೌಕಾರ್ಯಗಳನ್ನು ಕಲ್ಪಿಸಲು ಹೆಚ್ಚಿನ ಅನುದಾನ ಬಿಡುಗಡೆ ಮಾಡುವುದು ಅಗತ್ಯವಿದೆ ಎಂದು ಒತ್ತಾಯಿಸಿದರು.೨೦೦೦ನೇ ಇಸವಿಯಲ್ಲಿ ಕರ್ನಾಟಕ ಸರ್ಕಾರ ನೀರಾವರಿ ಕಾಯಿದೆಗೆ ತಿದ್ದುಪಡಿ ತರುವುದರೊಂದಿಗೆ ನೀರು ಬಳಕೆದಾರರ ಸಹಕಾರ ಸಂಘಗಳಿಗೆ ಬಲವರ್ಧನೆಗೆ ಸಹಕಾರಿಯಾಗಿದೆ. ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಂತೆ ಒತ್ತಾಯಿಸಿದರು.ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ನೇತೃತ್ವದ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ೬ನೇ ವರದಿಯು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡರೆ ನೀರು ಬಳಕೆದಾರರ ಸಹಕಾರ ಸಂಘಗಳು ರಾಜ್ಯದಲ್ಲಿ ಸಮರ್ಪಕವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ.
ನೀರು ಬಳಕೆದಾರರ ಸಹಕಾರ ಸಂಘಗಳ ಅಧ್ಯಕ್ಷ ಎಂ.ಇ. ಮಹೇಶ, ರವಿ, ಚನ್ನಪ್ಪ, ಎಂ.ವಿ. ಸುರೇಶ, ಚಂದ್ರಶೇಖರ್ ಗೋಷ್ಠಿಯಲ್ಲಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.