ದೌರ್ಜನ್ಯ ಮಾಡಿದ ಆರೋಪಿಗಳ ಶೀಘ್ರ ಬಂಧಿಸಲು ಆಗ್ರಹ

KannadaprabhaNewsNetwork |  
Published : Mar 27, 2026, 02:00 AM IST
ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಈ ಕುರಿತು ಸಮಗ್ರ ತನಿಖೆ ನಡೆಸಿ, ಪ್ರಕರಣದಲ್ಲಿ ಹೆಸರಿಸಲಾದ ನಿರಪರಾಧಿಗಳ ಹೆಸರನ್ನು ಕೂಡಲೇ ಕೈಬಿಡಬೇಕು. ಪೊಲೀಸ್ ಇಲಾಖೆಯು ನಿಷ್ಪಕ್ಷಪಾತ ತನಿಖೆ ನಡೆಸಿ ವಾಲ್ಮೀಕಿ ಸಮಾಜದ ನೊಂದ ಕುಟುಂಬಗಳಿಗೆ ರಕ್ಷಣೆ ಒದಗಿಸಬೇಕು.

ಗದಗ: ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ವಾಲ್ಮೀಕಿ ನಾಯಕ ಸಮುದಾಯದವರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಹಾಗೂ ದೌರ್ಜನ್ಯವೆಸಗಿದ ಆರೋಪಿಗಳನ್ನು ಕೂಡಲೇ ಬಂಧಿಸಿ ನೊಂದವರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಜಿಲ್ಲಾ ವಾಲ್ಮೀಕಿ ನಾಯಕ ಸೇವಾ ಸಂಘದಿಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಗ್ರಾಮದಲ್ಲಿ ಶಾಂತಿಯುತವಾಗಿ ಸಹಬಾಳ್ವೆಯಿಂದ ಬದುಕುತ್ತಿದ್ದ ವಾಲ್ಮೀಕಿ ಸಮಾಜದ ಕಾಲನಿಗೆ ನೂರಾರು ಜನ ಪರಿಶಿಷ್ಟ ಜಾತಿಯ ಕಿಡಿಗೇಡಿಗಳು ಮಾರಕಾಸ್ತ್ರಗಳೊಂದಿಗೆ ಏಕಾಏಕಿ ನುಗ್ಗಿ ಕ್ಷುಲ್ಲಕ ಕಾರಣಕ್ಕೆ ಹಿರಿಯರು ಮತ್ತು ಮಹಿಳೆಯರ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ.

ಇದು ಪೂರ್ವಯೋಜಿತ ಕೃತ್ಯದಂತೆ ಕಂಡುಬರುತ್ತಿದ್ದು, ಸಮಾಜದ ನೆಮ್ಮದಿಯನ್ನು ಹಾಳು ಮಾಡುವ ಪ್ರಯತ್ನವಾಗಿದೆ. ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ವೈಯಕ್ತಿಕ ದ್ವೇಷದ ಹಿನ್ನೆಲೆ ಘಟನೆಗೆ ಯಾವುದೇ ಸಂಬಂಧವಿಲ್ಲದ ನಿರಪರಾಧಿಗಳ ಹೆಸರನ್ನು ಪ್ರಕರಣದಲ್ಲಿ ವಿನಾಕಾರಣ ಸೇರಿಸಲಾಗಿದೆ.

ಈ ಕುರಿತು ಸಮಗ್ರ ತನಿಖೆ ನಡೆಸಿ, ಪ್ರಕರಣದಲ್ಲಿ ಹೆಸರಿಸಲಾದ ನಿರಪರಾಧಿಗಳ ಹೆಸರನ್ನು ಕೂಡಲೇ ಕೈಬಿಡಬೇಕು. ಪೊಲೀಸ್ ಇಲಾಖೆಯು ನಿಷ್ಪಕ್ಷಪಾತ ತನಿಖೆ ನಡೆಸಿ ವಾಲ್ಮೀಕಿ ಸಮಾಜದ ನೊಂದ ಕುಟುಂಬಗಳಿಗೆ ರಕ್ಷಣೆ ಒದಗಿಸಬೇಕು. ಒಂದು ವೇಳೆ ಆರೋಪಿಗಳ ಬಂಧನಕ್ಕೆ ವಿಳಂಬ ನೀತಿ ಅನುಸರಿಸಿದರೆ ಅಥವಾ ನಿರಪರಾಧಿಗಳಿಗೆ ಕಿರುಕುಳ ನೀಡಿದರೆ, ರಾಜ್ಯಾದ್ಯಂತ ಇರುವ ವಾಲ್ಮೀಕಿ ಸಮಾಜ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಯಿತು.ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಎಂ. ಬೆಳಧಡಿ, ಯುವ ಘಟಕದ ಜಿಲ್ಲಾಧ್ಯಕ್ಷ ಅನಿಲಕುಮಾರ ಸಿದ್ದಮ್ಮನಹಳ್ಳಿ ಸೇರಿದಂತೆ ಸಮಾಜದ ನೂರಾರು ಮಹಿಳೆಯರು ಹಾಗೂ ಮುಖಂಡರು ಇದ್ದರು.

ತಾಲೂಕು ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ

ಮುಂಡರಗಿ: ಕಳೆದ ಸೋಮವಾರ ಸಂಜೆ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ‌ ಎರಡು‌ ಕೋಮಿನ ನಡುವೆ ಜರುಗಿದ ಗಲಾಟೆಯಲ್ಲಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗುರುವಾರ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಎಂ. ಗಂಗಪ್ಪ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ, ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ತಾಲೂಕು‌ ಪಂಚಾಯಿತಿ ಇಒ ವಿಶ್ವನಾಥ ಹೊಸಮನಿ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಉದಯಕುಮಾರ ಯಲಿವಾಳ ಉಪಸ್ಥಿತರಿದ್ದರು. ಇದಕ್ಕೂ ಪೂರ್ವದಲ್ಲಿ ಜಿಲ್ಲಾಧಿಕಾರಿಯವರು ಚಿಕ್ಕವಡ್ಡಟ್ಟಿ ಗ್ರಾಮಕ್ಕೆ ತೆರಳಿ ಎರಡೂ ಸಮುದಾಯದವರನ್ನು ಭೇಟಿ ಮಾಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಲ ಬಳಿಯುವ ಪದ್ಧತಿ ನಿಷೇಧ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಿ-ಜಿಲ್ಲಾಧಿಕಾರಿ
ಅಕ್ರಮ ಸಂಬಂಧವೇ ಮಾಜಿ ಶಾಸಕರ ಮಗನ ಕೊಲೆಗೆ ಕಾರಣ