ಧಾರವಾಡ:

ತಾಲೂಕಿನ ರಾಮಾಪುರ ಬಳಿ ಕಾರಿನಲ್ಲಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಬೈಲಹೊಂಗಲದ ಮಾಜಿ ಶಾಸಕರ ಪುತ್ರ ರಾಜು ಬೋಳಶೆಟ್ಟಿ ಅವರ ಕೊಲೆ ಪ್ರಕರಣವನ್ನು ಒಂದೇ ದಿನದಲ್ಲಿ ಗ್ರಾಮೀಣ ಪೊಲೀಸರ ಭೇದಿಸಿದ್ದಾರೆ.

ಈ ಕುರಿತು ಗುರುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಪೊಲೀಸ್‌ ವರಿಷ್ಠಾಧಿಕಾರಿ ಗುಂಜನ್ ಆರ್ಯ, ರಾಜು ಅವರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಬೈಲಹೊಂಗಲ ತಾಲೂಕಿನ ಬಿದರಗಡ್ಡಿಯ ಮುನೇರಾ ಶರೀಫ ದಿಲ್ಲುನಾಯ್ಕ (32) (ಶಾಲೆಯಲ್ಲಿ ಅಡುಗೆ ಮಾಡುವವಳು) ಅವಳಿಂದಲೇ ಕೊಲೆ ನಡೆದಿದೆ. ಈ ಕೃತ್ಯಕ್ಕೆ ತನ್ನ ಅಪ್ರಾಪ್ರ ಪುತ್ರನನ್ನು ಸಹ ಈಕೆಯು ಬಳಸಿಕೊಂಡಿದ್ದು ಆತನು ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಿದ್ದೇವೆ. ಮೃತ್ಯುಂಜಯ ದೇವಪ್ಪಾ ಕಂಬಾರ (26) ಹಾಗೂ ಅದೇ ಗ್ರಾಮದ ಬಸವರಾಜ ರಾಮಪ್ಪ ಪೂಜೇರಿ (30) ಎಂಬಾತನನ್ನು ಬಂಧಿಸಿದ್ದೇವೆ ಎಂದರು.

ಎರಡು ವರ್ಷಗಳಿಂದ ಮುನೇರಾ ಜತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಕೊಲೆಯಾದ ರಾಜು ಬೋಳಶೆಟ್ಟಿ, ಇದೇ ಕಾರಣದಿಂದ ಇಬ್ಬರ ಮಧ್ಯೆ ವೈಮನಸ್ಸು ಬಂದು ಮಾ. 23ರ ರಾತ್ರಿ 8.30ಕ್ಕೆ ಕೊಲೆಯಾಗಿದ್ದಾನೆ. ಕೊಲೆಗೆ ಬಳಸಿದ ಚಾಕು ಹಾಗೂ ಸಲಾಖೆ ದೊರೆತಿವೆ. ಮೃತದೇಹ ಹೂಳಲು ಚಿಂತನೆ ಮಾಡಿ ಕೊನೆಗೆ ಆರೋಪಿ ಮೃತ್ಯುಂಜಯ ಅವರಿಗೆ ಗೊತ್ತಿರುವ ಧಾರವಾಡ ತಾಲೂಕಿನ ರಾಮಾಪೂರಕ್ಕೆ ರಾಜುವಿನ ಕಾರಿನಲ್ಲಿಯೇ ಬಂದು ಅಲ್ಲಿಯ ನಿರ್ಜನ ಪ್ರದೇಶದಲ್ಲಿ ಬೆಂಕಿ ಹಚ್ಚಿ ಸಾಕ್ಷ್ಯ ನಾಶ ಮಾಡಲು ಯೋಜಿಸಿದ್ದರು ಎಂದು ತಿಳಿಸಿದರು.

ಘಟನೆ ಬಗ್ಗೆ ಮಾಹಿತಿ ಬಂದ ಕೂಡಲೇ ನಾಲ್ಕು ತಂಡ ರಚಿಸಿ ತನಿಖೆ ಮಾಡಲಾಗಿದ್ದು ವಾಹನದ ನಂಬರ್‌ ಪತ್ತೆ ಹಚ್ಚಿ ಮೊದಲು ಕೊಲೆಯಾದ ವ್ಯಕ್ತಿ ಹಾಗೂ ಆತನ ಬಗ್ಗೆ ಮಾಹಿತಿ ಪಡೆದಾಗ, ಆರೋಪಿಗಳನ್ನು ಒಂದೇ ದಿನದಲ್ಲಿ ಪತ್ತೆ ಹಚ್ಚಲು ಸಹಾಯವಾಯಿತು. ಇವರು ಶವ ಸುಡಲು ಪೆಟ್ರೋಲ್ ಬಂಕ್‌ನಿಂದ ಪೆಟ್ರೋಲ್‌ ಒಯ್ದಿರುವುದು, ಅದಕ್ಕಾಗಿ ಬೈಕ್‌ ಬಳಕೆ ಸೇರಿದಂತೆ ಸಿಸಿ ಕ್ಯಾಮೆರಾದಲ್ಲಿ ಎಲ್ಲವೂ ದೊರಕಿದೆ ಎಂದು ಗುಂಜನ್‌ ತಿಳಿಸಿದರು.


ಪ್ರಕರಣ ಭೇದಿಸಲು ಡಿಎಸ್ಪಿ ಶಿವಾನಂದ ಕಟಗಿ, ವಿನೋದ ಮುಕ್ತೆದಾರ, ಗ್ರಾಮೀಣ ಇನ್‌ಸ್ಪೆಕ್ಟರ್‌ ಎಸ್‌.ಎಸ್. ಕಮತಗಿ ತಂಡವು ಉತ್ತಮ ಕಾರ್ಯ ಮಾಡಿದೆ ಎಂದು ಗುಂಜನ್‌ ತಿಳಿಸಿದರು.