ಮುಂಡರಗಿ: ತಾಲೂಕಿನಲ್ಲಿ ಯೂರಿಯಾ ಗೊಬ್ಬರದ ಕೊರತೆ ನೀಗದ ಹಿನ್ನೆಲೆಯಲ್ಲಿ ರೈತರು ಪರದಾಡುವಂತಾಗಿದೆ. ಗೊಬ್ಬರಕ್ಕಾಗಿ ಎದುರು ನೋಡುತ್ತಿರುವ ರೈತರು ಮಂಗಳವಾರ ಗೊಬ್ಬರ ಬರುತ್ತದೆ ಎನ್ನುವ ಮಾಹಿತಿ ಮೇರೆಗೆ ಬೆಳಗ್ಗೆ 5 ಗಂಟೆಯಿಂದಲೇ ಮುಂಡರಗಿ ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ನೂರಾರು ರೈತರು ಸರದಿ ಸಾಲಿನಲ್ಲಿ ನಿಂತು ಕಾಯುತ್ತಿದ್ದರು.
ಯೂರಿಯಾ ಗೊಬ್ಬರಕ್ಕಾಗಿ ತಾಲೂಕಿನ ವಿವಿಧ ಗ್ರಾಮಗಳಿಂದ ಬೆಳ್ಳಂಬೆಳಗ್ಗೆ ಮುಂಡರಗಿ ಪಟ್ಟಣಕ್ಕೆ ಆಗಮಿಸಿದ ಪುರುಷ ಹಾಗೂ ಮಹಿಳಾ ರೈತರು ಬಿಸಿಲು, ಮಳೆ, ಗಾಳಿ ಎನ್ನದೇ ಸರದಿ ಸಾಲಿನಲ್ಲಿ ನಿಂತಿದ್ದು ಕಂಡು ಬಂದಿತು. 10 ಗಂಟೆಯ ನಂತರ ಗೊಬ್ಬರ ವಿತರಣೆ ಪ್ರಾರಂಭವಾದಾಗ ರೈತರಿಂದ ಹೆಚ್ಚಿನ ಪ್ರಮಾಣದಲ್ಲಿ ನೂಕುನುಗ್ಗಲು ಪ್ರಾರಂಭವಾಗಿದೆ.ನಂತರ ಸ್ಥಳಕ್ಕೆ ಆಗಮಿಸಿದ ಸಿಪಿಐ ಮಂಜುನಾಥ ಕುಸಗಲ್ ಹಾಗೂ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಹಾದಿಮನಿ ತಮ್ಮ ಸಿಬ್ಬಂದಿಯೊಂದಿಗೆ ಆಗಮಿಸಿ ಮುಂದೆ ನಿಂತು ಪ್ರತಿ ರೈತರಿಗೆ 2 ಚೀಲದಂತೆ ಗೊಬ್ಬರ ವಿತರಣೆ ಮಾಡಿಸಿದ್ದಾರೆ.
ಸರ್ಕಾರ ರೈತರಿಗೆ ಬೇಡಿಕೆ ಇರುವಷ್ಟು ಯೂರಿಯಾ ಗೊಬ್ಬರಕ್ಕೆ ವ್ಯವಸ್ಥೆ ಮಾಡಿಕೊಡಬೇಕು. ನಾವು ನಿತ್ಯ ಇರುವ ಉದ್ಯೋಗ ಬಿಟ್ಟು ಗೊಬ್ಬರಕ್ಕಾಗಿಯೇ ಬಂದು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ತಕ್ಷಣವೇ ಹೆಚ್ಚಿನ ದಾಸ್ತಾನು ತರಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ರೈತರು ಒತ್ತಾಯಿಸಿದ್ದಾರೆ.ಮಂಗಳವಾರ ಮುಂಡರಗಿ ಟಿಎಪಿಸಿಎಂಎಸ್ ಗೆ 110 ಟನ್ ಯೂರಿಯಾ ಗೊಬ್ಬರ ಬಂದಿತ್ತು. ಅದನ್ನು ಪ್ರತಿ ರೈತರಿಗೆ 2 ಚೀಲದಂತೆ ವಿತರಿಸಲಾಗಿದೆ. ಇನ್ನೂ ಮುಂದಿನ 1-2 ದಿನಗಳಲ್ಲಿ ಗೊಬ್ಬರ ದಾಸ್ತಾನು ಬರಲಿದ್ದು, ಎಲ್ಲ ರೈತರಿಗೂ ವಿತರಿಸಲಾಗುವುದು. ರೈತರು ಸಹಕರಿಸಬೇಕು ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಹಾದಿಮನಿ ತಿಳಿಸಿದ್ದಾರೆ.