ಕಾರವಾರ: ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರ ರಾಜಕಾರಣದಲ್ಲಿದ್ದಾರೆ. ಅವರಿಗೆ ಕರ್ನಾಟಕ ರಾಜಕಾರಣ ಹೊಸದೇನಲ್ಲ. ಖರ್ಗೆ ರಾಜ್ಯ ರಾಜಕಾರಣಕ್ಕೆ ಬರಬಾರದು ಅಂತ ಇದೆಯಾ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್, ಖರ್ಗೆ ಸಿಎಂ ವಿಚಾರವನ್ನು ಜೀವಂತವಾಗಿಟ್ಟಿದ್ದಾರೆ.
ಕಾರವಾರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಬಿಜೆಪಿಯವರಿಗೆ ಹಿಂದುಸ್ತಾನ, ಮುಸ್ಲಿಮರ ಹೊರತು ಪಡಿಸಿದರೆ ಬೇರೇನೂ ಗೊತ್ತಿಲ್ಲ. ಅಸ್ಪೃಶ್ಯತೆ, ಶೋಷಿತ ವರ್ಗಗಳ ಬಗ್ಗೆ ಅವರ್ಯಾರೂ ಮಾತಾಡಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರ ಸಭೆ ಕರೆಯುತ್ತಿರುವುದು ಹೊಸದೇನೂ ಅಲ್ಲ. ಹಿಂದೆಯೂ ಹಲವು ಸಭೆ ನಡೆಸಿದ್ದಾರೆ. ಆರಂಭದಲ್ಲಿ ಜಿಲ್ಲಾವಾರು ಕರೆಯುತ್ತಿದ್ದಾರೆ ಎಂದಷ್ಟೇ ಹೇಳಿದರು.
ಬಾಂಗ್ಲಾ ದೇಶೀಯರನ್ನು ಹೊರಕ್ಕೆ ಕಳುಹಿಸಬೇಕು ಎಂದು ಹೇಳುತ್ತಾರೆ. ಹಾಗಿದ್ದರೆ ಬೇರೆ ದೇಶಗಳಲ್ಲಿ ಹೋಗಿ ಕೆಲಸ ಮಾಡುತ್ತಿರುವ ಹಿಂದೂಗಳನ್ನು ವಾಪಸ್ ಕರೆಸಿಕೊಳ್ಳುತ್ತೀರಾ? ಎಂದು ಬಿಜೆಪಿಯವರನ್ನು ಪ್ರಶ್ನಿಸಿದ ಲಾಡ್, ಇವರ ಸರ್ಕಾರದಲ್ಲಿ ಎಷ್ಟು ಜನರನ್ನು ಹೊರಕ್ಕೆ ಕಳುಹಿಸಿದ್ದಾರೆ ಎಂಬ ಅಂಕಿ ಅಂಶ ಕೊಡುತ್ತಾರಾ? ಎಂದು ಪ್ರಶ್ನಿಸಿದರು.ದೇಶದಲ್ಲಿ ಕಾಂಗ್ರೆಸ್ 70 ವರ್ಷಗಳ ಕಾಲ ಆಡಳಿತ ನಡೆಸಿತ್ತು. ನೆಹರು, ಮಹಾತ್ಮ ಗಾಂಧೀಜಿ ಅವರನ್ನು ಬೈಯ್ಯುತ್ತಾರೆ ಹಾಗೂ ಬಿಜೆಪಿ ಬಂದು 11 ವರ್ಷ ಆಯಿತು. ಇವರು ಹಿಂದೂಗಳಿಗೆ ಏನು ಮಾಡಿದ್ದಾರೆ? 45 ಲಕ್ಷ ಯುವಕರು ಬೇರೆ ಬೇರೆ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನೆಲ್ಲ ವಾಪಸ್ ಕರೆಸಬೇಕಲ್ಲ? ಕಾಂಗ್ರೆಸ್ ಪಕ್ಷಕ್ಕೆ ಬಂದಾಗ ಶೆಟ್ಟರ್ ಅವರೇ ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ಹೇಳಿಕೆ ಕೊಟ್ಟಿದ್ದಾರೆ. ಕಾಂಗ್ರೆಸ್‌ಗೆ ಬರೋಕೆ ಜಗದೀಶ್ ಶೆಟ್ಟರ್‌ಗೆ ನಾವು ಹೇಳಿದ್ವಾ? ಎಂದು "ಆರ್‌ಎಸ್‌ಎಸ್ ಇಲ್ಲದಿದ್ದರೆ ದೇಶ ಮುಸ್ಲಿಮೀಕರಣವಾಗುತ್ತಿತ್ತು " ಎಂದ ಶೆಟ್ಟರ್‌ಗೆ ತಿರುಗೇಟು ನೀಡಿದರು.
ಪಹಲ್ಗಾಂ ದಾಳಿಯ ಉಗ್ರರ ಹತ್ಯೆ ಪ್ರಕರಣ ಕುರಿತು ಪ್ರಶ್ನಿಸಿದಾಗ, ಸೇನೆಯ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಬಾರದು ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳುತ್ತಾರೆ. ಬಿಜೆಪಿಯವರು ಏನಾದರೂ ಹೇಳಿಕೆ ಕೊಡಬಹುದು. ಅವರ ಅಧಿಕಾರದಲ್ಲಿ ಬೇರೆಯವರು ಕೇಳಬಾರದು ಎಂದು ರಾಜನಾಥ ಸಿಂಗ್ ಹೇಳಿಕೆಗೆ ಸಂತೋಷ ಲಾಡ್ ತಿರುಗೇಟು ನೀಡಿದರು.ಕಾರ್ಮಿಕರ ಕೆಲಸದ ಅವಧಿ 10 ಗಂಟೆಗೆ ಏರಿಕೆ ಮಾಡುವ ಕುರಿತು ಪ್ರತಿಕ್ರಿಯಿಸಿದ ಲಾಡ್, ಈ ಬಗ್ಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ. ಕೆಲವು ಮಾಲಕರೂ ಅಳವಡಿಸುವಂತೆ ಹೇಳಿದ್ದಾರೆ. ಆದರೆ, ಈ ಬಗ್ಗೆ ಕಾರ್ಮಿಕ ವಲಯದಿಂದ ಯಾರೂ ಪೂರಕವಾಗಿ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ಎಲ್ಲ ಸಚಿವರು, ಮುಖ್ಯಮಂತ್ರಿಯೊಂದಿಗೆ ಚರ್ಚೆ ಮಾಡುತ್ತೇವೆ. ಹಾಗೇನಾದರೂ ಕಂಪನಿಗಳು ಬೇಕು ಎಂದು ಬೇಡಿಕೆಯಿಟ್ಟಲ್ಲಿ ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದರು.
ದೇಶದಲ್ಲಿ 7,63,433 ದೇವಸ್ಥಾನಗಳನ್ನು ಕಾಂಗ್ರೆಸ್ ಅಧಿಕಾರದ ಅವಧಿಯಲ್ಲೇ ಕಟ್ಟಿಸಲಾಗಿದೆ.ಬಿಜೆಪಿಯವರು ರಾಮ ಮಂದಿರ ಬಿಟ್ಟು ಬೇರೇನೂ ಕಟ್ಟಿಲ್ಲ. ಅದು ಕೂಡ ಕೇಂದ್ರದ ಹಣದಿಂದ ಕಟ್ಟಿದ್ದು. ಚುನಾವಣೆ ಬರೋವಾಗ ಹಿಂದೂಗಳು, ಚುನಾವಣೆ ಮುಗಿದ್ಮೇಲೆ ಎಲ್ಲ ಕ್ಲೋಸ್ ಎಂದು ವ್ಯಂಗ್ಯವಾಡಿದರು.
ಉಪರಾಷ್ಟ್ರಪತಿ ಏಕೆ ರಾಜೀನಾಮೆ ನೀಡಿದ್ದಾರೆ ಎಂದು ಹೆಚ್ಚು ಚರ್ಚೆನೇ ಆಗಿಲ್ಲ. ಈ ಬಗ್ಗೆ ಪ್ರಶ್ನಿಸಬೇಕು ಅಂತ ಮಾಧ್ಯಮದವರಿಗೆ ತಿಳಿಸಿದರು.ಧರ್ಮಸ್ಥಳ ವಿಚಾರಕ್ಕೆ ಎಸ್‌ಐಟಿ ರಚನೆ ಮಾಡಿದ್ದೇವೆ. ತನಿಖೆ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಹಾಗಾಗಿ ಏನೂ ಮಾತನಾಡುತ್ತಿಲ್ಲ. ಧರ್ಮಸ್ಥಳಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂಬ ಆರೋಪವನ್ನು ಅವರು ತಳ್ಳಿಹಾಕಿದರು.