ಲಕ್ಷ್ಮೇಶ್ವರ: ಪಟ್ಟಣದ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವ ಸಣ್ಣ ಪುಟ್ಟ ವ್ಯಾಪಾರಿಗಳಿಂದ ಪ್ರತಿನಿತ್ಯ ಸಂತೆ ಕರ ವಸೂಲಾತಿ ಮಾಡುತ್ತಿರುವುದು ಖಂಡನೀಯ, ಬೀದಿ ಬದಿ ವ್ಯಾಪಾರಿಗಳ ಶುಲ್ಕವನ್ನು ವಾರಕ್ಕೊಮ್ಮೆ ವಸೂಲಿ ಮಾಡಬೇಕು ಎಂದು ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮಂಜುನಾಥ ಹೊಗೆಸೊಪ್ಪಿನ ಆಗ್ರಹಿಸಿದರು.
ಪಟ್ಟಣದ ಪುರಸಭೆಯ ಮುಂದೆ ಮಂಗಳವಾರ ಬೀದಿ ವ್ಯಾಪಾರಸ್ಥರೊಂದಿಗೆ ಪ್ರತಿಭಟನೆ ನಡೆಸಿ ಅವರು ಆಗ್ರಹಿಸಿದರು. ಬೀದಿ ಬದಿ ವ್ಯಾಪಾರಿಗಳ ನಿಯಂತ್ರಣ ಕಾಯ್ದೆ 2014ರ ಹಾಗೂ ರಾಜ್ಯ ಸರ್ಕಾರ 2020ರ ಪ್ರಕಾರ ಬೀದಿ ಬದಿ ವ್ಯಾಪಾರಿಗಳ ನಿಯಂತ್ರಣಾ ಕಾಯ್ದೆ ಅನ್ವಯ ಬೀದಿ ಬದಿ ವ್ಯಾಪಾರಿಗಳ ಶುಲ್ಕವನ್ನು ಪಟ್ಟಣದ ಮಾರಾಟ ಸಮಿತಿ ಸಭೆಯಲ್ಲಿ ತೀರ್ಮಾನಿಸಲು ಅವಕಾಶವಿದ್ದು, ಆದರೆ ಇದುವರೆಗೂ ಪುರಸಭೆಯ ಮುಖ್ಯಾಧಿಕಾರಿಗಳು ಸಂತೆ ಕರ ವಸೂಲಿ ಮಾಡುತ್ತಿರುವುದು ಕಾನೂನು ಬಾಹಿರವಾಗಿದ್ದು, ಆದ್ದರಿಂದ ಬೀದಿ ಬದಿ ವ್ಯಾಪಾರಿಗಳಿಂದ ಕರ ವಸೂಲಿ ಮಾಡುತ್ತಿರುವುದು ಖಂಡನೀಯ. ಅಲ್ಲದೆ ಬೀದಿ ಬದಿ ವ್ಯಾಪಾರಿಗಳ ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಕುರಿತು ಯಾವುದೇ ಕ್ರಮಗಳನ್ನು ಪುರಸಭೆಯು ನೀಡಿಲ್ಲ, ಬೀದಿ ಬದಿ ವ್ಯಾಪಾರಿಗಳ ಆರೋಗ್ಯ ತಪಾಷಣೆಯನ್ನು ನಿಯಮಿತವಾಗಿ ಮಾಡಿಸುವುದು ಪುರಸಭೆಯ ಕರ್ತವ್ಯವಾಗಿದೆ. ಈ ಎಲ್ಲ ಸೌಲಭ್ಯವನ್ನು ನೀಡುವಲ್ಲಿ ಅಧಿಕಾರಿಗಳು ಲೋಪ ಎಸಗಿದ್ದಾರೆ ಎಂದು ಅವರು ಎಚ್ಚರಿಸಿದರು. ಈ ವೇಳೆ ಸಂಘದ ಉಪಾಧ್ಯಕ್ಷ ಮುನಿರಸಾಬ ಸಿದ್ದಾಪೂರ, ಹನಮಂತಪ್ಪ ರಾಮಗೇರಿ, ದಾದಾಪೀರ್ ಬೆಂಡಿಗೇರಿ, ಮಂಜುನಾಥ ಬಸಾಪೂರ, ಪರಶುರಾಮ ಬಳ್ಳಾರಿ, ಮೆಹಬೂಬಸಾಬ ಸುಂಡಕೆ, ರಾಜೇಸಾಬ ಮುಲ್ಲಾನವರ, ಸೋಮವ್ವ ಬೆಟಗೇರಿ, ಶಬ್ಬಿರಅಹ್ಮದ್ ಶಿರಹಟ್ಟಿ ಮೊದಲಾದವರು ಇದ್ದರು.