ಶಿರಸಿ
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ರಾಜ್ಯ ಪ್ರಸಿದ್ಧ ಮಾರಿಕಾಂಬಾ ದೇವಾಲಯದ ರಥ ಬೀದಿಯ ರಸ್ತೆ ಅಗಲೀಕರಣಗೊಳಿಸಿ, ವಾಹನ ದಟ್ಟಣೆ ಸಮಸ್ಯೆ ನಿವಾರಿಸಲು ಸಂಬಂಧಪಟ್ಟವರು ಲಕ್ಷ್ಯ ವಹಿಸಬೇಕು ಎಂದು ಕುಳವೆ ಗ್ರಾಪಂ ಸದಸ್ಯ ಗಂಗಾಧರ ನಾಯ್ಕ ತೆರಕನಳ್ಳಿ ಒತ್ತಾಯಿಸಿದ್ದಾರೆ.ಅವರು ಈ ಕುರಿತು ಪತ್ರಿಕಾ ಹೇಳಿಕೆ ನೀಡಿ, ರಾಜ್ಯದ ಶಕ್ತಿಪೀಠದಲ್ಲೊಂದಾದ ಶಿರಸಿಯ ಶ್ರೀಮಾರಿಕಾಂಬೆ ತಾಯಿಗೆ ಕೋಟ್ಯಂತರ ಜನ ರಾಜ್ಯ ಮತ್ತು ಅಂತರ್ ರಾಜ್ಯದಲ್ಲಿ ಸದ್ಭಕ್ತರಿದ್ದಾರೆ. ಪ್ರತಿ ದಿನವೂ ಬಹಳಷ್ಟು ಭಕ್ತರ ಮಾರಿಕಾಂಬೆ ತಾಯಿಯ ದರ್ಶನ ಪಡೆಯುತ್ತಾರೆ. ದಸರಾ, ಕಾರ್ತಿಕ ಮಾಸ ಮತ್ತು ಶಾಲಾ ಮಕ್ಕಳ ಪ್ರವಾಸ, ಅಕ್ಟೋಬರ್, ನವೆಂಬರ್, ಡಿಸೆಂಬರ್ ಮತ್ತು ಸಂಕ್ರಮಣದವರೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ತಾಯಿಯ ದರ್ಶನ ಪಡೆದು ಹೋಗುತ್ತಾರೆ. ಸಾವಿರಾರು ವರ್ಷಗಳ ಇತಿಹಾಸ ಇರುವ ಮಾರಿಕಾಂಬೆ ತಾಯಿಗೆ ಪ್ರತಿ ಎರಡು ವರ್ಷಕೊಮ್ಮೆ ನಡೆಯುವ ಜಾತ್ರೆಗೆ ಸರಿಯಾದ ರಥ ಬೀದಿಯ ವ್ಯವಸ್ಥೆ ಇಲ್ಲಿಯವರೆಗೂ ಆಗದಿರುವುದು ವಿಪರ್ಯಾಸ. ನಮ್ಮದೇ ತಾಲೂಕಿನ ಶ್ರೀ ಕ್ಷೇತ್ರ ಮಂಜುಗುಣಿಯಲ್ಲಿ ವೆಂಕಟೇಶ್ವರನಿಗೆ ವಿಶಾಲವಾದ ರಥ ಬೀದಿಯಿದೆ.ಪ್ರತಿಯೊಂದು ದೇವಾಲಯಕ್ಕೂ ಜಾತ್ರೆ ನಡೆಯುವ ಸಂದರ್ಭದಲ್ಲಿ ವಿಶೇಷವಾಗಿ ರಥ ಎಳೆಯುವಾಗ ರಥ ಬೀದಿ ಹೊಂದಿದೆ. ರಥ ಎಳೆಯುವಾಗ ರಥಕ್ಕೆ ಮತ್ತು ಲಕ್ಷಾಂತರ ಮಂದಿ ಭಕ್ತರಿಗೆ ತೊಂದರೆಯಾಗದಂತೆ ರಥ ಬೀದಿ ವ್ಯವಸ್ಥೆ ಮಾಡಿರುವುದನ್ನು ನಾವು ನೋಡಿದ್ದೇವೆ. ಆದರೆ ಶಿರಸಿ ಶ್ರೀ ಮಾರಿಕಾಂಬೆ ತಾಯಿಯ ಜಾತ್ರೆಯಲ್ಲಿ ಮಾರಿಕಾಂಬ ದೇವಸ್ಥಾನದಿಂದ, ಜಾತ್ರೆಯಲ್ಲಿ, ಅಮ್ಮನನ್ನು ಕೂಡಿಸುವ ಗದ್ದಿಗೆವರೆಗೆ ರಥ ಬೀದಿ ಮಾಡಬೇಕೆನ್ನುವುದು ಲಕ್ಷಾಂತರ ಜನರ ಆಶಯವಾಗಿದೆ.
ಪ್ರವಾಸದ ದಿನದಲ್ಲಿ ಸಾವಿರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಪಾಲಕ-ಪೋಷಕರು, ಶಿಕ್ಷಕ ವೃಂದದವರು ಮಾರಿಕಾಂಬೆ ತಾಯಿಯ ದರ್ಶನ ಪಡೆಯಲು ಬರುತ್ತಾರೆ.ಸುಸಜ್ಜಿತವಾದ ಶೌಚಾಲಯ ವ್ಯವಸ್ಥೆ, ಕುಡಿವ ನೀರಿನ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ ಮಾಡಲು ದೇವಸ್ಥಾನಕ್ಕೆ ಸಂಬಂಧಪಟ್ಟವರು ಮತ್ತು ಜನಪ್ರತಿನಿಧಿಗಳು ಸ್ಪಂದಿಸಿದರೆ ಮುಂದಿನ ದಿನದಲ್ಲಿ ಇನ್ನು ಹೆಚ್ಚಿಗೆ ಪ್ರಮಾಣದಲ್ಲಿ ಭಕ್ತ ಸಾಗರ ಹರಿದು ಬರುವುದರಲ್ಲಿ ಸಂದೇಹವಿಲ್ಲ.ಮಕ್ಕಳ ಪ್ರವಾಸ ಮತ್ತು ಅಯ್ಯಪ್ಪ ಮಾಲಾಧಾರಿಗಳು,ಹೆಚ್ಚಿನ ಭಕ್ತರು ಡಿಸೆಂಬರ್ ತಿಂಗಳಿನಲ್ಲಿ ಮಾರಿಕಾಂಬೆ ದರ್ಶನ ಪಡೆಯಲು ಬರುತ್ತಿದ್ದಾರೆ. ಬೆಳಗ್ಗೆ ಸಮಯದಲ್ಲಿ ಎಲ್ಲ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಇದೆ. ಬೆಳಗ್ಗೆ ವೇಳೆ ಮರ್ಕಿದುರ್ಗಿ ದೇವಸ್ಥಾನದಿಂದ ಬನವಾಸಿ ರಸ್ತೆಯ ಗೊಲಗೇರಿ ಓಣಿವರೆಗೆ ಟ್ರಾಫಿಕ್ ಜಾಮ್ ಆಗಿ, ಬಹಳ ಸಮಸ್ಯೆ ಎದುರಿಸುವಂತಾಗಿ ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಸರಿಯಾದ ಸಮಯಕ್ಕೆ ತೆರಳು ಸಾಧ್ಯವಾಗುತ್ತಿಲ್ಲ.
ಪರೀಕ್ಷಾ ಸಮಯ ಹತ್ತಿರ ಬರುತ್ತಿದ್ದು, ಅವರಿಗೆ ೮ ಗಂಟೆಯೊಳಗೆ ತರಗತಿಗೆ ಹೋಗಲು ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಇದರ ಕುರಿತು ಗಮನ ವಹಿಸಿ ಸಮಸ್ಯೆಗೆ ಪರಿಹಾರ ದೊರಕಿಸಬೇಕು ಎಂದು ಆಗ್ರಹಿಸಿದ್ದಾರೆ.