ಹುಬ್ಬಳ್ಳಿ: ಭಾರತೀಯ ನ್ಯಾಯ ಸಂಹಿತೆಯ ಅಡಿ ಹಿಟ್ ಆ್ಯಂಡ್ ರನ್ ಪ್ರಕರಣಗಳಲ್ಲಿ ಕಠಿಣ ಶಿಕ್ಷೆಗೆ ಗುರಿಪಡಿಸುವ ಕಾನೂನು ಹಿಂಪಡೆಯಲು ಒತ್ತಾಯಿಸಿ ಗುರುವಾರ ಹು-ಧಾ ಗೂಡ್ಸ್ ಟ್ರಾನ್ಸಪೋರ್ಟ್ ಆ್ಯಂಡ ಲಾರಿ ಓನರ್ಸ ಅಸೋಸಿಯೇಶನ್ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಇಲ್ಲಿನ ದುರ್ಗದಬೈಲ್‌ನಿಂದ ಆರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆಯು ತಹಸೀಲ್ದಾರ್ ಕಚೇರಿಯ ವರೆಗೆ ಆಗಮಿಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.ಬುಧವಾರದಿಂದ ಆರಂಭವಾಗಿರುವ ಈ ಹೋರಾಟದಿಂದ ಹುಬ್ಬಳ್ಳಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೂರಾರು ಲಾರಿಗಳು ನಿಂತಿರುವುದು ಕಂಡು ಬಂದಿತು. ಬುಧವಾರ ಲಾರಿ ಚಾಲಕರು ಮಧ್ಯಾಹ್ನದವರೆಗೂ ಸಂಚರಿಸಿದರೆ ಸಂಜೆಯಾಗುತ್ತಿದ್ದಂತೆ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ಬರುವ ಧಾಬಾ, ಮುಖ್ಯ ರಸ್ತೆಯ ಪಕ್ಕ ನೂರಾರು ವಾಹನಗಳನ್ನು ಸ್ವಯಂಪ್ರೇರಿತವಾಗಿ ನಿಲ್ಲಿಸುವ ಮೂಲಕ ಅನಿರ್ದಿಷ್ಟಾವಧಿಯ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಇಲ್ಲಿನ ಗಬ್ಬೂರಿನ ಸುತ್ತಮುತ್ತಲೂ ನೂರಾರು ಲಾರಿ, ಟ್ರಕ್‌ಗಳನ್ನು ನಿಲ್ಲಿಸಲಾಗಿತ್ತು. ಅಲ್ಲದೇ ಹಲವು ಲಾರಿ ಮಾಲೀಕರಿಗೆ ಹಾಗೂ ಚಾಲಕರಿಗೆ ಬಂದ್ ಕುರಿತು ಮಾಹಿತಿ ನೀಡುವ ಮೂಲಕ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಯಿತು.
ದೂರದಿಂದ ಆಗಮಿಸುತ್ತಿದ್ದ ಟ್ರಕ್‌ಗಳನ್ನು ತಡೆದು ನಿಲ್ಲಿಸದೇ ತಮ್ಮ ತಮ್ಮ ಕ್ಷೇತ್ರಗಳಿಗೆ ಮರಳಿ ಹೋಗಿ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿ ಕಳಿಸುತ್ತಿರುವುದು ಗುರುವಾರ ಗಬ್ಬೂರು ರಸ್ತೆಯಲ್ಲಿ ಕಂಡುಬಂದಿತು. ಅಲ್ಲದೇ ಶುಕ್ರವಾರದಿಂದ ಲಾಂಗ್ ರೂಟ್ ಸಂಚರಿಸುವ ಗೂಡ್ಸ್‌ಗಳನ್ನು ಬಂದ್ ಮಾಡಿ ಹೋರಾಟ ಕೈಗೊಳ್ಳುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು. ಪ್ರತಿಭಟನೆಯಿಂದಾಗಿ ಗುರುವಾರ ನಗರದಲ್ಲಿ ಬೃಹತ್ ಲಾರಿಗಳು, ಗೂಡ್ಸ ವಾಹನಗಳ ಸಂಚಾರ ತುಂಬಾ ವಿರಳವಾಗಿತ್ತು. ಹಲವು ಟೆಂಪೊ ಚಾಲಕರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿರುವುದು ಕಂಡುಬಂದಿತು.ಈ ವೇಳೆ ಅಸೋಸಿಯೇಶನ್‌ನ ಅಧ್ಯಕ್ಷ ವಾಸು ಕೋನರಡ್ಡಿ ಮಾತನಾಡಿ, ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಚಾಲಕರಿಗೆ ₹ 7 ಲಕ್ಷ ದಂಡ ಹಾಗೂ ಜೈಲು ಶಿಕ್ಷೆಗೆ ಗುರಿಪಡಿಸುವ ಕರಾಳ ಶಾಸನವನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪಾಸ್ ಮಾಡಲಾಗಿದೆ. ಕಡಿಮೆ ಸಂಬಳದಲ್ಲಿ ಇಷ್ಟೊಂದು ದೊಡ್ಡ ಮೊತ್ತದ ದಂಡ ಕಟ್ಟಲು ಚಾಲಕನಿಗೆ ಸಾಧ್ಯವಿಲ್ಲ. ಈ ವಿಧೇಯಕಕ್ಕೆ ತಿದ್ದುಪಡಿ ತಂದು ಮೊದಲಿನಂತೆ ಕಾನೂನು ತರುವಂತೆ ಒತ್ತಾಯಿಸಿದರು.
ಹುಬ್ಬಳ್ಳಿ-ಧಾರವಾಡ ಸರಕು ಸಾಗಣೆ ಮತ್ತು ಲಾರಿ ಮಾಲೀಕರ ಸಂಘದ ಗೌರವ ಕಾರ್ಯದರ್ಶಿ ರವೀಂದ್ರ ಬೆಳಮಕರ ಮಾತನಾಡಿ, ಸರ್ಕಾರವು ಜಾರಿಗೆ ತರುತ್ತಿರುವ ಈ ಕರಾಳ ಶಾಸನವು ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ ಹಾಗೂ ಎಲ್ಲ ಭಾರೀ ವಾಹನಗಳಿಗೆ ಅನ್ವಯವಾಗುತ್ತದೆ. ಇದಕ್ಕೆ ನಮ್ಮ ವಿರೋಧವಿದೆ. ಕೇಂದ್ರ ಸರ್ಕಾರ ಇದನ್ನು ಹಿಂಪಡೆಯುವ ವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ.ಜ.17ರಿಂದ ಮುಷ್ಕರಕ್ಕೆ ಕರೆ ನೀಡಲಾಗಿದೆ. ಗುರುವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡು ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಗಿದೆ. ಅಲ್ಲದೇ ಅಕ್ಕಿಹೊಂಡ, ಹಿರೇಪೇಟ ಇನ್ನಿತರ ಕಡೆ ಗೂಡ್ಸ್ ಟ್ರಾನ್ಸ್‌ಪೋರ್ಟ್ ಕಚೇರಿಗಳನ್ನು ಬಂದ್ ಮಾಡಿದ್ದೇವೆ. ಹೊರ ರಾಜ್ಯದ ಲಾರಿಗಳಿಗೂ ಮುಷ್ಕರಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.
ಧಾರವಾಡ ಜಿಲ್ಲಾ ಆಟೋ ರಿಕ್ಷಾ ಚಾಲಕರ ಸಂಘ, ಉತ್ತರ ಕರ್ನಾಟಕ ಮಿನಿ ಗೂಡ್ಸ್ ವಾಹನ ಚಾಲಕರ ಮಾಲೀಕರ ಸಂಘ, ಹುಬ್ಬಳ್ಳಿ ಆಟೋ ಚಾಲಕರ ಸಂಘ, ಉತ್ತರ ಕರ್ನಾಟಕ ಆಟೋ ಚಾಲಕರ ಸುರಕ್ಷಾ ಸಂಘ, ದಿ.ಲಕ್ಷ್ಮಣ ಹಿರೇಕೆರೂರ ಅಟೋ ರಿಕ್ಷಾ ಚಾಲಕರ ಸಂಘ, ಎ.ಜೆ. ಮುಧೋಳ ಅಭಿಮಾನಿಗಳ ಕಟ್ಟಡ ಕಾರ್ಮಿಕರ ಮತ್ತು ಇತರೆ ಕಾರ್ಮಿಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಸಾಥ್ ನೀಡಿದವು.ಈ ವೇಳೆ ರಾಜಶೇಖರ ಮೆಣಸಿನಕಾಯಿ, ಪ್ರಕಾಶ ರಾಯ್ಕರ, ಸಮೀರ ಪೀರಜಾದೆ, ಮಹಾವೀರ ಯರೇಸೀಮಿ, ಸುನೀತಾ ಹುರಕಡ್ಲಿ, ಬಿ.ಎ. ಮುಧೋಳ, ರಮೇಶ ಬೋಸಲೆ, ಯೂಸುಫ್ ಬಳ್ಳಾರಿ, ಬಾಬಾಜಾನ ಮುಧೋಳ, ಮೈನುದ್ದೀನ ಮುಲ್ಲಾ, ಪ್ರಭಾಕರ ಉಪಾಧ್ಯ, ತೌಫೀರ ಖಾಜಿ, ಆರ್.ಎಂ. ಜವಳಿ ಸೇರಿದಂತೆ ಹಲವರಿದ್ದರು.