ಕಾರ್ಮಿಕ ವಿರೋಧಿ ಸಂಹಿತೆ ಹಿಂಪಡೆಯಲು ಆಗ್ರಹ

KannadaprabhaNewsNetwork |  
Published : Sep 25, 2024, 12:47 AM IST
ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಬಳ್ಳಾರಿ ಡಿಸಿ ಕಚೇರಿ ಎದುರು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.  | Kannada Prabha

ಸಾರಾಂಶ

ಕೇಂದ್ರದ ಎನ್‌ಡಿಎ ಸರ್ಕಾರ ಈ ಹಿಂದೆ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಬಳ್ಳಾರಿ: ಕೇಂದ್ರದ ಎನ್‌ಡಿಎ ಸರ್ಕಾರ ಈ ಹಿಂದೆ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ನೇತೃತ್ವದಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಕೈಗಾರಿಕೆ ಸಂಬಂಧಿ ಕಾಯ್ದೆಯು ಕಾರ್ಮಿಕ ಸಂಘಗಳ ಹಕ್ಕನ್ನು ಸಂಪೂರ್ಣವಾಗಿ ಕಸಿದುಕೊಳ್ಳುತ್ತಿದೆ. ವಾರ್ಷಿಕ ರಿಟರ್ನ್ಸ್ ಸಲ್ಲಿಸುವಲ್ಲಿ ಕಾರ್ಮಿಕ ಸಂಘಗಳು ವಿಳಂಬ ಮಾಡಿದರೆ ಸಂಘದ ನೋಂದಣಿ ರದ್ದು ಅಥವಾ ಭಾರಿ ದಂಡ ವಿಧಿಸುವ ಮೂಲಕ ಸಂಘಗಳ ಅಸ್ತಿತ್ವಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದೆ. ಕಾರ್ಮಿಕರ ಮುಷ್ಕರದ ಹಕ್ಕನ್ನು ಹತ್ತಿಕ್ಕುವ ಹುನ್ನಾರ ನಡೆಯುತ್ತಿದೆ.

ಕಾರ್ಮಿಕನ ಆರೋಗ್ಯ ಮತ್ತು ಸುರಕ್ಷತಾ ಸಂಹಿತೆಯು ಅಂತಾರಾಷ್ಟ್ರೀಯ ನಿಯಮವನ್ನು ಉಲ್ಲಂಘಿಸಿ ದುಡಿಮೆಯ ಅವಧಿಯನ್ನು ಎಂಟು ಗಂಟೆಯಿಂದ ಹನ್ನೆರೆಡು ಗಂಟೆಗೆ ಹೆಚ್ಚಿಸಲು ಅನುಮತಿಸಿದ್ದು, ಈ ಎಲ್ಲ ಸಂಹಿತೆಗಳು ದುಡಿಯುವ ಜನರನ್ನು ಹತ್ತಿಕ್ಕುವ ಷಡ್ಯಂತ್ರವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಮೋದಿ ನೇತೃತ್ವದ ಕೇಂದ್ರ ಸರ್ಕಾರ ತರಲು ಹೊರಟಿರುವ ನಾಲ್ಕು ಸಂಹಿತೆಗಳು ಕಾರ್ಮಿಕರನ್ನು ಮಧ್ಯಕಾಲೀನ ಯುಗದ ಗುಲಾಮಗಿರಿಯ ಮಾದರಿಯಲ್ಲಿ ದುಡಿಸಿಕೊಳ್ಳುವ ಪ್ರಯತ್ನವಾಗಿದೆ. ಪ್ರಜಾಪ್ರಭುತ್ವ ಮಾದರಿ ದೇಶದಲ್ಲಿರುವ ಕಾರ್ಮಿಕರ ಹಕ್ಕುಗಳಾದ ಸಂಘಟನೆಯ ಹಕ್ಕು, ಮುಷ್ಕರದ ಹಕ್ಕು ಅಗತ್ಯ ಕನಿಷ್ಠ ವೇತನ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಹಕ್ಕನ್ನು ಕಸಿದುಕೊಳ್ಳುವುದರ ವಿರುದ್ಧ ಇಂದು ದೇಶಾದ್ಯಂತ ಜೆಸಿಟಿಯು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹೋರಾಟ ಸಮಿತಿಯ ಮುಖಂಡರು ತಿಳಿಸಿದರು.

ಎಐಯುಟಿಯುಸಿ ಜಿಲ್ಲಾಧ್ಯಕ್ಷ ಎ.ದೇವದಾಸ್, ಜಿಲ್ಲಾ ಕಾರ್ಯದರ್ಶಿ ಡಾ. ಪ್ರಮೋದ್, ಸಿಐಟಿಯು ಜಿಲ್ಲಾಧ್ಯಕ್ಷ ಜೆ.ಸತ್ಯಬಾಬು, ಅಖಿಲ ಭಾರತ ಜೀವವಿಮಾ ನೌಕರರ ಸಂಘದ ಮುಖಂಡ ಸೂರ್ಯನಾರಾಯಣ, ಅಶ್ರಫ್ ಖಾನ್, ಜೆ.ಎಂ. ಚನ್ನಬಸಯ್ಯ, ಎ. ಶಾಂತಾ, ಜಿ.ಸುರೇಶ್, ಕಮಲ್, ಚಿಟ್ಟಮ್ಮ, ಹುಲುಗಪ್ಪ, ದುರ್ಗಮ್ಮ, ಓಂಕಾರಮ್ಮ, ನಾಗರತ್ನ, ನಾಗಲಕ್ಷ್ಮಿ ಸೇರಿದಂತೆ ರಾಷ್ಟ್ರೀಯ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರಧಾನಮಂತ್ರಿಗಳಿಗೆ ಬರೆದ ಮನವಿಯನ್ನು ಜಿಲ್ಲಾಡಳಿತ ಮೂಲಕ ಕಳಿಸಿಕೊಡಲಾಯಿತು.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!