ಹೂವಿನಹಡಗಲಿ: ರಾಜ್ಯದಲ್ಲಿರುವ ಅಂಗನವಾಡಿ ಕೇಂದ್ರಗಳನ್ನು ಮೊಟಕುಗೊಳಿಸುವ ಹುನ್ನಾರ ನಡೆದಿದೆ. ಸರ್ಕಾರಿ ಶಾಲೆಯಲ್ಲಿ ಆರಂಭಿಸುವ ಎಲ್‌ಕೆಜಿ, ಯುಕೆಜಿ ತರಗತಿ ಆರಂಭದ ಆದೇಶವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕೆಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಷನ್ ಶಾಸಕ ಕೃಷ್ಣನಾಯ್ಕ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ ಮಾತ್ರ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಜಾರಿಗೊಳಿಸುವುದರಿಂದ ಕಾರ್ಯಕರ್ತೆಯರಿಗೆ, ಸಹಾಯಕಿಯರಿಗೆ ಸರ್ಕಾರ ಮಾಡುತ್ತಿರುವ ಮಲತಾಯಿ ಧೋರಣೆಯಾಗಿದೆ. ಕೂಡಲೇ ಸರ್ಕಾರ ಸೂಕ್ತ ಕ್ರಮ ವಹಿಸಬೇಕೆಂದು ಒತ್ತಾಯಿಸಿದ್ದಾರೆ.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಕೃಷ್ಣನಾಯ್ಕ, ರಾಜ್ಯದಲ್ಲಿರುವ ಅಂಗನವಾಡಿ ಕೇಂದ್ರಗಳನ್ನು ಮುಚ್ಚಲು ಬಿಡುವುದಿಲ್ಲ. ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಲು ಹೊರಟಿರುವ ಸರ್ಕಾರ ಈ ಕುರಿತು ಸೂಕ್ತ ಕ್ರಮ ವಹಿಸಿ ಅಂಗನವಾಡಿ ಕಾರ್ಯಕರ್ತೆಯರಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ಫೆಡರೇಷನ್ ತಾಲೂಕು ಅಧ್ಯಕ್ಷೆ ಜಯಲಕ್ಷ್ಮೀ, ಪ್ರಧಾನ ಕಾರ್ಯದರ್ಶಿ ಸವಿತಾ ಹರವಿ, ಪವಿತ್ರಾ ಜೈನ್, ಸರಸ್ವತಿ, ಅಮೃತೇಶ್ವರಿ, ಅಕ್ಕಮಹಾದೇವಿ, ಶಾರದಾ, ಸುಶೀಲಾ, ಕೆ.ಸವಿತಾ, ಎನ್.ಸುನಂದಾ ಉಪಸ್ಥಿತರಿದ್ದರು.