ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಕರಾವಳಿ ಮತ್ತು ಮಲೆನಾಡಿಗೆ ನೀರಿಲ್ಲದಂತೆ ಮಾಡಲಿರುವ ಎತ್ತಿನಹೊಳೆ ಯೋಜನೆಯ ವಿಸ್ತರಣೆಗೆ ಯಾವುದೇ ಕಾರಣಕ್ಕೂ ಮುಂದಾಗಬಾರದೆಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಸಭಾಪತಿ ಮೂಲಕ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.ಅತ್ಯಂತ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಪಶ್ಚಿಮಘಟ್ಟ ಮತ್ತು ಕರಾವಳಿ ಜಿಲ್ಲೆಗಳಿಗೆ ಮಾರಕವಾಗುವ ಎಲ್ಲಾ ಸಾಧ್ಯತೆಗಳು ಈಗಾಗಲೇ ದಟ್ಟವಾಗಿವೆ. ಇದು ನೇತ್ರಾವತಿ ಮತ್ತು ಕುಮಾರಧಾರ ನದಿಗಳ ಮೇಲಿನ ತೂಗುಕತ್ತಿಯಂತಾಗಿದೆ. ಎತ್ತಿನಹೊಳೆ ಯೋಜನೆಯ ವಿಸ್ತರಣೆಯ ಭಾಗವಾಗಿ, ಯೋಜನಾ ಪ್ರದೇಶದ ಕೆಳಗಿನ ಇನ್ನೂ ಕೆಲವು ಹೊಳೆಗಳಿಂದ ನೀರು ಹರಿಸಲು ಸಮೀಕ್ಷೆ ಮಾಡುವಂತೆ ಈಗಾಗಲೇ ಸೂಚಿಸಲಾಗಿದೆ. ಕೆಳಗಿನ ಹಳ್ಳಗಳಿಂದ ನೀರನ್ನು ಮೇಲಕ್ಕೆತ್ತಿ ನೀರು ಹರಿಸಲು ಸರ್ಕಾರ ಮುಂದಾಗಿದೆ. ಇದೀಗ ವಿಶ್ವೇಶ್ವರಯ್ಯ ಜಲ ನಿಗಮವು ಎತ್ತಿನಹೊಳೆ ಯೋಜನಾ ಪ್ರದೇಶದ ಸುತ್ತಮುತ್ತ ಹರಿಯುವ ಹಳ್ಳ, ಹೊಳೆಗಳ ಮೇಲೆ ಕಣ್ಣು ಹಾಕಿದ್ದು ವೈಮಾನಿಕ ಸಮೀಕ್ಷೆಯನ್ನೂ ನಡೆಸಿದೆ ಎಂದು ಹೇಳಿದ್ದಾರೆ.
ಈಗಾಗಲೇ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಆತಂಕ ಸೃಷ್ಟಿಸಿರುವ ಎತ್ತಿನಹೊಳೆ ಯೋಜನೆಯನ್ನು ಇನ್ನಷ್ಟು ವಿಸ್ತರಿಸುವುದು ಇದರಿಂದ ಖಚಿತವಾಗಿದೆ. ಪ್ರಸ್ತುತ ಯೋಜನೆ ಅನುಷ್ಠಾನವಾಗಿರುವ ಎತ್ತಿನಹೊಳೆ ಮತ್ತು ಕಾಡುಮನೆ ಹೊಳೆ ಹಾಗೂ ಅವುಗಳ ಉಪಹೊಳೆಗಳು, ಕೇರಿಹೊಳ, ಹೊಂಗಡಹೊಳೆ ಮಾತ್ರವಲ್ಲದೇ ಇನ್ನಷ್ಟು ಹೊಳೆಗಳು ಈ ಯೋಜನೆಗೆ ಬಲಿಯಾಗಲಿವೆ. ರಾಷ್ಟ್ರೀಯ ಹೆದ್ದಾರಿ - 75 ರ ಉತ್ತರ ದಿಕ್ಕಿನಲ್ಲಿ ಕಾಡುಮನೆ ಹೊಳೆಗೆ ಅಡ್ಡಗಟ್ಟೆ -5 ಕೊನೆಯ ಪಂಪ್‌ಹೌಸ್ ಆಗಿದ್ದು, ದಕ್ಷಿಣದಲ್ಲಿ ಹೊಂಗಡ ಹೊಳೆಗೆ ನಿರ್ಮಿಸಿರುವ ಅಡ್ಡಗಟ್ಟೆ -7 ಕೊನೆಯ ಪಂಪ್‌ಹೌಸ್ ಆಗಿದೆ. ಈ ಎರಡು ಅಡ್ಡಗಟ್ಟೆಗಳಿಂದ ಏಳೆಂಟು ಕಿ.ಮೀ. ವ್ಯಾಪ್ತಿಯಲ್ಲಿ ಇನ್ನೂ ಐದಾರು ಹೊಳೆಗಳು ಹರಿಯುತ್ತಿವೆ. ಕಲವೇ ಕಿ.ಮೀ. ದೂರದಲ್ಲಿ ಕುಮಾರಧಾರ ಹೊಳೆಯೂ ಹರಿಯುತ್ತಿದೆ. ಈ ಎಲ್ಲಾ ಹಳ್ಳ ಹೊಳೆಗಳನ್ನು ಎತ್ತಿನಹೊಳೆ ಯೋಜನೆಯೊಳಗೆ ಸೇರಿಸಿಕೊಂಡರೆ ದಕ್ಷಿಣ ಕನ್ನಡ ಜಿಲ್ಲೆಯ ದಾಹ ತೀರಿಸುವ ಮತ್ತು ಕೃಷಿಗೆ ನೀರುಣಿಸುವ ನೇತ್ರಾವತಿ ಮತ್ತು ಕುಮಾರಧಾರ ನದಿಗಳಿಗೆ ಶಾಶ್ವತವಾಗಿ ಅಪಾಯ ಎದುರಾಗಲಿದೆ ಎಂದು ಪತ್ರದಲ್ಲಿ ಅವರು ಎಚ್ಚರಿಸಿದ್ದಾರೆಒಂದೆಡೆ ಬರಪೀಡಿತ ಜಿಲ್ಲೆಗಳ ದಾಹ ತೀರಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಇನ್ನೊಂದೆಡೆ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳನ್ನು ಬರಪೀಡಿತ ಮಾಡಲು ಹೊರಟಂತಿದೆ. ದಕ್ಷಿಣ ಕನ್ನಡ ಜಿಲ್ಲೆಯ ನದಿಗಳಿಗೆ ಕಂಟಕವಾಗುವ, ಪಶ್ಚಿಮಘಟ್ಟದಲ್ಲಿನ ಮಳೆಕಾಡು ಮತ್ತು ಹುಲ್ಲುಗಾವಲುಗಳ ನಾಶಕ್ಕೆ ಕಾರಣವಾಗುವ ದಟ್ಟಾರಣ್ಯದಲ್ಲಿ ನದಿಗಳ ಸಹಜ ಹರಿವಿನ ಮೇಲೆ ದುಷ್ಪರಿಣಾಮ ಬೀರುವ, ಭೂಕುಸಿತ ಮತ್ತು ಅಂತರ್ಜಲ ಕುಸಿತದಂಥ ಅಪಾಯಗಳಿಗೆ ಕಾರಣವಾಗುವ, ಪಶ್ಚಿಮಘಟ್ಟದ ಸೂಕ್ಷ್ಮ ಪದರಗಳಿಗೆ ಶಾಶ್ವತ ಹಾನಿ ಮಾಡುವ, ಭೂಸ್ತರಗಳ ವ್ಯತ್ಯಾಸಕ್ಕೆ ಕಾರಣವಾಗುವ ಮತ್ತು ಬಹು ಮುಖ್ಯವಾಗಿ ಪಶ್ಚಿಮಘಟ್ಟಕ್ಕೆ ಮಾರಕವಾಗುವುದರ ಜೊತೆಗೆ ಕರಾವಳಿ ಮತ್ತು ಮಲೆನಾಡಿಗೆ ನೀರಿಲ್ಲದಂತೆ ಮಾಡಲಿರುವ ಎತ್ತಿನಹೊಳೆ ಯೋಜನೆಯ ವಿಸ್ತರಣೆಗೆ ಯಾವುದೇ ಕಾರಣಕ್ಕೂ ಮುಂದಾಗಬಾರದೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.