ಕನ್ನಡಪ್ರಭ ವಾರ್ತೆ ಬಳ್ಳಾರಿ ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆಯ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಖಾಲಿ ಕೊಡಗಳನ್ನು ಹಿಡಿದು, ಅರೆಬೆತ್ತಲೆಯಾಗಿ ಮೆರವಣಿಗೆ ಹೊರಟ ಪ್ರತಿಭಟನಾಕಾರರು ನೆಲದ ಮೇಲೆ ಮಲಗಿ ಪ್ರತಿಭಟನೆ ಮುಂದಾದಾಗ ಇಲ್ಲಿನ ರಾಯಲ್ ವೃತ್ತದ ಬಳಿಕ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು. ಕಾವೇರಿ ನೀರು ವಿಚಾರದಲ್ಲಿ ಈ ಹಿಂದಿನಿಂದಲೂ ತಮಿಳುನಾಡು ವಿನಾಕಾರಣ ರಾಜ್ಯದ ಜತೆ ಸಂಘರ್ಷಕ್ಕಿಳಿಯುತ್ತಿದೆ. ರಾಜ್ಯದಲ್ಲಿ ಬರ ಆವರಿಸಿ ಜನ- ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೂರಿದ್ದು, ಇರುವ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಹೀಗಿರುವಾಗ ತಮಿಳುನಾಡಿಗೆ ನೀರು ಬಿಡಬೇಕು ಎಂಬ ಬೇಡಿಕೆ ಎಷ್ಟು ಸರಿ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸಬೇಕು. ಪ್ರಧಾನಮಂತ್ರಿಗಳು ಎರಡು ರಾಜ್ಯಗಳ ನಡುವೆ ಸೌಹಾರ್ದತೆ ಕಾಪಾಡುವ ದಿಸೆಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಸಮಸ್ಯೆ ನೀಗಿಸಲು ಪ್ರಯತ್ನಿಸಬೇಕು. ರಾಜ್ಯ ಸರ್ಕಾರ ನೀರು ಬಿಡುವಿಕೆ ವಿಚಾರದಲ್ಲಿ ಈ ನಾಡಿಗೆ ಯಾವುದೇ ಅನ್ಯಾಯವಾಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ರಾಜ್ಯಾಧ್ಯಕ್ಷ ಎಚ್. ಸುರೇಶ್ ಆಗ್ರಹಿಸಿದರು. ತಮಿಳುನಾಡು ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ನೀರು ಬಿಡದಂತೆ ಒತ್ತಾಯಿಸಿ, ನೆಲದ ಮೇಲೆ ಪ್ರತಿಭಟನೆಗೆ ಮುಂದಾಗುತ್ತಿದ್ದಂತೆಯೇ ಪೊಲೀಸರು ಬಂಧಿಸಿ, ಬಳಿಕ ಬಿಡುಗಡೆಗೊಳಿಸಿದರು. ಸಂಘಟನೆಯ ರಾಜ್ಯ ವಕ್ತಾರ ಮಂಜುನಾಥ ನಾವಲಕರ್, ರಾಜ್ಯ ಸಂಚಾಲಕ ಮಹ್ಮದ್ ರಫಿ, ಬಳ್ಳಾರಿ ತಾಲೂಕು ಅಧ್ಯಕ್ಷ ಎಸ್. ನರಸಿಂಹರಾಜು, ನಗರ ಯುವ ಘಟಕ ಅಧ್ಯಕ್ಷ ಶ್ರೀಕಾಂತ್, ಪದಾಧಿಕಾರಿಗಳಾದ ವಿ.ಎಸ್. ಸಾಗರ್, ಅಪ್ಪು, ತಿಮ್ಮಪ್ಪ, ರಮೇಶ್, ತಾಯಪ್ಪ, ರಾಜೇಶ್, ಮಹಾಲಿಂಗಪ್ಪ, ಬಸಯ್ಯ ಶರತ್ ಗೌಡ, ಕೆ. ಬಸವರಾಜ್, ಸದಾಶಿವ ಚಿಕ್ಕಂತಾಪುರ, ಕೋಡಾಲ್ ಶ್ರೀನಿವಾಸ ರೆಡ್ಡಿ, ಹನುಮಂತಪ್ಪ ಯಾದವ, ವಿಜಯಕುಮಾರ್, ಶಿವಕುಮಾರ ಸೇರಿದಂತೆ ನೂರಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.