ಭಟ್ಕಳದಲ್ಲಿ ಶರಾಬಿ ಹೊಳೆಗೆ ಒಳಚರಂಡಿ ನೀರು ಬಿಡದಂತೆ ಆಗ್ರಹ

KannadaprabhaNewsNetwork | Published : Sep 2, 2024 2:01 AM

ಸಾರಾಂಶ

ವೆಟ್‌ವೆಲ್ ಪಂಪಿಂಗ್ ಸ್ಟೇಷನ್‌ಅನ್ನು ಗೌಸಿಯಾ ಸ್ಟ್ರೀಟ್‌ನಿಂದ ಹೆಚ್ಚು ಸೂಕ್ತವಾದ ಸ್ಥಳಕ್ಕೆ ಸ್ಥಳಾಂತರಿಸಬೇಕು ಮತ್ತು ಭಟ್ಕಳಕ್ಕೆ ಜೀವಾಳವಾಗಿರುವ ಶರಾಬಿ ಹೊಳೆಯನ್ನು ಸ್ವಚ್ಛಗೊಳಿಸಿ ಪುನಶ್ಚೇತನಗೊಳಿಸಲು ಗಮನ ಹರಿಸಬೇಕು ಎಂದು ಆಗ್ರಹಿಸಲಾಗಿದೆ.

ಭಟ್ಕಳ: ಪಟ್ಟಣದ ಗೌಸಿಯಾ ಸ್ಟ್ರೀಟ್‌ನಲ್ಲಿರುವ ವೆಟ್‌ವೆಲ್‌ನಿಂದ ಶರಾಬಿ ಹೊಳೆಗೆ ಅಕ್ರಮವಾಗಿ ಒಳಚರಂಡಿ ನೀರನ್ನು ಬಿಡದಂತೆ ತಡೆಯಬೇಕು ಎಂದು ಸ್ಥಳೀಯರು ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರಿಗೆ ಮನವಿ ಸಲ್ಲಿಸಿದರು.

ಶರಾಬಿ ಹೊಳೆಯಲ್ಲಿ ಕಳೆದ ಒಂದು ತಿಂಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ನದಿಯಲ್ಲಿನ ಕೊಳಚೆ ನೀರು ತಾತ್ಕಾಲಿಕವಾಗಿ ತೆರವುಗೊಂಡು ಗಲೀಜು ನೀರು ಹರಿದು ಹೋಗಿತ್ತು. ಆದರೆ ಪಂಪಿಂಗ್ ಸ್ಟೇಷನ್‌ನಿಂದ ಮತ್ತೆ ಒಳಚರಂಡಿ ನೀರು ಬಿಡುವ ಮೂಲಕ ಹೊಳೆಯ ನೀರು ಕಲುಷಿತಗೊಂಡು, ಕೆಟ್ಟು ದುರ್ವಾಸನೆ ಬೀರುತ್ತಿದೆ. ಇದರಿಂದಾಗಿ ಸ್ಥಳೀಯ ನಿವಾಸಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಒಳಚರಂಡಿಯಿಂದಾಗಿ ಪಟ್ಟಣದ ಗೌಸಿಯಾ ಸ್ಟ್ರೀಟ್, ಮುಷ್ಮಾ ಸ್ಟ್ರೀಟ್, ಖಾಜಿಯಾ ಸ್ಟ್ರೀಟ್, ಜಾಮಿಯಾ ಸ್ಟ್ರೀಟ್, ಖಲೀಫಾ ಸ್ಟ್ರೀಟ್ ಮತ್ತು ಡಾರಂಟಾ ಇತರ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಬಾವಿಗಳು ಕಲುಷಿತವಾಗಿದ್ದು, ನೀರು ಬಳಸದ ಪರಿಸ್ಥಿತಿ ನಿರ್ಮಾಣಗೊಂಡಿದೆ.

ವೆಟ್‌ವೆಲ್ ಪಂಪಿಂಗ್ ಸ್ಟೇಷನ್‌ಅನ್ನು ಗೌಸಿಯಾ ಸ್ಟ್ರೀಟ್‌ನಿಂದ ಹೆಚ್ಚು ಸೂಕ್ತವಾದ ಸ್ಥಳಕ್ಕೆ ಸ್ಥಳಾಂತರಿಸಬೇಕು ಮತ್ತು ಭಟ್ಕಳಕ್ಕೆ ಜೀವಾಳವಾಗಿರುವ ಶರಾಬಿ ಹೊಳೆಯನ್ನು ಸ್ವಚ್ಛಗೊಳಿಸಿ ಪುನಶ್ಚೇತನಗೊಳಿಸಲು ಗಮನ ಹರಿಸಬೇಕು ಎಂದು ಆಗ್ರಹಿಸಲಾಗಿದೆ. ಸೆಪ್ಟೆಂಬರ್ ಅಂತ್ಯದೊಳಗೆ ಹೊಸ 80 ಎಚ್‌ಪಿ ಮೋಟರ್‌ ಅಳವಡಿಸಿ ಹೊಳೆಗೆ ಕೊಳಚೆ ನೀರು ಬಿಡುವುದನ್ನು ನಿಲ್ಲಿಸದಿದ್ದರೆ ಸಹಾಯಕ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಸ್ಥಳೀಯರು ಎಚ್ಚರಿಕೆ ನೀಡಿದರು.

ಪುರಸಭೆ ಉಪಾಧ್ಯಕ್ಷ ಅಲ್ತಾಪ್ ಖರೂರಿ, ಸ್ಥಾಯಿ ಸಮಿತಿಯ ಅಧ್ಯಕ್ಷ ಕೈಸರ್ ಮೊಹಿತೆಶಾಂ, ಪರಿಸರ ಅಭಿಯಂತರ ವೆಂಕಟೇಶ ನಾವುಡ, ಪುರಸಭೆ ಅಭಿಯಂತರ ಅರವಿಂದ ರಾವ್, ಸ್ಥಳೀಯರಾದ ಇಮ್ತಿಯಾಜ ಉದ್ಯಾವರ, ಕೆ.ಎಂ. ಅಸ್ಫಾಖ್, ಖಲೀಮುಲ್ಲಾ, ಅಜೀಜುರೆಹಮಾನ ಮುಂತಾದವರಿದ್ದರು.

Share this article