ಮೂಲಭೂತ ಸೌಕರ್ಯ ಕಲ್ಪಿಸದ ಪುರಸಭೆ ವಿರುದ್ದ ಬಡಾವಣೆ ಜನರ ಆಕ್ರೋಶ
ಬೀರೂರು ಎನ್. ಗಿರೀಶ್ಕನ್ನಡಪ್ರಭ ವಾರ್ತೆ,ಬೀರೂರು
ಪಟ್ಟಣದ ರೈಲ್ವೇ ಸ್ಷೇಷನ್ ಪಕ್ಕದಲ್ಲಿ ಪುರಸಭೆ ಆಶ್ರಯ ಸಮಿತಿ ಮನೆ ಇಲ್ಲದವರಿಗೆ ನಿರ್ಮಾಣ ಮಾಡಿರುವ ಭಾಗವತ್ ನಗರ ಹಲವು ಮೂಲಭೂತ ಸೌಕರ್ಯಗಳಿಲ್ಲದೆ ಬಡಾವಣೆ ಜನರು ಪುರಸಭೆ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.ಒಂದು ಬಡಾವಣೆ ನಿರ್ಮಾಣವಾಗಬೇಕಾದರೆ ಅದಕ್ಕೆ ಬೇಕಾಗುವ ಮೂಲಭೂತ ಸೌಕರ್ಯ ನೀಡಿ ಹಕ್ಕುಪತ್ರ ವಿತರಣೆ ಮಾಡಬೇಕು. ಆದರೆ ಈ ಬಡಾವಣೆಗೆ ಇದು ತದ್ವಿರುದ್ದ ಎಂದು ಕಾಣುತ್ತದೆ. ಇಲ್ಲಿನ ನಿವಾಸಿಗಳು ಹಲವು ಬಾರಿ ಬಡಾವಣೆ ರಸ್ತೆ ಸಂಪರ್ಕ ಮಾಡಲು ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನ ವಾಗಿಲ್ಲ.ಸತ್ತ ಹೆಣ ತೆಗೆದು ಕೊಂಡು ಹೋಗಲು ರಸ್ತೆ ಮಾಡಿಸುವಂತೆ ಒತ್ತಾಯಿಸಿ ಪುರಸಭೆ ಎದುರು ಧರಣಿ ಮಾಡಿದ್ದಲ್ಲದೆ, ಮಾಜಿ ಶಾಸಕ ದತ್ತ ಇದ್ದ ಸಂದರ್ಭದಲ್ಲಿ ರಸ್ತೆ ಮಾಡಿಸಿಕೊಡುವಂತೆ ಮನವಿ ಮಾಡಿದ ಪರಿಣಾಮ, ಈ ಬಡಾವಣೆ ರಸ್ತೆಗೆ ಭೂ ಮಾಲಿಕರ ಮನವೊಲಿಸಿ ಜಾಗ ಪಡೆದರು. ತದ ನಂತರ ಬಂದ ಬೆಳ್ಳಿಪ್ರಕಾಶ್ ಶಾಸಕರಾದ ಅವಧಿಯಲ್ಲಿ ಬಡಾವಣೆಯವರ ಗೋಳು ಕೇಳದೆ ರೈಲ್ವೇ ಕ್ವಾಟ್ರಸ್ ನಿಂದ ಭಾಗವತ್ ನಗರಕ್ಕೆ ರಸ್ತೆ ನಿರ್ಮಾಣ ಮಾಡಲು ಪಣ ತೊಟ್ಟು ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಿದರು. ಜೊತೆಗೆ ರಸ್ತೆ ಮಾಡಲು ಸಂಬಂದ ಪಟ್ಟ ಗುತ್ತಿಗೆ ದಾರರಿಗೆ ಕಡಕ್ ಸೂಚನೆ ನೀಡಿ, ನನ್ನ ಈ ಕಾರು ಕೊಚ್ಚೆ ಯನ್ನು ದಾಟದಂತೆ ನೇರವಾಗಿ ಬಡಾವಣೆ ತಲುಪಬೇಕು ಎಂದು ಸೂಚಿಸಿದ ಪರಿಣಾಮ ರಸ್ತೆ ಕೆಲಸ ಆರಂಭವಾಗಿ ಬಡಾವಣೆ ಜನ ಕೊಂಚ ನಿಟ್ಟುಸಿರು ಬಿಟ್ಟಿದ್ದರು.ಅದಾದ ನಂತರ ಕೆಲಸ ಆರಂಭವಾಗಿ ಟಾರ್ ರಸ್ತೆ ಸಂಪೂರ್ಣವಾಗುತ್ತದೆ ಎಂದು ಕಾಯುತ್ತಿದ್ದ ಬಡಾವಣೆ ಜನತೆಗೆ ಶಾಕ್ ಕಾದಿದ್ದು , ಅದು ಅರ್ಧ ಮಾತ್ರ ಆಗಿ ಇಂದಿಗೂ ವೃದ್ದರು, ಶಾಲಾ ಮಕ್ಕಳು, ವಾಹನ ಸವಾರರು ಓಡಾಡುವುದಕ್ಕೆ ಜೀವವನ್ನು ಕೈಲಿ ಹಿಡಿದು ಪ್ರಯಾಣ ಮಾಡುವ ಸ್ಥಿತಿ ಎದುರಾಗಿದೆ.---ಕೋಟ್...
ಮಾಜಿ ಶಾಸಕ ವೈ.ಎಸ್.ವಿ.ದತ್ತ ಮತ್ತು ಬೆಳ್ಳಿಪ್ರಕಾಶ್ ರವರ ಪ್ರಾಮಾಣಿಕ ಪ್ರಯತ್ನದ ಫಲವಾಗಿ ರಸ್ತೆ ಏನೋ ಬಂತು ಆದರೆ, ಅದೂ ಪೂರ್ಣವಾಗಲಿಲ್ಲ. ಬಡಾವಣೆ ಜನರ ಸಂಕಷ್ಟ ತಿಳಿದು ಇದಕ್ಕೆ ಮುಕ್ತಿ ನೀಡಬೇಕೆಂದಿದ್ದವರ ಶ್ರಮ ಕೆಲವರ ಸ್ವಾರ್ಥದಿಂದಾಗಿ ರಸ್ತೆ ಸಂಪರ್ಕ ಪೂರ್ಣವಾಗಿಲ್ಲ. ಇಲ್ಲಿ ಈ ಬಡಾವಣೆ ಜನ ಮಾತ್ರ ಓಡಾಡುವುದಿಲ್ಲ, ಜೊತೆಗೆ ಮುದ್ದಾಪುರದ ಎರೆ ಬಯಲಿನ ಜನರು ಕೂಡ ಇದೇ ಸಂಪರ್ಕ ರಸ್ತೆಯಲ್ಲಿ ತಿರುಗಾಡುತ್ತಾರೆ. ಇಲ್ಲಿ ನಡೆಯುವುದು ಒಂದು ಕಡೆ ಸರ್ಕಸ್ ಆದರೆ ವಿದ್ಯಾರ್ಥಿಗಳ ಪಾಡು ಹೇಳತೀರಲಾಗಿದೆ.ನಾಗರತ್ನ ರಮೇಶ್. ಬಡಾವಣೆ ನಿವಾಸಿ.--ಭಾಗವತ್ ನಗರ ಬಡಾವಣೆ ಸಮಸ್ಯೆಗಳ ಬಗ್ಗೆ ದೂರು ಬಂದಿದ್ದು ಪರಿಶೀಲಿಸಲಾಗಿದೆ. ಹಿಂದೆ ಬಂದ ಅನುದಾನ ಖರ್ಚಾಗಿದ್ದು, ಮುಂಬರುವ ನಗರೋತ್ಥಾನ ಯೋಜನೆಯ ೫ ಕೋಟಿಯಡಿ ಅರ್ಧ ರಸ್ತೆಯನ್ನು ಸೇರಿಸಿ ಮಂಜೂರು ಮಾಡಿಸಿ, ರಸ್ತೆ ಕಾಮಗಾರಿ ಪೂರ್ಣಗೊಳಿಸಿಕೊಡಲಾಗುವುದು. ಯಾವ ಸಮಸ್ಯೆ ಎದುರಾಗದಂತೆ ಪುರಸಭೆ ಎಚ್ಚರ ವಹಿಸಲಾಗುವುದು.
ಈ.ಪ್ರಕಾಶ್ ,ಪ್ರಭಾರ ಮುಖ್ಯಾಧಿಕಾರಿ, ಪುರಸಭೆ ೨೬ ಬೀರೂರು ೪ಬೀರೂರು ಪಟ್ಟಣ ವ್ಯಾಪ್ತಿಯ ಭಾಗವತ್ ನಗರ ರಸ್ತೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತು, ಕೆಸರಿಂದ ಕೂಡಿರುವ ರಸ್ತೆಯಲ್ಲಿ ಜನ ಸಂಚರಿಸಲಾಗದೆ ನೀರು ತುಂಬಿಕೊಂಡಿರುವುದು.