ಕಾಡಾನೆಗಳ ಉಪಟಳಕ್ಕೆ ಕಡಿವಾಣ ಹಾಕಲು ಗ್ರಾಮಸ್ಥರ ಆಗ್ರಹ

KannadaprabhaNewsNetwork | Published : Jun 13, 2024 12:56 AM

ಸಾರಾಂಶ

ಚಿಕ್ಕಮಗಳೂರು, ಕಾಡಾನೆಗಳ ಉಪಟಳಕ್ಕೆ ಕಡಿವಾಣ ಹಾಕಬೇಕೆಂದು ತಾಲೂಕಿನ ಹೊಲದಗದ್ದೆ, ಮೇಲುಹೊಲದಗದ್ದೆ, ತೋಟದಮಕ್ಕಿ ಹಾಗೂ ಕೊಂಡದ ಖಾನ್ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

ಚಿಕ್ಕಮಗಳೂರು ಡಿಎಫ್‌ಒ ರಮೇಶ್‌ಬಾಬುಗೆ ಮನವಿ ಸಲ್ಲಿಕೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಾಡಾನೆಗಳ ಉಪಟಳಕ್ಕೆ ಕಡಿವಾಣ ಹಾಕಬೇಕೆಂದು ತಾಲೂಕಿನ ಹೊಲದಗದ್ದೆ, ಮೇಲುಹೊಲದಗದ್ದೆ, ತೋಟದಮಕ್ಕಿ ಹಾಗೂ ಕೊಂಡದ ಖಾನ್ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

ಈ ಸಂಬಂಧ ಚಿಕ್ಕಮಗಳೂರು ಡಿಎಫ್‌ಒ ರಮೇಶ್‌ಬಾಬು ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು. ಬಳಿಕ ಮಾತನಾಡಿದ ಬೆಳೆಗಾರರ ಹಿತರಕ್ಷಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿ ಹೊಲದಗದ್ದೆ ಗಿರೀಶ್, ಮೇಲು ಹೊಲದಗದ್ದೆ, ತೋಟದಮಕ್ಕಿ ಹಾಗೂ ಕೊಂಡದಖಾನ್ ಗ್ರಾಮಗಳಲ್ಲಿ ಕಳೆದ 3-4 ತಿಂಗಳಿಂದ ಕಾಡಾನೆ ಗಳು ಬೀಡು ಬಿಟ್ಟಿವೆ. ಕಾಫಿ, ಅಡಕೆ ಹಾಗೂ ಬಾಳೆಯನ್ನು ನಾಶಪಡಿಸಿವೆ ಎಂದರು.

ಈ ಸಂಬಂಧ ಹಲವಾರು ಬಾರಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸಂಬಂಧಿಸಿದ ಅಧಿಕಾರಿ ವೃಂದ ಸ್ಪಂದಿಸುತ್ತಿದ್ದಾರೆ ಹೊರತು ಕಾಡಾನೆಗಳ ಬೇರೆಡೆ ಸ್ಥಳಾಂತರಿಸಲು ವಿಫಲರಾಗಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ ಎಂದು ಹೇಳಿದರು.

ಕಾಡಾನೆಗಳ ಹಾವಳಿಯಿಂದ ಗ್ರಾಮಸ್ಥರ ಜೀವನ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಪ್ರತಿನಿತ್ಯ ಹಗಲು ರಾತ್ರಿ ಎನ್ನದೇ ರೈತರು, ಕಾರ್ಮಿಕರು ಜೀವಭಯದಲ್ಲಿ ಬದುಕುವ ವಾತಾವರಣ ಸೃಷ್ಟಿಯಾಗಿದೆ. ಪ್ರತಿಯೊಬ್ಬರ ಮನೆ ಸಮೀಪ ಪಟಾಕಿ ಸಿಡಿಸುತ್ತಿರುವ ಕಾರಣ ದೀಪಾವಳಿ ಹಬ್ಬದಂತೆ ವ್ಯಕ್ತವಾಗುತ್ತಿದೆ ಎಂದರು. ಹೀಗಾಗಿ ಈ ಭಾಗದಲ್ಲಿ ಕಾಡಾನೆಗಳನ್ನು ಅರಣ್ಯಕ್ಕೆ ಸ್ಥಳಾಂತರಿಸಬೇಕು. ಇಲ್ಲದಿದ್ದಲ್ಲಿ ಗ್ರಾಮಸ್ಥರಿಗೆ ಸೂಕ್ತ ಪರಿಹಾರ ನೀಡಿದರೆ ಗ್ರಾಮ ತೊರೆಯುವ ತೀರ್ಮಾನಕ್ಕೆ ಬಂದಿದ್ದೇವೆ ಎಂದ ಅವರು, ಆನೆಗಳನ್ನು ಹಿಡಿದು ಬೇರೆಡೆ ಸ್ಥಳಾಂತರಿಸಿದರೆ ಗ್ರಾಮಸ್ಥರಿಗೆ ಶಾಶ್ವತ ಪರಿಹಾರ ಸಿಗಲಿದೆ ಎಂದರು.ಟ್ರೆಂಚ್ ಹೊಡಿಯುವುದು, ಬೇಲಿ ನಿರ್ಮಿಸುವ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಲ್ಲಿ ಗ್ರಾಮಸ್ಥರು ನಿಟ್ಟಿಸಿರು ಬಿಡಬಹುದು. ಹಾಗೆಯೇ ಕಾಫಿ ತೋಟದ ಮಾಲೀಕರು ತೋಟದಲ್ಲಿ ಬೆಳೆದು ನಿಂತಿರುವ ಬಗನೆ ಸೊಪ್ಪು, ಹಲಸಿನ ಹಣ್ಣು ಇತ್ಯಾದಿ ಆನೆಗಳ ಆಹಾರವನ್ನು ಮಾಲೀಕರು ಕೊಡಲು ಸಿದ್ದರಿದ್ದಾರೆ ಎಂದರು.ಜಿಲ್ಲೆಯ ಪ್ರಭಾವಿ ರಾಜಕಾರಣಿಯೊಬ್ಬರಿಗೆ ಸೇರಿದ ಕಾಫಿ ತೋಟ ಮುತ್ತೋಡಿ ಅಭಯಾರಣ್ಯದ ಸಮೀಪ ದಲ್ಲಿದೆ. ಆ ಸ್ಥಳದಲ್ಲಿ ಹೆಲಿಪ್ಯಾಡ್ ನಿರ್ಮಾಣ ಸೇರಿದಂತೆ ಇನ್ನಿತರೆ ಯೋಜನೆಗಳನ್ನು ಕೈಗೊಂಡಿರುವ ಪರಿಣಾಮ ಕಾಡುಪ್ರಾಣಿಗಳು ಊರಿಗೆ ಬರುವಂತಾಗಿದೆ ಎಂದು ಹೇಳಿದರು.

ಕಾಡಿನಲ್ಲಿ ಆಹಾರವಿಲ್ಲದೇ ಪರದಾಡುವ ಪರಿಸ್ಥಿತಿಯಲ್ಲಿ ಪ್ರಾಣಿಗಳಿವೆ. ಪ್ರತಿ ವರ್ಷ ವನ್ಯಪ್ರಾಣಿ ಸಂರಕ್ಷಣೆ, ಹಣ್ಣಿನ ಗಿಡಗಳನ್ನು ಬೆಳೆಸಲು ಹಾಗೂ ಇನ್ನಿತರ ಅರಣ್ಯ ಅಭಿವೃದ್ಧಿಗೆ ಇಲಾಖೆಗೆ ಬರುವ ಅನುದಾನ ಎಲ್ಲಿವೇ ಎಂಬ ಪ್ರಶ್ನೆಗಳು ಉದ್ಬವಿಸಿದೆ ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯಾಧಿಕಾರಿ ರಮೇಶ್ ಬಾಬು, ಕಾಡಾನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ತಂತಿ ಬೇಲಿ ನಿರ್ಮಿಸಲಾಗುವುದು. ಅಲ್ಲದೇ ಮೂರ್‍ನಾಲ್ಕು ತಂಡಗಳನ್ನು ರಚಿಸಿ ಆಯಾಯ ಸ್ಥಳಗಳಿಗೆ ಸಿಬ್ಬಂದಿ ಯೊಂದಿಗೆ ಭೇಟಿ ನೀಡಿ ಕಾಡಾನೆಗಳನ್ನು ಬೇರೆಡೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಗ್ರಾಮಸ್ಥರಾದ ವಿನಯ್ ರಾಜ್, ಪೂರ್ಣೇಶ್, ಎಚ್.ಎಂ. ಸ್ವರೂಪ್, ವೆಂಕಟೇಶ್ ಮಾನ್ವಿತ್, ಪ್ರಸನ್ನ ಹಾಜರಿದ್ದರು.

12 ಕೆಸಿಕೆಎಂ 3ಕಾಡಾನೆಗಳ ಉಪಟಳಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ಚಿಕ್ಕಮಗಳೂರು ತಾಲೂಕಿನ ಹೊಲದಗದ್ದೆ, ಮೇಲು ಹೊಲದಗದ್ದೆ, ತೋಟದಮಕ್ಕಿ ಹಾಗೂ ಕೊಂಡದಖಾನ್ ಗ್ರಾಮಸ್ಥರು ಡಿಎಫ್‌ಓ ರಮೇಶ್‌ಬಾಬು ಅವರಿಗೆ ಬುಧವಾರ ಮನವಿ ಸಲ್ಲಿಸಿದರು. ಹೊಲದಗದ್ದೆ ಗಿರೀಶ್‌, ವಿನಯ್ ರಾಜ್‌, ಪೂರ್ಣೇಶ್‌ ಇದ್ದರು.

Share this article