ದೇವರ ಒಳಾಂಗಣ ಪ್ರವೇಶ: ಕುಕ್ಕೆಯಲ್ಲಿ ನಿತ್ಯೋತ್ಸವ ಸಮಾಪ್ತಿ

KannadaprabhaNewsNetwork | Published : Jun 13, 2024 12:56 AM

ಸಾರಾಂಶ

ಶುದ್ಧ ಷಷ್ಠಿಯ ದಿನ ಹೊರಾಂಗಣದಲ್ಲಿ ಪಾಲಕಿ ಮತ್ತು ಬಂಡಿ ಉತ್ಸವ ನೆರವೇರಿದ ಬಳಿಕ ಶ್ರೀ ದೇವರು ಒಳಾಂಗಣ ಪ್ರವೇಶಿಸುವುದರೊಂದಿಗೆ ಕ್ಷೇತ್ರದಲ್ಲಿ ಉತ್ಸವಗಳು ಕೊನೆಯಾಗಿವೆ.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ

ಪ್ರಸಿದ್ದ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶ್ರೀದೇವರ ಹೊರಾಂಗಣ ಉತ್ಸವಾದಿಗಳು ಬುಧವಾರ ತೆರೆ ಕಂಡವು. ದೇವರು ಒಳಾಂಗಣ ಪ್ರವೇಶಿಸುವುದರೊಂದಿಗೆ ಶ್ರೀ ದೇವರ ನಿತ್ಯೋತ್ಸವ ಸಂಪನ್ನವಾಯಿತು. ಶುದ್ಧ ಷಷ್ಠಿಯ ದಿನ ಹೊರಾಂಗಣದಲ್ಲಿ ಪಾಲಕಿ ಮತ್ತು ಬಂಡಿ ಉತ್ಸವ ನೆರವೇರಿದ ಬಳಿಕ ಶ್ರೀ ದೇವರು ಒಳಾಂಗಣ ಪ್ರವೇಶಿಸುವುದರೊಂದಿಗೆ ಕ್ಷೇತ್ರದಲ್ಲಿ ಉತ್ಸವಗಳು ಕೊನೆಯಾಗಿವೆ.

ಜೇಷ್ಠ ಶುದ್ಧಷಷ್ಠಿಯ ದಿನ ರಾತ್ರಿ ಮಹಾಪೂಜೆಯ ಬಳಿಕ ಹೊರಾಂಗಣದಲ್ಲಿ ಬಂಡಿ ಉತ್ಸವ ಮತ್ತು ಪಾಲಕಿ ಉತ್ಸವಗಳು ನೆರವೇರಿದವು. ಆನೆ, ಬಿರುದಾವಳಿ, ಬ್ಯಾಂಡ್, ನಾದಸ್ವರ, ಸ್ಯಾಕ್ಸೋಪೋನ್‌ಗಳನ್ನೊಳಗೊಂಡ ಹೊರಾಂಗಣ ಉತ್ಸವ ನೆರವೇರಿತು. ಈ ನಂತರ ದೇವಾಲಯನಗರದಲ್ಲಿ ದೇವರು ಗರ್ಭಗೃಹ ಪ್ರವೇಶಿಸುವುದರೊಂದಿಗೆ ನಿತ್ಯೋತ್ಸವವಕ್ಕೆ ತೆರೆಯಾಯಿತು.ದೇವರು ಒಳಗಾದ ನಂತರ ಒಳಾಂಗಣದ ಕಟ್ಟೆಯಲ್ಲಿ ಪೂಜೆ ಮತ್ತು ವಸಂತ ಪೂಜೆ ನೆರವೇರಿತು. ಆ ಬಳಿಕ ಪಂಚಾಂಗ ಶ್ರವಣ ನಡೆಯಿತು. ನಂತರ ಫಲವಸ್ತುಗಳನ್ನು ಪ್ರಸಾದ ರೂಪದಲ್ಲಿ ಭಕ್ತಾದಿಗಳಿಗೆ ವಿತರಿಸಲಾಯಿತು.

ಸುಬ್ರಹ್ಮಣ್ಯ ದೇವರ ಉತ್ಸವಮೂರ್ತಿ ದೇವಳದ ಹೊರಾಂಗಣ ಬಿಟ್ಟು ರಾಜಬೀದಿಗೆ ಬಂದು ರಥೋತ್ಸವ ಆಗಬೇಕಾದರೆ ಅದಕ್ಕೆ ಮುಂಚಿತವಾಗಿ ಕ್ಷೇತ್ರದ ದೈವಗಳ ಭಂಡಾರವು ಮೂಲಸ್ಥಾನದಿಂದ ದೇವಳದ ಹೊರಾಂಗಣದಲ್ಲಿರುವ ಹೊಸಳಿಗಮ್ಮನ ಗುಡಿಗೆ ಬರುತ್ತದೆ. ಅದೇ ರೀತಿ ಶ್ರೀ ದೇವರ ಉತ್ಸವ ಮೂರ್ತಿ ಗರ್ಭಗುಡಿ ಸೇರಿ ಉತ್ಸವಾದಿಗಳು ಮುಗಿದ ನಂತರ ದೈವಗಳ ಭಂಡಾರವು ಮೂಲಗುಡಿಗೆ ಸೇರಿತು.

ಸೇವೆಗಳು ಎಂದಿನಂತೆ: ಹರಕೆ ಉತ್ಸವಗಳು ಮಾತ್ರ ದೇವಳದಲ್ಲಿ ದೀಪಾವಳಿ ಅಮವಾಸ್ಯೆಯ ತನಕ ನಡೆಯುವುದಿಲ್ಲ ಆದರೆ ದಿನನಿತ್ಯ ನಡೆಯುವ ಹರಕೆ ಸೇವೆಗಳಾದ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ, ತುಲಾಭಾರ, ಪಂಚಾಮೃತ ಮಹಾಭಿಷೇಕ, ಶೇಷಸೇವೆ ಇತ್ಯಾದಿ ಸೇವೆಗಳು ಏಕಾದಶಿ ಮತ್ತಿತರ ಉಪವಾಸ ದಿನಗಳನ್ನು ಹೊರತು ಪಡಿಸಿ ಉಳಿದೆಲ್ಲಾ ದಿನಗಳಲ್ಲಿ ಎಂದಿನಂತೆ ಜರುಗುತ್ತವೆ.

Share this article