ಹಕ್ಕುಪತ್ರಕ್ಕಾಗಿ ‘ತುಂಗಭದ್ರಾ’ರೈತರ ಆಗ್ರಹ

KannadaprabhaNewsNetwork |  
Published : Mar 01, 2024, 02:18 AM IST
ಪೋಟೋ: 29ಎಸ್‌ಎಂಜಿಕೆಪಿ05ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ತುಂಗಭದ್ರಾ ಸಕ್ಕರೆ ಕಾರ್ಖಾನೆಯ ರೈತರು, ಕಾರ್ಮಿಕರು ಮತ್ತು ನಿವಾಸಿಗಳು ತಮ್ಮ ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ತುಂಗಭದ್ರಾ ಸಕ್ಕರೆ ಕಾರ್ಖಾನೆಯ ರೈತರು, ಕಾರ್ಮಿಕರು ಮತ್ತು ನಿವಾಸಿಗಳು ತಮ್ಮ ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ತುಂಗಭದ್ರಾ ಸಕ್ಕರೆ ಕಾರ್ಖಾನೆಯ ರೈತರು, ಕಾರ್ಮಿಕರು ಮತ್ತು ನಿವಾಸಿಗಳು ತಮ್ಮ ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಮಲವಗೊಪ್ಪದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಟ್ರ್ಯಾಕ್ಟರ್‌ಗಳು ಎತ್ತಿನ ಗಾಡಿಗಳ ಸಮೇತ ಪ್ರತಿಭಟನಾ ಮೆರವಣಿಗೆ ನಡೆಸಿದರು.ಕಳೆದ ಸುಮಾರು 50ರಿಂದ 60 ವರ್ಷಗಳಿಂದ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ಸಾಗುವಳಿ ಮಾಡಿಕೊಂಡು ಬಂದಿದ್ದೇವೆ. ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದೇವೆ. ಸುಮಾರು 10 ಸಾವಿರ ಕುಟುಂಬಗಳು ಇಲ್ಲಿವೆ. ಈಗ ಸಕ್ಕರೆ ಮಾಲೀಕನೆಂದು ಹೇಳಿಕೊಂಡು ಬಂದು ನಮಗೆಲ್ಲ ತೊಂದರೆ ಕೊಡುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು. ಮಲವಗೊಪ್ಪ, ತೊಪ್ಪಿನಗಟ್ಟ, ಹರಿಗೆ, ನಿಧಿಗೆ, ಹಕ್ಕಿಪಿಕ್ಕಿ ಕ್ಯಾಂಪ್, ಚಿಕ್ಕಮರಡಿ, ಹಾರೋಬೆನವಳ್ಳಿ, ತರಂಗನಹಳ್ಳಿ, ಪಿಳ್ಳಂಗೆರೆ, ಬಿ.ಬೀರನಹಳ್ಳಿ, ಎರಗನಾಳ್, ಹಾತೀಗಟ್ಟೆ ಹೀಗೆ ಸುಮಾರು ೧೪ ಗ್ರಾಮಗಳಲ್ಲಿ ಸಾವಿರಾರು ಕುಟುಂಬಗಳು ಸರ್ಕಾರಿ ಪಡ ಮತ್ತು ಜಮೀನಿನಲ್ಲಿ ಕಳೆದ50 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಈಗಾಗಲೇ ಫಾರಂ ನಂ.50, 53,57ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮನೆಗಳಿಗೆ 94 ಸಿಸಿ, 94 ಡಿಡಿ ಅರ್ಜಿ ಸಲ್ಲಿಸಿದ್ದಾರೆ. ಕೆಲವರಿಗೆ ಹಕ್ಕು ಪತ್ರಗಳು ಕೂಡ ನೀಡಲಾಗಿದೆ. ಸರ್ಕಾರದಿಂದ ಮೂಲ ಸೌಕರ್ಯ ಕೂಡ ನೀಡಿದ್ದಾರೆ. ಆದರೆ, ಈಗ ಸಕ್ಕರೆ ಕಾರ್ಖಾನೆ ಕಂಪನಿಯವರು ನಮ್ಮದು ಜಾಗ ಎಂದು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.ಸಕ್ಕರೆ ಕಾರ್ಖಾನೆಯ ನಕಲಿ ಮಾಲೀಕರ ಮಾಲೀಕತ್ವದ ಬಗ್ಗೆ ತನಿಖೆ ನಡೆಸಬೇಕು. ಸಾಗುವಳಿ ಮಾಡಿಕೊಂಡು ಬರುತ್ತಿರುವ ಎಲ್ಲಾ ರೈತರಿಗೆ ಮತ್ತು ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು. ನಕಲಿ ಮಾಲೀಕ ಮತ್ತು ಗೂಂಡಾಗಳ ಸಹಾಯದಿಂದ ನೂರಾರು ಕಾರ್ಮಿಕರನ್ನು ಒಕ್ಕಲೆಬ್ಬಿಸಿ ಮನೆಗಳನ್ನು ಡೆಮಾಲಿಶ್ ಮಾಡಿದ್ದು, ನಕಲಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಶಾಸಕಿ ಶಾರದ ಪೂರ್ಯಾನಾಯ್ಕ್‌, ರೈತ ಮುಖಂಡ ಕೆ.ಟಿ.ಗಂಗಾಧರ್, ಭೂ ಹಕ್ಕು ಹೋರಾಟ ಸಮಿತಿಯ ಪ್ರಮುಖರಾದ ವಿಜಯಕುಮಾರ್ ಎಂ.ಬಿ.ಕೃಷ್ಣಪ್ಪ, ಕುಮಾರ್, ದೇವರಾಜ್, ರಂಗಪ್ಪ, ರಾಮೇಗೌಡ, ಭಾಗ್ಯ, ರಾಮಕೃಷ್ಣ ಮಂಜುನಾಥ್, ಗಿರೀಶ್, ನಾಗೇಂದ್ರ ಸೇರಿದಂತೆ ಹಲವು ಪಾಲ್ಗೊಂಡಿದ್ದರು. ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ತುಂಗಭದ್ರಾ ಸಕ್ಕರೆ ಕಾರ್ಖಾನೆಯ ರೈತರು, ಕಾರ್ಮಿಕರು ಮತ್ತು ನಿವಾಸಿಗಳು ತಮ್ಮ ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ