ಚವಡಾಪುರ: ಚಿತ್ತಾಪುರ ತಾಲೂಕಿನ ಕುಲಗುರ್ತಿ ಗ್ರಾಮದ ದೇವಾನಂದ ಕೊರಬಾಕೊಲೆ ಮಾಡಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಅವರಿಗೆ ಕಾನೂನಾತ್ಮಕ ಶಿಕ್ಷೆ ವಿಧಿಸಬೇಕೆಂದು ಕೋಲಿ ಸಮಾಜದ ಮುಖಂಡ ಅವ್ವಣ್ಣ ಮ್ಯಾಕೇರಿ ಆಗ್ರಹಿಸಿದರು. ಅಫಜಲ್ಪುರ ತಾಲೂಕಿನ ಚವಡಾಪುರದಲ್ಲಿ ಕೋಲಿ ಸಮಾಜದ ಪ್ರಮುಖರೊಂದಿಗೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಕುಲಗುರ್ತಿ ಗ್ರಾಮದ ಕಬ್ಬಲಿಗ ದೇವಾನಂದ ಕೊರಬಾ ಅವರನ್ನು ಸಾಯಿಸಲಾಗಿದ್ದು ಅವರ ಕುಟುಂಬವಿಗ ಬೀದಿಗೆ ಬಿದ್ದಂತಾಗಿದೆ. ಸಾವಿಗೆ ಕಾರಣರಾದವರನ್ನು ಸರ್ಕಾರ ಕೂಡಲೇ ಬಂಧಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕು, ಮೃತನ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಿ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕೆಂದು ಎಂದರು. ಪ್ರಕರಣ ಬೇಧಿಸುವಲ್ಲಿ ಲೋಪವೆಸಗಿದ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು, ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿರುವ ಸಮಾಜದ ಮುಖಂಡರ ಮೇಲೆ ವಿನಾಕಾರಣ ದೂರುಗಳನ್ನು ದಾಖಲಿಸಲಾಗಿದ್ದು ಅವುಗಳನ್ನು ಕೈಬಿಡಬೇಕು. 16 ವರ್ಷದ ಬಾಲಕಿಯನ್ನು ಅಪಹರಣ ಮಾಡಿರುವ ಆರೋಪಿಗಳನ್ನು ಬಂಧಿಸುವ ಕಾರ್ಯ ತುರ್ತಾಗಿ ಆಗಬೇಕು ಎಂದು ಗೃಹ ಇಲಾಖೆಗೆ ಒತ್ತಾಯಿಸಿದರು. ವರಲಿಂಗ ಸ್ವಾಮಿಗಳು, ದಿಗಂಬರ ಡಾಂಗೆ, ಲಕ್ಷ್ಮಣ ಹೆರೂರ, ದಿಗಂಬರ ಕಾಡಪ್ಪಗೋಳ ಮಾತನಾಡಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಮಹಾಂತೇಶ ತಳವಾರ, ವಿಜಯ ವಡಗೇರಿ, ಯಲ್ಲಪ್ಪ ರಮಗಾ, ಆನಂದ ಜಮಾದಾರ, ಸಂಗಪ್ಪ ಬೆಳಗುಂಪಿ, ಸುಭಾಷ ದುಕನಾದಾರ, ದತ್ತು ಹೆರೂರ, ಭಾಗಪ್ಪ, ಗಿರಿಶ ಚಕ್ರ, ನಿಂಗಣ್ಣ ದೇವಣಗಾಂವ, ಮಲ್ಲಿಕಾರ್ಜುನ ವಾಲಿಕಾರ, ಯಲ್ಲಪ್ಪ ಮುದಕಣ ಸೇರಿದಂತೆ ಅನೇಕರು ಇದ್ದರು.