ಯುವತಿ ಕೊಲೆ: ಆರೋಪಿಗಳ ಬಂಧನಕ್ಕೆ ಆಗ್ರಹ

KannadaprabhaNewsNetwork |  
Published : Sep 04, 2024, 01:51 AM IST
ಚಿತ್ರ 3ಬಿಡಿಆರ್54ಎ | Kannada Prabha

ಸಾರಾಂಶ

ಬಸವಕಲ್ಯಾಣ ತಾಲೂಕಿನ ಗುಣತಿರ್ಥವಾಡಿ ಗ್ರಾಮದಲ್ಲಿ ಇತ್ತೀಚೆಗೆ ಯುವತಿ ನಾಪತ್ತೆಯಾಗಿ ಶವವಾಗಿ ಪತ್ತೆ. ಬಸವಕಲ್ಯಾಣದಲ್ಲಿ ತಾಲೂಕು ಟೋಕರಿ ಕೋಲಿ ಸಮಾಜದಿಂದ ಪ್ರತಿಭಟನೆ. ಭಾಗ್ಯಶ್ರೀಯನ್ನು ಕೊಲೆ ಮಾಡಿದವರನ್ನು ಪತ್ತೆ ಹಚ್ಚಿ ಅವರಿಗೆ ಕಠಿಣ ಶಿಕ್ಷೆ ಆಗುವಂತೆ ಮಾಡಬೇಕು ಮತ್ತು ಅವರ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ಕಾಂಗ್ರೆಸ್ ಮುಖಂಡ ಶಂಕರ ಜಮಾದಾರ ಸರ್ಕಾರಕ್ಕೆ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ತಾಲೂಕಿನ ಗುಣತಿರ್ಥವಾಡಿ ಗ್ರಾಮದಲ್ಲಿ ಇತ್ತೀಚೆಗೆ ಯುವತಿ ಭಾಗ್ಯಶ್ರೀಯನ್ನು ಭೀಕರವಾಗಿ ಕೊಲೆ ಮಾಡಿರುವುದನ್ನು ಖಂಡಿಸಿ ತಾಲೂಕು ಟೋಕರಿ ಕೋಲಿ ಸಮಾಜದಿಂದ ಬಸವಕಲ್ಯಾಣದಲ್ಲಿ ಬೃಹತ್ ಪ್ರತಿಭಟನೆ ರ್‍ಯಾಲಿ ಹಮ್ಮಿಕೊಳ್ಳಲಾಯಿತು.

ಗಾಂಧಿ ವೃತ್ತದಿಂದ ತಹಸೀಲ್ ಕಚೇರಿವರೆಗೆ ನಡೆದ ರ್‍ಯಾಲಿ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಶಂಕರ ಜಮಾದಾರ, ದೇಶದಲ್ಲಿ ಇತ್ತೀಚೆಗೆ ಮಹಿಳೆಯರ ಮೇಲೆ ಬಲತ್ಕಾರ, ಅತ್ಯಾಚಾರ, ಕೊಲೆಗಳು ನಡೆಯುತ್ತಿದ್ದು ಈ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರ ಬೀಗಿ ಕಾನೂನು ಜಾರಿಗೆ ತಂದು ತಕ್ಷಣ ಶಿಕ್ಷೆಯಾಗುವ ವ್ಯವಸ್ಥೆ ಜಾರಿಗೆ ಬರಬೇಕು. ಭಾಗ್ಯಶ್ರೀಯನ್ನು ಕೊಲೆ ಮಾಡಿದವರನ್ನು ಪತ್ತೆ ಹಚ್ಚಿ ಅವರಿಗೆ ಕಠಿಣ ಶಿಕ್ಷೆ ಆಗುವಂತೆ ಮಾಡಬೇಕು ಮತ್ತು ಅವರ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಸಮಾಜದ ಮುಖಂಡರಾದ ವಾಲ್ಮೀಕಿ ಖನಕೂರೆ ಮಾತನಾಡಿ, ಕೋಲಿ ಸಮಾಜದ ಜನರು ಶಾಂತಿ ಪ್ರಿಯರು ಆದರೆ ಅಷ್ಟೇ ಕ್ರಾಂತಿಕಾರಿಗಳು ಎಂಬುದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು. ಈ ಕುರಿತು ಅಪರಾಧಿಗಳಿಗೂ ಉಗ್ರಶಿಕ್ಷೆಯಾಗುವಂತೆ ಸರ್ಕಾರ ನೋಡಿಕೊಳ್ಳಬೇಕು ಎಂದರು.

ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಜಗನ್ನಾಥ ಜಮಾದರ ಮಾತನಾಡಿ, ಮೇಲಿಂದ ಮೇಲೆ ಕೋಲಿ ಸಮಾಜದ ಯುವತಿಯರ ಮೇಲೆ ಬಲತ್ಕಾರ ನಡೆಯುತ್ತಿದೆ ಇದಕ್ಕೆ ಕಾರಣ ಏನು ಎಂದು ಸರ್ಕಾರ ಉತ್ತರಿಸಬೇಕು ನಮ್ಮ ಸಮಾಜದ ಜನರು ಜಾಗೃತರಾಗಬೇಕು. ಸರ್ಕಾರ ಎರಡು ದಿನದಲ್ಲಿ ಸೂಕ್ತ ಕ್ರಮ ಕೈಕೊಳ್ಳದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದರು.

ರಾಷ್ಟ್ರೀಯ ಬಸವದಳದ ತಾಲೂಕ ಅಧ್ಯಕ್ಷ ರವಿ ಕೊಳಕುರ, ಮುಜಾಹೀದ ಪಾಶಾ ಖುರೇಷಿ, ಗೋವಿಂದ ಚಾಮಾಲೆ, ಸಂಜು ಗಾಯಕವಾಡ, ರಾಜು ಹೊಸಮನಿ ಮುಂತಾದವರು ಮಾತನಾಡಿ, ಯುವತಿ ಕೊಲೆ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಅಪರಾಧಿಗಳಿಗೆ ಉಗ್ರ ಶಿಕ್ಷೆಯಾಗಬೇಕು.

ಪ್ರತಿಭಟನೆಯಲ್ಲಿ ಸಮಾಜದ ಮುಖಂಡರಾದ ರಾಮಣ್ಣ ಮಂಠಾಳೆ, ಹಣಮಂತ ಬೊಕ್ಕೆ, ಬಂಡೇಪ್ಪ ಕೌಡಿಯಾಳ, ಸಮಾಜದ ಗುರುಗಳಾದ ದತ್ತಾತ್ರೀ ಶ್ರೀಗಳು ಹಳ್ಳಿಖೇಡ, ತಾ.ಪಂ ಮಾಜಿ ಅಧ್ಯಕ್ಷ ಗುರುಲಿಂಗಪ್ಪ ಸೈದಾಪುರ, ಶ್ರೀನಿವಾಸ ರೆಡ್ಡಿ, ಆಕಾಶ ಖಂಡಾಳೆ, ಯುವರಾಜ ಭೇಂಡೆ ಸೇರಿದಂತೆ ಎಲ್ಲಾ ಸಮಾಜದ ಮುಖಂಡರು, ಗಣ್ಯರು ಪಾಲ್ಗೊಂಡಿದ್ದರು.

ಈ ಕುರಿತು ಬಸವಕಲ್ಯಾಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್.ಪಿ, ಡಿವೈಎಸ್‌ಪಿ ಭೇಟಿ ನೀಡಿ ತನಿಖೆ ಮುಂದುವರಿಸಲಾಗಿದೆ. ಪ್ರತಿಭಟನೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್‌ ಮಾಡಿದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌