ಗಜೇಂದ್ರಗಡ: ಲಿಂಗಾಯತ ಮಠಾಧೀಶರ ಒಕ್ಕೂಟದ ಕುರಿತು ಅಪಮಾನಕರ ಹೇಳಿಕೆ ನೀಡಿದ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದದೇಶ್ವರ ಸ್ವಾಮೀಜಿ ಅವರಿಗೆ ಕರ್ನಾಟಕ ರಾಜ್ಯ ಪ್ರವೇಶ ನಿಷೇಧಕ್ಕೆ ಆಗ್ರಹಿಸಿ ಇಲ್ಲಿನ ಬಸವ ಬ್ರಿಗೇಡ್ ನೇತೃತ್ವದಲ್ಲಿ ಬಸವಪರ ಹಾಗೂ ದಲಿತಪರ ಸಂಘಟನೆಗಳಿಂದ ಗುರುವಾರ ಮುಖ್ಯಮಂತ್ರಿಗಳಿಗೆ ಸ್ಥಳೀಯ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
ಸ್ವಾಮೀಜಿಯವರ ಮಾತುಗಳು ಬಸವಾಭಿಮಾನಿಗಳು ಹಾಗೂ ಲಿಂಗಾಯತ ಧರ್ಮಿಯರಿಗೆ ನೋವುಂಟು ಮಾಡಿವೆ. ಸ್ವಾಮೀಜಿ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ ಮನವಿದಾರರು, ಬಸವ ಅಭಿಯಾನದ ಯಶಸ್ಸು ಕಂಡು ಹೊಟ್ಟೆ ಉರಿಯಿಂದ, ಯಾರನ್ನೊ ಮೆಚ್ಚಿಸಲು ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅಸಂವಿಧಾನಿಕ ಪದಗಳನ್ನು ಬಳಕೆ ಮಾಡಿದ್ದಾರೆ. ಸ್ವಾಮೀಜಿ ಕ್ಷಮೆ ಕೇಳದಿದ್ದರೆ ಉಗ್ರ ಹೋರಾಟಕ್ಕೆ ಅಣಿಯಾಗುತ್ತೇವೆ. ಅಲ್ಲದೆ ಸರ್ಕಾರವು ಸ್ವಾಮೀಜಿ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವುದರ ಜತೆಗೆ ಕರ್ನಾಟ ರಾಜ್ಯ ಪ್ರವೇಶ ನಿಷೇಧ ಮಾಡಬೇಕು ಎಂದು ಆಗ್ರಹಿಸಿದರು.ಈ ವೇಳೆ ಬಸವ ಬ್ರಿಗೇಡ್ ರಾಜ್ಯ ಸಂಯೋಜಕ ಮಂಜು ಹೂಗಾರ, ಬಿ.ಎಸ್. ಶೀಲವಂತರ, ಶರಣು ಪೂಜಾರ, ಬಾಲು ರಾಠೋಡ, ಬಸವರಾಜ ಕೊಟಗಿ, ಕಳಕಯ್ಯ ಸಾಲಿಮಠ, ಮೈಲಾರಪ್ಪ ಸೋಂಪುರ, ಸಾಗರ ವಾಲಿ, ಪೀರು ರಾಠೋಡ, ರವಿ ಗಡೇದವರ ಸೇರಿ ಇತರರು ಇದ್ದರು. ಡೇಕೇರ್ ಸೆಂಟರ್ ಕೇಂದ್ರ ಸ್ಥಾಪನೆಗೆ ಅರ್ಜಿ
ಗದಗ: ಸಮುದಾಯ ಮಾನಸಿಕ ಆರೋಗ್ಯ ಹಗಲು ಆರೋಗ್ಯ ಕೇಂದ್ರ(ಮಾನಸದಾರ) ಮಾನಸಿಕ ರೋಗಿಗಳ ಪುನಶ್ಚೇತನಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಡೇಕೇರ್ ಸೆಂಟರ್(ಮಾನಸದಾರ) ಕೇಂದ್ರವನ್ನು ಸ್ಥಾಪಿಸಲು(ಎಕ್ಸಪ್ರೆಶನ್ ಆಫ್ ಇಂಟರೆಸ್ಟ್- ಆಸಕ್ತಿ ಅಭಿವ್ಯಕ್ತ) ಇಒಐ ಆಹ್ವಾನಿಸಿದೆ.ಜಿಲ್ಲೆಯ ಅರ್ಹ ಮತ್ತು ಅನುಭವ ಸರ್ಕಾರೇತರ ಸ್ವಯಂಸೇವಾ ಸಂಸ್ಥೆಗಳ ಅಧಿಸೂಚನೆ ಮತ್ತು ಅರ್ಜಿ ಸಲ್ಲಿಸಲು ವಿವರಗಳನ್ನು www.Kppp.karnataka.gov.in ವೆಬ್‌ಸೈಟ್‌ನಲ್ಲಿ ಪಡೆಯಬಹುದು. ಅಗತ್ಯ ಮಾಹಿತಿಯನ್ನು ನ. 7ರ ಸಂಜೆ 4ರೊಳಗೆ ಅಪ್‌ಲೋಡ್ ಮಾಡಬೇಕು. ಸಂಬಂಧಿಸಿದ ಎನ್‌ಜಿಒ ಸಂಸ್ಥೆಯವರು ಅಧಿಸೂಚನೆಯಲ್ಲಿ ತಿಳಿಸಿರುವಂತೆ ನ. 14ರಂದು ಬೆಳಗ್ಗೆ 11ಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಮೂಲ ದಾಖಲೆಗಳೊಂದಿಗೆ ಪರಿಶೀಲನೆಗಾಗಿ ಖುದ್ದಾಗಿ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯ ಗದಗ ದೂ. 08372- 233996, 231744 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.