ಗದಗ: ಲಿಂ. ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ೭೫ನೇ ಜಯಂತಿಯನ್ನು ಫೆ. ೨೧ರಂದು ಭಾವೈಕ್ಯತಾ ದಿನಾಚರಣೆ ಎಂದು ಆಚರಿಸಲಾಗುತ್ತಿದ್ದು, ಕಾರ್ಯಕ್ರಮಕ್ಕೆ ಆಕ್ಷೇಪಿಸಿ ದಿಂಗಾಲೇಶ್ವರ ಶ್ರೀಗಳು ಕೈಗೊಳ್ಳಲು ಉದ್ದೇಶಿಸಿರುವ ಪ್ರತಿಭಟನೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ತೋಂಟದ ಸಿದ್ಧಲಿಂಗ ಸ್ವಾಮಿಗಳ ಭಕ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ವೇಳೆ ತೋಂಟದಾರ್ಯ ಮಠದ ಹಿರಿಯ ಭಕ್ತರಾದ ಎಸ್.ಎಸ್ .ಕಳಸಾಪುರಶೆಟ್ಟರ ಮಾತನಾಡಿ, ಕೇಂದ್ರ ಸರ್ಕಾರದ ರಾಷ್ಟ್ರೀಯ ಕೋಮು ಸೌಹಾರ್ದತಾ ಹಾಗೂ ದೇಶದ ಏಕತಾ ಪ್ರಶಸ್ತಿ, ರಾಜ್ಯ ಸರ್ಕಾರದಿಂದ ಬಸವ ಪುರಸ್ಕಾರ ಹಾಗೂ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಲಿಂ. ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಭಾವೈಕ್ಯತೆಗಾಗಿ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ದೇಶದಲ್ಲೇ ಹೆಸರುವಾಸಿಯಾಗಿದ್ದರು. ಇಂಥ ಮಹಾತ್ಮರ ಜಯಂತಿಯನ್ನು ೨೦೧೯ರಿಂದಲೇ ಶ್ರೀಮಠದಿಂದ ಭಾವೈಕ್ಯತಾ ದಿನಾಚರಣೆಯನ್ನಾಗಿ ಆಚರಿಸುತ್ತಾ ಬರಲಾಗುತ್ತಿದ್ದು, ದಿಂಗಾಲೇಶ್ವರ ಶ್ರೀಗಳಿಗೆ ಈ ಕಾರ್ಯಕ್ರಮವನ್ನು ಧಿಕ್ಕರಿಸುವ ಯಾವುದೇ ಅರ್ಹತೆ ಇಲ್ಲ ಎಂದರು.
ಅಂಜುಮನ್ ಕಮಿಟಿ ಮುಖ್ಯಸ್ಥ ಹಾಗೂ ಶ್ರೀಮಠದ ಭಕ್ತರಾದ ಶೇಖ್ ಎಂ.ಜಿ. ಮಾತನಾಡಿ, ಶ್ರೀಮಠದ ಬಾಗಿಲನ್ನು ಹಾಗೂ ತಮ್ಮ ಹೃದಯದ ಬಾಗಿಲನ್ನು ಸರ್ವ ಜನಾಂಗದವರಿಗೆ ಮುಕ್ತವಾಗಿ ತೆರೆದಿಟ್ಟಿದ್ದ ತೋಂಟದ ಸಿದ್ಧಲಿಂಗ ಶ್ರೀಗಳು ಮಸೀದಿಗಳ ನಿರ್ಮಾಣಕ್ಕೆ ತಮ್ಮ ಮಠದ ಜಮೀನುಗಳನ್ನು ದಾನ ನೀಡುವ ಮೂಲಕ ಭಾವೈಕ್ಯತೆಯನ್ನು ಎತ್ತಿ ಹಿಡಿದಿದ್ದಾರೆ. ಶಿವಾನುಭವ ಕಾರ್ಯಕ್ರಮದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ-ಜೈನ ಹೀಗೆ ಸಕಲ ಧರ್ಮಗಳ ಮುಖ್ಯಸ್ಥರನ್ನು ಕರೆಸಿ ಅವರಿಂದ ಆಯಾ ಧರ್ಮದ ಉದಾತ್ತ ಚಿಂತನೆಗಳ ಕುರಿತು ಉಪನ್ಯಾಸ ನೀಡಲಿದ್ದಾರೆ. ಲಿಂ. ಗುರುಗಳ ಭಾವೈಕ್ಯ ನಿಲುವುಗಳು ಪ್ರಶ್ನಾತೀತವಾಗಿದ್ದು, ದಿಂಗಾಲೇಶ್ವರ ಶ್ರೀಗಳು ಪೂರ್ವಾಗ್ರಹ ಪೀಡಿತರಾಗಿ ಇಂಥ ನಡೆಯನ್ನು ಕೈಕೊಂಡಿರುವುದನ್ನು ನಾವು ಧಿಕ್ಕರಿಸುತ್ತೇವೆ ಎಂದರು.ದಲಿತ ಸಂಘದ ಮುಖ್ಯಸ್ಥ ಮೋಹನ ಆಲಮೇಲಕರ ಮಾತನಾಡಿ, ಭಾವೈಕ್ಯತೆ ಎಂಬುದು ಯಾರೊಬ್ಬರ ಖಾಸಗಿ ಸೊತ್ತಲ್ಲ, ಬದಲಿಗೆ ಅದು ಈ ದೇಶದ ಉಸಿರಾಗಿದ್ದು, ಇಂದಿನ ದಿನಗಳಲ್ಲಿ ಭಾವೈಕ್ಯತೆಯನ್ನು ಅತಿ ಹೆಚ್ಚು ಪ್ರಚುರಪಡಿಸಬೇಕಿದೆ. ಈ ಕಾರ್ಯವನ್ನು ಸಿದ್ಧಲಿಂಗ ಶ್ರೀಗಳು ತಮ್ಮ ಜೀವನದುದ್ದಕ್ಕೂ ಮಾಡಿಕೊಂಡು ಬಂದಿದ್ದರು. ಅವರು ಪೀಠಕ್ಕೆ ಬರುವ ಪೂರ್ವದಲ್ಲಿ ಶ್ರೀಮಠದ ಮುಂದೆ ಇದ್ದ ಲಿಂಗಾಯತರಿಗೆ ಮಾತ್ರ ಪ್ರವೇಶ ಎಂಬ ಬೋರ್ಡ್ ಕಿತ್ತೆಸೆದು ಶ್ರೀಮಠವನ್ನು ಎಲ್ಲ ಸಮುದಾಯಗಳ ಕೇಂದ್ರಸ್ಥಾನವನ್ನಾಗಿಸಿದರು. ಶ್ರೀಮಠದ ಜಾತ್ರೆಗಳಿಗೆ ಮುಸ್ಲಿಂ ಸೇರಿದಂತೆ ವಿವಿಧ ಸಮುದಾಯಗಳ ಭಕ್ತರನ್ನು ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಭಾವೈಕ್ಯತೆಗೆ ಹೊಸ ವ್ಯಾಖ್ಯಾನ ಬರೆದರು. ದಿಂಗಾಲೇಶ್ವರ ಶ್ರೀಗಳು ಇತಿಹಾಸ ತಿಳಿದುಕೊಳ್ಳುವ ಅನಿವಾರ್ಯತೆ ಇದ್ದು, ಪ್ರತಿಭಟನೆಯ ಬೆದರಿಕೆ ಒಡ್ಡುವುದು ಸ್ವಾಮೀಜಿಗಳಾದವರ ಘನತೆಗೆ ಶೋಭೆ ತರುವುದಿಲ್ಲ ಎಂದರು.
ಮಠದ ಭಕ್ತರಾದ ಡಾ. ನೂರಾಣಿ, ಚನ್ನಯ್ಯ ಹಿರೇಮಠ, ಶೇಖಣ್ಣ ಕಳಸಾಪುರಶೆಟ್ಟರ, ಎಸ್.ಬಿ. ಶೆಟ್ಟರ್, ಬಾಲಚಂದ್ರ ಭರಮಗೌಡರ, ಎಸ್.ಎನ್. ಬಳ್ಳಾರಿ, ಲೋಕೇಶ್, ಐ.ಬಿ. ಬೆನಕೊಪ್ಪ, ಕೆ.ಎಚ್. ಬೇಲೂರ, ಕೃಷ್ಣ ಪರಾಪುರ, ಅಶೋಕ ಕುಡತಿನಿ, ರಾಮು ಬಳ್ಳಾರಿ, ಮಂಜುನಾಥ ಕೋಟ್ನಿಕಲ್, ಪ್ರಕಾಶ ಅಸುಂಡಿ, ನಾರಾಯಣಸ್ವಾಮಿ, ಅಮರೇಶ ಅಂಗಡಿ, ಪಾಟೀಲ, ಶೇಖಣ್ಣ ಕವಳಿಕಾಯಿ, ಆರ್.ಎಸ್. ಗುಜಮಾಗಡಿ, ದಾನಯ್ಯ ಗಣಾಚಾರಿ, ಎಸ್.ಎಸ್. ಭಜಂತ್ರಿ, ವೈ.ಎನ್. ಗೌಡರ, ನಾಗರಾಜ ತಳವಾರ, ಮುರುಘೇಶ ಬಡ್ನಿ ಮುಂತಾದವರಿದ್ದರು.