ಕುಮಟಾತಾಲೂಕಿನಲ್ಲಿ ಅನಧಿಕೃತ ಸಿಗಡಿ ಕೃಷಿ ಬಂದ್ ಮಾಡಲು ಆಗ್ರಹ

KannadaprabhaNewsNetwork |  
Published : Jan 24, 2025, 12:46 AM IST
ಅನಧಿಕೃತ ಸಿಗಡಿ ಕೃಷಿ ವಿರೋಧಿಸಿ ಸಾರ್ವಜನಿಕರು ಕುಮಟಾ ತಾಲೂಕಾಡಳಿತಕ್ಕೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಕಾಲಕ್ರಮೇಣ ಪಂಚಾಯಿತಿ ಷರತ್ತುಗಳನ್ನು ಉಲ್ಲಂಘಿಸಿದ್ದರಿಂದ ಸಿಗಡಿ ಕೃಷಿಗೆ ನೀಡಿದ್ದ ಪರವಾನಗಿ ರದ್ದುಪಡಿಸಿ, ನೋಟಿಸ್ ನೀಡಿದ್ದರು. ಆದರೆ ವಿ.ಆರ್. ಅಕ್ವಾ ಫಾರ್ಮನವರು ಸಿಗಡಿ ಕೃಷಿಯನ್ನು ಅನಧಿಕೃತವಾಗಿ ಮುಂದುವರಿಸಿದ್ದಾರೆ.

ಕುಮಟಾ: ತಾಲೂಕಿನ ದೇವಗಿರಿ ಪಂಚಾಯಿತಿ ವ್ಯಾಪ್ತಿಯ ಹೊರಭಾಗದಲ್ಲಿ ಗ್ರಾಮ ಪಂಚಾಯಿತಿ ಷರತ್ತುಗಳನ್ನು ಉಲ್ಲಂಘಿಸಿ, ಅನಧಿಕೃತವಾಗಿ ನಡೆಸುತ್ತಿರುವ ಸಿಗಡಿ ಕೃಷಿಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಹೊರಭಾಗ ಹಾಗೂ ಸುತ್ತಮುತ್ತಲ ಗ್ರಾಮ ನಿವಾಸಿಗಳು, ಹರಿಕಾಂತ ಸಮಾಜದವರು ತಾಲೂಕಾಡಳಿತಕ್ಕೆ ಗುರುವಾರ ಮನವಿ ಸಲ್ಲಿಸಿದ್ದಾರೆ. ಸಂತೋಷ ಸಜ್ಜನ ಶೆಟ್ಟಿ ಮಾಲಿಕತ್ವದ ವಿ.ಆರ್. ಆಕ್ವಾ ಫಾರ್ಮಗೆ ದೇವಗಿರಿ ಪಂಚಾಯಿತಿಯು ಒಂದು ವರ್ಷಕ್ಕೆ ಸೀಮಿತವಾಗಿ ಇತರ ಷರತ್ತಿಗೊಳಪಟ್ಟು ಸಿಗಡಿ ಕೃಷಿ ನಡೆಸಲು ಪರವಾನಗಿ ನೀಡಲಾಗಿತ್ತು. ಆದರೆ ಕಾಲಕ್ರಮೇಣ ಪಂಚಾಯಿತಿ ಷರತ್ತುಗಳನ್ನು ಉಲ್ಲಂಘಿಸಿದ್ದರಿಂದ ಸಿಗಡಿ ಕೃಷಿಗೆ ನೀಡಿದ್ದ ಪರವಾನಗಿ ರದ್ದುಪಡಿಸಿ, ನೋಟಿಸ್ ನೀಡಿದ್ದರು. ಆದರೆ ವಿ.ಆರ್. ಅಕ್ವಾ ಫಾರ್ಮನವರು ಸಿಗಡಿ ಕೃಷಿಯನ್ನು ಅನಧಿಕೃತವಾಗಿ ಮುಂದುವರಿಸಿದ್ದಾರೆ. ಅನಧಿಕೃತ ಸಿಗಡಿ ಕೃಷಿಯಿಂದ ಸ್ಥಳೀಯವಾಗಿ ಸಾಂಪ್ರದಾಯಿಕ ಮೀನುಗಾರರ ಜೀವನೋಪಾಯಕ್ಕೆ ತೊಂದರೆಯಾಗಿದೆ. ಸಮುದ್ರ ದಂಡೆಯ ನೈಸರ್ಗಿಕ ಮರಳು ದಿಬ್ಬಗಳನ್ನು ಅವೈಜ್ಞಾನಿಕವಾಗಿ ಸಮತಟ್ಟು ಮಾಡಿರುವುದರಿಂದ ಮಳೆಗಾಲದಲ್ಲಿ ಸಮುದ್ರದ ನೀರು ಜನವಸತಿ ಪ್ರದೇಶಕ್ಕೆ ನುಗ್ಗುವ ಆತಂಕ ಎದುರಾಗಿದೆ. ಸಿಗಡಿ ಕೃಷಿಯ ತ್ಯಾಜ್ಯ ನೀರನ್ನು ಶುದ್ಧೀಕರಿಸದೇ ಹಾಗೆಯೇ ಹೊಂಡಗಳಲ್ಲಿ ಬಿಡುತ್ತಿದ್ದು, ಹೊಲಸು ನೀರು ಶೇಖರಣೆಗೊಂಡು ದುರ್ವಾಸನೆ ಹಾಗೂ ಸೊಳ್ಳೆಗಳ ಉತ್ಪತ್ತಿಯ ತಾಣವಾಗಿದೆ. ಮುಖ್ಯವಾಗಿ ಸಿಗಡಿ ಕೃಷಿಗೆ ಬಳಸಿದ ಸಮುದ್ರದ ಉಪ್ಪು ನೀರನ್ನು ಸಮರ್ಪಕವಾಗಿ ವಿಲೇವಾರಿ ಮಾಡದೇ ಒಂದೇ ಸ್ಥಳದಲ್ಲಿ ಶೇಖರಣೆ ಮಾಡಿದ್ದರಿಂದ ಊರಿನ ಬಾವಿ, ಕೊಳವೆಬಾವಿ ಮತ್ತು ಕೃಷಿ ಜಮೀನುಗಳು ಕಲುಷಿತಗೊಂಡು, ಕ್ಷಾರಮಯವಾಗಿ ಬರಡಾಗುವ ಮತ್ತು ಶಾಶ್ವತ ಸಮಸ್ಯೆ ಸೃಷ್ಟಿಯಾಗುತ್ತದೆ.

ಸಿಗಡಿ ಕೃಷಿಗೆ ಬಳಸುವ ಯಂತ್ರೋಪಕರಣಗಳಿಂದಲೂ ಮಾಲಿನ್ಯ ಮತ್ತು ರೋಗಕಾರಕವಾಗಿದೆ. ಈ ಬಗ್ಗೆ ಸ್ಥಳೀಯವಾಗಿ ಸಂಘರ್ಷದ ವಾತಾವರಣಕ್ಕೂ ಕಾರಣವಾಗಿದೆ. ಇದೇ ರೀತಿ ಬ್ರಹ್ಮ ಆಕ್ವಾ ಫಾರ್ಮ್ ಎಂಬ ಹೆಸರಿನಲ್ಲಿ ಬೇರೊಂದು ಅನಧಿಕೃತ ಸಿಗಡಿ ಕೃಷಿಯೂ ಈ ಭಾಗದಲ್ಲಿ ನಡೆಯುತ್ತಿದೆ. ಹೊರಭಾಗದ ಸಾರ್ವಜನಿಕರು ಹಲವು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದು, ಪಂಚಾಯಿತಿಯಿಂದ ಸಿಗಡಿ ಕೃಷಿ ತೆರವುಗೊಳಿಸಲು ನೋಟಿಸ್ ನೀಡಿದರೂ ಅನಧಿಕೃತವಾಗಿ ಸಿಗಡಿ ಕೃಷಿ ಮುಂದುವರಿದಿದೆ. ಕೂಡಲೇ ಸೂಕ್ತ ಕ್ರಮ ಕೈಗೊಂಡು ಸಿಗಡಿ ಕೃಷಿ ಬಂದ್ ಮಾಡಬೇಕು. ಇಲ್ಲದಿದ್ದರೆ ನಮ್ಮ ಶಾಂತಿಯುತ ಹೋರಾಟ ಉಗ್ರ ಆಯಾಮ ಪಡೆದುಕೊಳ್ಳುವ ಅನಿವಾರ್ಯತೆ ಎದುರಾಗಲಿದೆ ಎಂದು ಮನವಿಯಲ್ಲಿ ಉಪವಿಭಾಗಾಧಿಕಾರಿಗೆ ತಿಳಿಸಲಾಗಿದೆ.

ಮನವಿಯನ್ನು ತಾಲೂಕು ಕಚೇರಿಯ ಚುನಾವಣೆ ಶಿರಸ್ತೇದಾರ ವಸಂತ ಸಾಮಂತ ಸ್ವೀಕರಿಸಿದರು. ಹೊರಭಾಗ ಹರಿಕಾಂತ ಸಮಾಜದ ಅಧ್ಯಕ್ಷ ರಾಮಚಂದ್ರ ಬಿ.ಎಸ್., ಸುರೇಶ ಹರಿಕಾಂತ ದೇವಗಿರಿ ಪಂಚಾಯಿತಿ ಉಪಾಧ್ಯಕ್ಷ ಎಸ್.ಟಿ. ನಾಯ್ಕ, ಸದಸ್ಯ ಪಾಂಡು ಪಟಗಾರ, ಜಟ್ಟಿ ಹರಿಕಾಂತ, ಪುಷ್ಪ ನರಸಿಂಹ, ನಾಗವೇಣಿ, ಯಶೋದ ಹರಿಕಾಂತ, ಲಕ್ಷ್ಮೀ ಹರಿಕಾಂತ, ಜಗದೀಶ, ಮಂಜುನಾಥ, ನಾಗವೇಣಿ, ರೇಷ್ಮಾ, ಮಮತಾ ಗಣಪತಿ, ಚೌಡು ಹರಿಕಾಂತ, ಈಶ್ವರ ಹರಿಕಾಂತ, ಉಮೇಶ ಹರಿಕಾಂತ, ವೆಂಕಟ್ರಮಣ, ಪರ್ಸು, ಪ್ರಭಾಕರ ಹರಿಕಾಂತ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು
ಪರಂ ಸಿಎಂ ಆಗಲಿ : 25ಕ್ಕೂ ಹೆಚ್ಚು ಮಠಾಧೀಶರ ಆಗ್ರಹ