ಯಲ್ಲಾಪುರ: ಇಲ್ಲಿನ ತಾಲೂಕು ಆಸ್ಪತ್ರೆಯ ವೈದ್ಯರಾದ ಡಾ.ದೀಪಕ ಭಟ್ಟ, ಡಾ.ಸೌಮ್ಯಾ ಕೆ.ವಿ ಅವರನ್ನು ವರ್ಗಾವಣೆ ಮಾಡುವ ಸಿದ್ಧತೆ ನಡೆದಿದ್ದು, ಅದನ್ನು ತಡೆಹಿಡಿಯಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಆಗ್ರಹಿಸಿದರು.
ವರ್ಗಾವಣೆಗೆ ಸಿದ್ಧತೆ ನಡೆದಿರುವ ವಿಚಾರ ಶಾಸಕರ ಗಮನಕ್ಕೆ ಬಂದಿದೆಯೊ ಅಥವಾ ಇಲ್ಲವೋ ತಿಳಿದಿಲ್ಲ. ತಾಲೂಕಿನ ಬಡ ಜನರ ಆರೋಗ್ಯದ ಸಲುವಾಗಿ ಈ ವರ್ಗಾವಣೆಯನ್ನು ಶಾಸಕರು ತಡೆಯಬೇಕು ಎಂದು ಅವರು ಆಗ್ರಹಿಸಿದರು.
ಒಂದಾನು ವೇಳೆ ವರ್ಗಾವಣೆಯಾದಲ್ಲಿ ತಾಲೂಕಿನ ಬಡವರ ಜೊತೆ ಸೇರಿ, ಬಿಜೆಪಿ ಹೋರಾಟ ಕೈಗೊಳ್ಳಲಿದೆ. ಅಹೋರಾತ್ರಿ ಧರಣಿ, ಉಪವಾಸ ಸತ್ಯಾಗ್ರಹದಂತಹ ಉಗ್ರ ಹೋರಾಟಕ್ಕೂ ಬಿಜೆಪಿ ಮುಂದಾಗಲಿದೆ. ಈ ವಿಷಯವನ್ನು ಆರೋಗ್ಯ ಸಚಿವರೂ ಕೂಡ ಗಮನಹರಿಸಬೇಕು ಎಂದು ಎಚ್ಚರಿಸಿದರು.ಬಡವರಿಗೆ ಉಚಿತವಾಗಿ ಸಿಗಬೇಕಾಗಿದ್ದ ಅನೇಕ ಔಷಧಿಗಳು ಆಸ್ಪತ್ರೆಯಲ್ಲಿ ಸಿಗುತ್ತಿಲ್ಲ. ಹೀಗೆ ಆ ಔಷಧಿಗಳು ಬಂದಾದರೂ ಆಶ್ಚರ್ಯವಿಲ್ಲ. ಮರಳುಭೂಮಿಯ ಸ್ಥಿತಿ ನಾವು ಕಾಣುತ್ತಿದ್ದೇವೆ. ಆದರೆ ಇಲ್ಲಿ ಅಪರೂಪಕ್ಕೆ ಈ ಆಸ್ಪತ್ರೆ ಇಷ್ಟು ಶ್ರೇಷ್ಠತೆಯನ್ನು ಈ ಎಲ್ಲ ವೈದ್ಯರಿಂದ ಆಗಿದೆ ಎನ್ನುವುದನ್ನು ಅಲ್ಲಗಳೆಯಲಾಗದು ಎಂದರು.
ಮಂಡಳಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಆಸ್ಪತ್ರೆ ಇಷ್ಟು ಉತ್ತಮ ಆಗುವುದಕ್ಕೆ ಸಾಧ್ಯವಾಗಿದೆ. ಕಾಂಗ್ರೆಸ್ ಸರ್ಕಾರ ಇಂತಹ ಉತ್ತಮ ವೈದ್ಯರನ್ನು ಇಲ್ಲಿಂದ ವರ್ಗಾವಣೆ ಮಾಡುವುದಕ್ಕೆ ಖಂಡಿಸುತ್ತೇವೆ. ಉಗ್ರವಾದ ಹೋರಾಟಕ್ಕೂ ಸಿದ್ಧತೆ ನಡೆಸುತ್ತಿದ್ದೇವೆ ಎಂದು ಸರ್ಕಾರಕ್ಕೆ ಆಗ್ರಹ ಪಡಿಸಿದರು.ಬಿಜೆಪಿಯ ಜಿಲ್ಲಾ ಪ್ರಶಿಕ್ಷಣ ಪ್ರಮುಖ ಗಣಪತಿ ಮಾನಿಗದ್ದೆ, ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮೇಶ್ವರ ನಾಯ್ಕ ಇದ್ದರು.