ಭೂಸಂತ್ರಸ್ತರಿಗೆ ಹೊಸ ದರ ನೀಡಲು ಆಡಳಿತ ಮಂಡಳಿ ಜಂಟಿ ಸಭೆ ಕರೆಯಲು ಒತ್ತಾಯ

KannadaprabhaNewsNetwork |  
Published : Feb 25, 2025, 12:48 AM IST
ಸದಸ | Kannada Prabha

ಸಾರಾಂಶ

ತಾಲೂಕಿನ ತೋರಣಗಲ್ಲಿನ ನಾಡ ಕಚೇರಿಯ ಉಪ ತಹಶೀಲ್ದಾರ್ ಸುಬ್ಬರಾವ್ ದೇಸಾಯಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಸಂಡೂರು

ಕುಡುತಿನಿ ಭೂಸಂತ್ರಸ್ತರಿಗೆ ಜಿಲ್ಲಾ ನ್ಯಾಯಾಲಯ ಹಾಗೂ ಸುಪ್ರೀಂ ಕೋರ್ಟ್ ಆದೇಶದಂತೆ ಹೊಸ ದರ ನೀಡಲು ಸಂಬಂಧಪಟ್ಟ ಉನ್ನತ ಆಡಳಿತ ಮಂಡಳಿ ಸಭೆಯನ್ನು ಕರೆಯುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿ ಸಿಪಿಐಎಂ ಮುಖಂಡರು, ಭೂಸಂತ್ರಸ್ತರು ಸೋಮವಾರ ತಾಲೂಕಿನ ತೋರಣಗಲ್ಲಿನ ನಾಡ ಕಚೇರಿಯ ಉಪ ತಹಶೀಲ್ದಾರ್ ಸುಬ್ಬರಾವ್ ದೇಸಾಯಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ನಂತರ ಸಿಪಿಐಎಂ ತಾಲೂಕು ಸಮಿತಿ ಕಾರ್ಯದರ್ಶಿ ಎ. ಸ್ವಾಮಿ ಮಾತನಾಡಿ, ಕೆಐಎಡಿಬಿ ಸಂಸ್ಥೆಯವರು ಕುಡುತಿನಿ, ಹರಗಿನಡೋಣಿ, ಜಾನೆಕುಂಟೆ, ವೇಣಿವೀರಾಪುರ, ಕೊಳಗಲ್ಲು, ಸಿದ್ದಮ್ಮನಹಳ್ಳಿ, ಯರಂಗಳಿ ಗ್ರಾಮಗಳಿಗೆ ಸೇರಿದ ೧೨,೯೧೪ ಎಕರೆ ೮೫ ಸೆಂಟ್ಸ್ ಜಮೀನನ್ನು ರೈತರ ಒಪ್ಪಿಗೆ ಇಲ್ಲದೆ ಬಲವಂತವಾಗಿ ೨೦೧೦ರಲ್ಲಿಯೇ ಸ್ವಾಧೀನಪಡಿಸಿಕೊಂಡು ಸುಮಾರು ೧೪ ವರ್ಷಗಳಾದರೂ, ಇದುವರೆಗೂ ಕೈಗಾರಿಕೆಗಳನ್ನು ಆರಂಭಿಸಿಲ್ಲ. ಭೂಮಿಯನ್ನು ಕಳೆದುಕೊಂಡ ಭೂಸಂತ್ರಸ್ತರು ಕುಡುತಿನಿಯಲ್ಲಿ ೮೦೦ ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ನಿಯಮ ಬಾಹಿರವಾಗಿ ಮಾಲಿಕರ ಜೊತೆ ಸೇರಿ ಭೂಬೆಲೆ ನಿಗದಿ ಮಾಡಿ ಈ ಪ್ರದೇಶದ ೩೦೦೦ಕ್ಕೂ ಅಧಿಕ ರೈತರನ್ನು ವಂಚಿಸಲಾಗಿದೆ ಎಂದು ದೂರಿದರು.

ಜಿಲ್ಲಾ ನ್ಯಾಯಾಲಯ ಹಾಗೂ ಸುಪ್ರೀಂ ಕೋರ್ಟ್ ಅನ್ಯಾಯದ ಭೂ ಬೆಲೆಯನ್ನು ರದ್ದುಮಾಡಿ, ೨೦೧೦ರ ಮೂಲ ಬೆಲೆಯನ್ನು ತಲಾ ಎಕರೆಗೆ ಸುಮಾರು ೩೦,೨೦,೭೨೦ ಎಂದು ನಿಗದಿಪಡಿಸಿ, ಬಡ್ಡಿ ಸಮೇತ ನೀಡಬೇಕೆನ್ನುವ ಭೂಸಂತ್ರಸ್ರರ ವಾದವನ್ನು ಎತ್ತಿ ಹಿಡಿದಿವೆ. ಇದರಂತೆ ದಾವೆ ಹೂಡಿದ ರೈತರಿಗೆ ಎಕರೆಗೆ ಒಂದು ಕೋಟಿ ಇಪ್ಪತ್ತು ಲಕ್ಷದಿಂದ ಮೂವತ್ತು ಲಕ್ಷದವರೆಗೆ ಹಣ ಸಂದಾಯವಾಗಿದೆ. ಉಳಿದ ಬಡ ರೈತರಿಗೆ ನೀಡಿರುವುದಿಲ್ಲ. ಭೂಸಂತ್ರಸ್ತ ರೈತರಿಗೆ ಸುಮಾರು ೧೦ ರಿಂದ ೧೩ ಸಾವಿರ ಕೋಟಿ ರೂ. ಬೃಹತ್ ವಂಚನೆಯಾಗಿದೆ. ಭೂಸ್ವಾಧೀನ ಕಾಯ್ದೆಯಂತೆ ಕಾರ್ಖಾನೆಯನ್ನೂ ನಿರ್ಮಿಸಿಲ್ಲ, ಉದ್ಯೋಗವನ್ನೂ ನೀಡಿಲ್ಲ ಹಾಗೂ ಜಮೀನುಗಳನ್ನು ವಾಪಸ್ ನೀಡಿಲ್ಲ ಎಂದರು.

ಬ್ರಾಹ್ಮಿಣಿ ಸ್ಟೀಲ್ ಕಂಪನಿಯು ಕೆಐಎಡಿಬಿ ಜೊತೆಗೆ ಶಾಮೀಲಾಗಿ ರೈತರಿಗೆ ತಿಳಿಯದಂತೆ ಅಕ್ರಮವಾಗಿ ಉತ್ತಮ್ ಗಾಲ್ವಾ ಕಂಪನಿಗೆ ಮಾರಾಟ ಮಾಡಿದೆ. ಬೆಳಗಾವಿ ಅಧಿವೇಶನದಲ್ಲಿ ರೈತರು, ರೈತ ಮುಖಂಡರನ್ನು ಕರೆಯಿಸಿ ಒಂದು ತಿಂಗಳೊಳಗೆ ಕಾನೂನಾತ್ಮಕ ಮತುಕತೆಗೆ ಕರೆಯುತ್ತೇವೆ ಎಂದು ಮುಖ್ಯಮಂತ್ರಿಗಳು, ಬೃಹತ್ ಕೈಗಾರಿಕೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರು ಭರವಸೆ ನೀಡಿದ್ದರು. ಆದರೆ, ಇದುವರೆಗೂ ಸಭೆ ಕರೆದಿಲ್ಲ. ಸರ್ಕಾರ ಈ ವಿಷಯದಲ್ಲಿ ವಿಳಂಬ ನೀತಿಯನ್ನು ಅನುಸರಿಸದೆ, ಕೂಡಲೆ ಭೂಸಂತ್ರಸ್ತರ ಬೇಡಿಕೆಗಳಿಗೆ ಸ್ಪಂದಿಸುವ ಮೂಲಕ ಪರಿಹಾರ ನೀಡಲು ಒತ್ತಾಯಿಸುತ್ತೇವೆ ಎಂದು ತಿಳಿಸಿದರು.

ಸಂಘಟನೆಯ ಮುಖಂಡರಾದ ಜೆ.ಎಂ. ಚನ್ನಬಸಯ್ಯ, ಪಂಪನಗೌಡ ಕುರೆಕುಪ್ಪ, ನಾಗಭೂಷಣ, ಭೂಸಂತ್ರಸ್ತರಾದ ಅಂಚೆ ಶಂಕ್ರಪ್ಪ, ರಾಮಾಂಜಿನಿ, ದೊಡ್ಡಬಸಪ್ಪ, ಸುಂಕಣ್ಣ, ಕೆ. ರಮೇಶ, ಕೆ. ಹೊನ್ನೂರಪ್ಪ, ಮೈಲಾರಿ ಮುಂತಾದವರು ಉಪಸ್ಥಿತರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...