ಒಳ ಮೀಸಲಾತಿ ವರದಿಯಲ್ಲಿನ ನ್ಯೂನತೆ ಸರಿಪಡಿಸಲು ಒತ್ತಾಯ

KannadaprabhaNewsNetwork |  
Published : Aug 09, 2025, 12:01 AM IST
ಹೊಸಪೇಟೆಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಛಲವಾದಿ ಮಹಾಸಭಾದ ಅಧ್ಯಕ್ಷ ಬಣ್ಣದಮನೆ ಸೋಮಶೇಖರ ಮಾತನಾಡಿದರು. | Kannada Prabha

ಸಾರಾಂಶ

ನ್ಯಾ. ನಾಗಮೋಹನ್‌ ದಾಸ್‌ ಏಕ ಸದಸ್ಯ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ಪರಿಶಿಷ್ಟ ಜಾತಿ ಒಳ ಮೀಸಲಾತಿ ವರದಿಯಲ್ಲಿ ಹಲವು ನ್ಯೂನತೆಗಳಿವೆ. ಅವುಗಳನ್ನು ಸರಿಪಡಿಸಬೇಕು ಎಂದು ವಿಜಯನಗರ ಜಿಲ್ಲಾ ಛಲವಾದಿ ಮಹಾಸಭಾದ ಅಧ್ಯಕ್ಷ ಬಣ್ಣದಮನೆ ಸೋಮಶೇಖರ ಒತ್ತಾಯಿಸಿದ್ದಾರೆ.

ಹೊಸಪೇಟೆ: ನ್ಯಾ. ನಾಗಮೋಹನ್‌ ದಾಸ್‌ ಏಕ ಸದಸ್ಯ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ಪರಿಶಿಷ್ಟ ಜಾತಿ ಒಳ ಮೀಸಲಾತಿ ವರದಿಯಲ್ಲಿ ಹಲವು ನ್ಯೂನತೆಗಳಿವೆ. ಅವುಗಳನ್ನು ಸರಿಪಡಿಸಬೇಕು ಎಂದು ವಿಜಯನಗರ ಜಿಲ್ಲಾ ಛಲವಾದಿ ಮಹಾಸಭಾದ ಅಧ್ಯಕ್ಷ ಬಣ್ಣದಮನೆ ಸೋಮಶೇಖರ ಒತ್ತಾಯಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಲಗೈ ಸಮುದಾಯಕ್ಕೆ ಸೇರಿದ ಪರೈಯ್ಯ, ಪರವನ್‌ ಜಾತಿಯನ್ನು ಎಡಗೈ ಪಂಗಡಕ್ಕೆ ಸೇರಿಸಲಾಗಿದೆ. ಬಲಗೈ ಸಮುದಾಯಕ್ಕೆ ಸೇರಿದ ಇನ್ನೂ ಹಲವು ಜಾತಿಗಳನ್ನು ಅತ್ಯಂತ ಹಿಂದುಳಿದ ಜಾತಿಗಳ ಗುಂಪಿಗೆ ಸೇರ್ಪಡೆ ಮಾಡಿ ಬಲಗೈ ಸಮುದಾಯದ ಜನಸಂಖ್ಯೆ ಉದ್ದೇಶಪೂರ್ವಕವಾಗಿ ಕಡಿಮೆ ಮಾಡಲಾಗಿದೆ ಎಂದು ಆರೋಪಿಸಿದರು.ಜಾತಿಯೇ ಅಲ್ಲದ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಸಮೂಹಕ್ಕೆ ನಿಗದಿಪಡಿಸಿರುವ ಶೇ. 1ರಷ್ಟು ಮೀಸಲಾತಿ ರದ್ದುಪಡಿಸಬೇಕು. ಈ ಮೀಸಲಾತಿಯನ್ನು ಸಂಬಂಧಿಸಿದ ಜಾತಿಗಳಿಗೆ ಹಂಚಿಕೆ ಮಾಡಲು ಸಚಿವ ಸಂಪುಟದ ಉಪ ಸಮಿತಿ ರಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನ್ಯಾ. ನಾಗಮೋಹನ್‌ ದಾಸ್‌ ಏಕ ಸದಸ್ಯ ಆಯೋಗ 27.24 ಲಕ್ಷ ಕುಟುಂಬಗಳ 1.07 ಕೋಟಿ ಜನರನ್ನು ಸಮೀಕ್ಷೆ ಮಾಡಿದ್ದು, ಪ್ರಸಕ್ತ ಐದು ಗುಂಪುಗಳಾಗಿ ವಿಂಗಡಿಸಿದೆ. ಹಿಂದುಳಿದ ಗುಂಪಿಗೆ ಶೇ. 1ರಷ್ಟು, ಎಡಗೈಗೆ ಶೇ. 6ರಷ್ಟು, ಬಲಗೈ ಗುಂಪಿಗೆ ಶೇ. 5ರಷ್ಟು, ಬಂಜಾರ, ಬೋವಿ, ಕೊರಮ, ಕೊರಚ, ಅಸ್ಪೃಶ್ಯರಲ್ಲದ ಜಾತಿಗಳಿಗೆ ಶೇ. 4ರಷ್ಟು ಮತ್ತು ಜಾತಿಯೇ ಅಲ್ಲದ ಗುಂಪು ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಗುಂಪುಗಳಿಗೆ ಶೇ. 1ರಷ್ಟು ಮೀಸಲಾತಿ ನಿಗದಿ ಮಾಡಲಾಗಿದೆ. ಈ ಆಯೋಗದ ವರದಿ ಅವೈಜ್ಞಾನಿಕ ಹಾಗೂ ಪಕ್ಷಪಾತದಿಂದ ಕೂಡಿದೆ. ವರದಿಯಲ್ಲಿನ ನ್ಯೂನತೆ ಸರಿಪಡಿಸಿಯೇ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಸಮೀಕ್ಷೆ ಪ್ರಾರಂಭಗೊಂಡ ಬಳಿಕ ಗಣತಿದಾರರಿಗೆ ಆ್ಯಪ್‌ ಅನ್‌ಇನ್‌ಸ್ಟಾಲ್‌ ಮಾಡಲು ಸೂಚಿಸಲಾಯಿತು. ಆಧಾರ್‌ ಕಾರ್ಡ್‌ ಗೊಂದಲದಿಂದಲೂ ಸಮೀಕ್ಷೆಯಿಂದ ಹಲವು ಜನರು ಸೇರ್ಪಡೆ ಮಾಡಲಾಗಿಲ್ಲ. ಸಮೀಕ್ಷೆ ಸಮರ್ಪಕವಾಗಿ ಮಾಡಲಾಗಿಲ್ಲ. ಸಮೀಕ್ಷೆಗಾಗಿ ಬೂತ್‌ಗಳನ್ನು ತೆರೆಯಲಾಗಿಲ್ಲ. ಗಣತಿದಾರರ ಮೇಲೆ ಮೇಲ್ವಿಚಾರಕರನ್ನು ನಿಯೋಜನೆ ಮಾಡಿಲ್ಲ. ಬೆಂಗಳೂರು ನಗರದಲ್ಲಿ ಸಮೀಕ್ಷೆ ಸಮರ್ಪಕವಾಗಿ ನಡೆದಿಲ್ಲ. ಸುಶಿಕ್ಷಿತರು ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ದ್ರಾವಿಡ ಎಂದು ಬೆಂಗಳೂರು, ಮೈಸೂರು ಭಾಗದಲ್ಲಿ ನಮೂದಿಸಿದ್ದಾರೆ. ಅವರ ಮೂಲ ಜಾತಿಗಳ ಕುರಿತು ಮಾಹಿತಿ ಲಭ್ಯ ಇಲ್ಲದಾಗಿದೆ ಎಂದು ದೂರಿದರು.

ನ್ಯಾ. ನಾಗಮೋಹನ್‌ ದಾಸ್‌ ಏಕ ಸದಸ್ಯ ಆಯೋಗ ಜನಸಂಖ್ಯೆ ಬೆಳವಣಿಗೆ ದರವನ್ನು 1.47 ಕೋಟಿ ಇರುವುದನ್ನು 1.16 ಕೋಟಿ ಎಂದು ತಪ್ಪಾಗಿ ಲೆಕ್ಕ ಹಾಕಿ ನಮೂದಿಸಿಕೊಂಡಿದೆ. ಸ್ವಯಂ ದೃಢೀಕರಣ ಸಲ್ಲಿಸುವವರಿಗೆ ಭಾರೀ ತೊಂದರೆ ಎದುರಾಗಿದೆ. ಬೇಡ ಜಂಗಮ ಎಂದು ನಮೂದಿಸಲು ಅವಕಾಶ ಮಾಡಿಕೊಟ್ಟು ನಿಜವಾದ ಬೇಡ ಜಂಗಮರಿಗೆ ಅನ್ಯಾಯವಾಗಿದೆ. ಅವೈಜ್ಞಾನಿಕವಾಗಿ ಕೂಡಿರುವ ಈ ವರದಿಯನ್ನು ಸರ್ಕಾರ ಪರಿಶೀಲಿಸಿ ಸಚಿವ ಸಂಪುಟದ ಉಪ ಸಮಿತಿ ರಚನೆ ಮಾಡಿ, ಒಳ ಮೀಸಲಾತಿ ಜಾರಿ ಮಾಡಬೇಕು. ಜಾತಿಯೇ ಅಲ್ಲದ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಸಮೂಹಕ್ಕೆ ನಿಗದಿಪಡಿಸಿರುವ ಶೇ. 1ರಷ್ಟು ಮೀಸಲಾತಿ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಈರಣ್ಣ, ಮರಿಸ್ವಾಮಿ, ರಾಮಚಂದ್ರಬಾಬು, ಶಿವಮೂರ್ತಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲಾ ಗ್ರಾಪಂಗಳಿಗೆ ಶೀಘ್ರದಲ್ಲೇ ಆಡಳಿತ ಅಧಿಕಾರಿ
4ರಂದು ಡೀಸಿ ಹಠಾವೋ-ರೈತರ ಬಚಾವೋ ಆಂದೋಲನ