ಶಿಕ್ಷಕರನ್ನು ನೇಮಿಸದಿದ್ದಲ್ಲಿ ಮನೆಯಲ್ಲೇ ಸ್ವಾತಂತ್ರ್ಯೋತ್ಸವ: ಪಾಲಕರ ನಿರ್ಧಾರ

KannadaprabhaNewsNetwork |  
Published : Aug 09, 2025, 12:01 AM IST
ಕನಕನಹಳ್ಳಿ ಶಾಲೆ  | Kannada Prabha

ಸಾರಾಂಶ

ಕನಕನಹಳ್ಳಿ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 55 ವಿದ್ಯಾರ್ಥಿಗಳು ಓದುತ್ತಿದ್ದಾರೆ.

ಕಾರವಾರ: ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಪಂ ವ್ಯಾಪ್ತಿಯ ಕನಕನಹಳ್ಳಿ ಶಾಲೆಗೆ ಸೋಮವಾರದೊಳಗೆ ಶಿಕ್ಷಕರನ್ನು ನೇಮಿಸದಿದ್ದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸದಿರಲು ಪಾಲಕರು ನಿರ್ಧರಿಸಿದ್ದು, ಸ್ವಾತಂತ್ರ್ಯೋತ್ಸವವನ್ನು ಶಾಲೆಗೆ ಬದಲು ಮನೆ ಮನೆಯಲ್ಲೇ ಆಚರಿಸಲಿದ್ದಾರೆ.

ಕನಕನಹಳ್ಳಿ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 55 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಗ್ರಾಮೀಣ ಭಾಗದ ಈ ಶಾಲೆ ಅನೇಕ ಬಡ ವಿದ್ಯಾರ್ಥಿಗಳ ಜ್ಞಾನ ದೇಗುಲವಾಗಿದೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಕ್ರಿಯಾಶೀಲವಾಗಿರುವ ಈ ಶಾಲೆಯ ಮಕ್ಕಳಿಗೆ ಶಿಕ್ಷಕರ ಕೊರತೆ ಅವರ ಭವಿಷ್ಯಕ್ಕೆ ಗಂಭೀರ ಸಮಸ್ಯೆಯಾಗಿ ತಲೆದೋರಿದೆ. 2023ರಲ್ಲಿ ಹೆಚ್ಚುವರಿ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಮತ್ತೊಬ್ಬ ಶಿಕ್ಷಕರನ್ನು ನಿಯೋಜನೆ ಮಾಡದೇ ಇಲಾಖೆ ಮಕ್ಕಳಿಗೆ ಅನ್ಯಾಯವೆಸಗಿದೆ ಎಂದು ಪಾಲಕರು ಆರೋಪಿಸಿದ್ದಾರೆ.

3 ಶಿಕ್ಷಕರು 7 ತರಗತಿ ತನಕ ಪಾಠ ಮಾಡಲು ಹೆಣಗಾಡುತ್ತಿದ್ದಾರೆ. ನಮ್ಮ ಮಕ್ಕಳ ಸಂಖ್ಯೆಗನುಗುಣವಾಗಿ ಶಿಕ್ಷಕರನ್ನು ನೀಡಿ ಎಂದು ಪಾಲಕರು ಮತ್ತು ಶಾಲಾಭಿವೃದ್ಧಿ ಸಮಿತಿ ಹಲವು ಬಾರಿ ಜಿಲ್ಲಾ ಹಾಗೂ ತಾಲೂಕು ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಇದಾವುದನ್ನು ಪರಿಗಣಿಸುತ್ತಿಲ್ಲ. ಸರ್ಕಾರ ಮಕ್ಕಳಿಗಾಗಿ ಬಿಸಿಯೂಟ, ಹಾಲು ಹಣ್ಣು, ಮೊಟ್ಟೆ, ಸಮವಸ್ತ್ರ, ಶೂ ಇದೆಲ್ಲವನ್ನು ನೀಡಿ ಮಕ್ಕಳಿಗೆ ಮುಖ್ಯವಾಗಿ ಬೇಕಾದ ಶಿಕ್ಷಕರನ್ನು ನೀಡದಿದ್ದರೆ ಪ್ರಯೋಜನವೇನು? ಹಣ್ಣು ಮೊಟ್ಟೆಗಳನ್ನು ನೀಡದಿದ್ದರೂ ತೊಂದರೆ ಇಲ್ಲ. ನಮ್ಮ ಶಾಲೆಗೆ ಶಿಕ್ಷಕರನ್ನು ನೀಡಿ ಎಂದು ಪಾಲಕರು ಆಗ್ರಹಿಸಿದ್ದಾರೆ.

ಈ ಕುರಿತು ಈಗಾಗಲೇ ಅಂಕೋಲಾ ಕ್ಷೇತ್ರ ಶಿಕ್ಷಣಾಧಿಕಾರಿಗೆ ವಿನಂತಿಸಿಕೊಳ್ಳಲಾಗಿದೆ. ಅವರು ಸೋಮವಾರದೊಳಗೆ ಕ್ರಮ ಕೈಗೊಳ್ಳದಿದ್ದರೆ ಮಂಗಳವಾರದಿಂದ (ಆ.12) ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದಿರಲು ಎಲ್ಲ ಪಾಲಕರು ನಿರ್ಧರಿಸಿದ್ದೇವೆ. ಸ್ವಾತಂತ್ರ್ಯ ದಿನವನ್ನು ತಮ್ಮ ಮನೆಯಲ್ಲೇ ಆಚರಿಸುತ್ತೇವೆ ಎಂದು ಕನಕನಹಳ್ಳಿ (ಹಳವಳ್ಳಿ ನಂ.2) ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ಗಾಂವಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ಸ್ವಾತಂತ್ರ್ಯಕ್ಕಾಗಿ 6.72 ಲಕ್ಷ ಜನ ಮರಣ
ಸಿಡಿದೆದ್ದ ಧರ್ಮಸ್ಥಳ ಭಕ್ತ ಅಭಿಮಾನಿಗಳು