ಹೊನ್ನಾವರ: ತಾಲೂಕಿನ ಕೆಳಗಿನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಐಆರ್‌ಬಿಯಿಂದ ಆಗಬೇಕಾದ ತುರ್ತು ಕಾಮಗಾರಿಗಳನ್ನು ಮಾಡಿಸಿಕೊಡುವ ಕುರಿತು ಗ್ರಾಮ ಪಂಚಾಯಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕೆಳಗಿನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಆರ್‌ಬಿಯಿಂದ ಆಗಬೇಕಾದ ಪ್ರಮುಖ 7 ಬೇಡಿಕೆಗಳನ್ನು ಮನವಿಯಲ್ಲಿ ತಿಳಿಸಿದ್ದಾರೆ. ಅಭಿತೋಟ ಶಾಲೆಯ ಹತ್ತಿರ ಮೇಲ್ಸೇತುವೆ ನಿರ್ಮಿಸುವುದು. ಕೆಳಗಿನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಡಗುಂಜಿ ಕ್ರಾಸ್, ಕೆರೆಮನೆ ಗ್ರಾಮ ಪಂಚಾಯಿತಿ ಹತ್ತಿರ, ಅಭಿತೋಟ ಮತ್ತು ಅಪ್ಸರಕೊಂಡ ಕ್ರಾಸ್‌ನಲ್ಲಿ ಬಸ್ ತಂಗುದಾಣ ನಿರ್ಮಿಸುವುದು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಡಗುಂಜಿ ಮತ್ತು ಕೆಳಗಿನೂರು ಪೆಟ್ರೋಲ್ ಬಂಕ್ ಹತ್ತಿರ ನಾಮಫಲಕದ ಕಮಾನು ನಿರ್ಮಿಸುವುದು, ಬಾಕಿ ಇರುವ ಮೂರು ಕೊಳವೆ ಬಾವಿಗಳನ್ನು ಮಾಡಿಕೊಡುವುದು, ಗುಣವಂತೆಯಲ್ಲಿ ಚರಂಡಿ ನಿರ್ಮಿಸುವುದು, ಕೆಳಗಿನೂರು ಸೊಸೈಟಿ ಕ್ರಾಸ್‌ನಲ್ಲಿ ರಸ್ತೆಗೆ ಪೈಪ್ ಅಳವಡಿಸಿ ಮಳೆಗಾಲದ ಚರಂಡಿ ನೀರನ್ನು ಹಳ್ಳಕ್ಕೆ ಬಿಡುವಂತೆ ಮಾಡುವುದು, ಚರ್ಚ್‌ನಿಂದ ಅಪ್ಸರಕೊಂಡ ಕ್ರಾಸ್‌ನವರೆಗೆ ಚರಂಡಿ ನಿರ್ಮಿಸುವ ಬಗ್ಗೆ ಮನವಿಯಲ್ಲಿ ತಿಳಿಸಿದ್ದಾರೆ.ಜಿಲ್ಲಾಧಿಕಾರಿ ಲಕ್ಷ್ಮೀಪ್ರೀಯಾ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕೆಳಗಿನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುರೇಶ ಗೌಡ, ಮಾಜಿ ಅಧ್ಯಕ್ಷರಾಧ ಗಂಗಾಧರ ಗೌಡ, ಸದಸ್ಯರಾದ ಒಲ್ವಿನ್ ಡಿಸಿಲ್ವ, ಅಣ್ಣಪ್ಪ ಗೌಡ, ವಿಷ್ಣು ನಾಯ್ಕ ಇದ್ದರು.ನಿಯಮಬಾಹಿರ ಗ್ಯಾಸ್ ಟ್ಯಾಂಕರ್ ಸಂಚಾರ ನಿಯಂತ್ರಣಕ್ಕೆ ಆಗ್ರಹ
ಭಟ್ಕಳ: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಗ್ಯಾಸ್ ಟ್ಯಾಂಕರ್ ಸಂಚಾರ ನಿಯಮಬಾಹಿರವಾಗಿ ಮುಂದುವರಿಯುತ್ತಿರುವುದು ಅಪಘಾತಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ಈಶ್ವರ ಎನ್. ನಾಯ್ಕ ತಿಳಿಸಿದ್ದಾರೆ.ಈ ಕುರಿತು ಹೇಳಿಕೆ ನೀಡಿರುವ ಅವರು, ಜಿಲ್ಲಾಡಳಿತದ ನಿಷ್ಕ್ರಿಯತೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಂಚಾರ ನಿಯಮದ ಉಲ್ಲಂಘನೆ ಅಪಘಾತ ಹೆಚ್ಚಳಕ್ಕೆ ಕಾರಣವಾಗಿದೆ. ಕೆಲವು ವರ್ಷಗಳ ಹಿಂದೆ ಬರ್ಗಿ ದುರಂತದಿಂದ ಎಚ್ಚೆತ್ತ ಜಿಲ್ಲಾಡಳಿತದಿಂದ ಕೆಲವು ದಿನಗಳಿಗೆ ಮಾತ್ರ ನಿಯಮಗಳ ಅನುಪಾಲನೆ ನಡೆಯಿತು.ಆದರೆ ಅದರ ನಂತರ ರಾಷ್ಟ್ರೀಯ ಹೆದ್ದಾರಿ ಕಾರವಾರದಿಂದ ಶಿರೂರು ತನಕ ಆದ ಗ್ಯಾಸ್ ಟ್ಯಾಂಕರ್‌ಗಳ ಅಪಘಾತಗಳ ಸಂಖ್ಯೆಯನ್ನು ಪರಿಗಣಿಸಿದಾಗ ಜಿಲ್ಲಾಡಳಿತದ ನಿಷ್ಕ್ರಿಯತೆ ಮತ್ತು ಪೊಲೀಸ್ ಇಲಾಖೆಯ ಮೂಕ ವೀಕ್ಷಣೆ ಇದಕ್ಕೆಲ್ಲ ಕಾರಣ ಎಂದು ಆರೋಪಿಸಿರುವ ಅವರು, ನಿಯಮಾನುಸಾರ ಗ್ಯಾಸ್ ಟ್ಯಾಂಕರ್ ರಾತ್ರಿ ಸಂಚಾರ ನಿಷೇಧವಿದ್ದರೂ ರಾತ್ರಿ ವೇಳೆ ಅವ್ಯಾಹತವಾಗಿ ಸಂಚಾರ ನಡೆಯುತ್ತಿರುವುದಕ್ಕೆ ಯಾರು ಜವಾಬ್ದಾರಿ ಎಂದು ಅವರು ಪ್ರಶ್ನಿಸಿದ್ದಾರೆ.