ಹಾವೇರಿ ಜಿಲ್ಲೆ ಬರಗಾಲ ಪೀಡಿತ ಪ್ರದೇಶ ಘೋಷಣೆಗೆ ಒತ್ತಾಯ

KannadaprabhaNewsNetwork |  
Published : Jul 17, 2026, 02:15 AM IST
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾಮೂಹಿಕ ನಾಯಕತ್ವದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಘಟಕದ ಕಾರ್ಯಕರ್ತರು ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಹಾವೇರಿ ಜಿಲ್ಲೆ ಬರಗಾಲ ಪೀಡಿತ ಪ್ರದೇಶ ಘೋಷಣೆ, ರೈತರ ಕೃಷಿ ಸಾಲಮನ್ನಾ, ಆಣೂರ ಏತ ನೀರಾವರಿ ಬಾಂದಾರ ನಿರ್ಮಾಣ ಶೀಘ್ರ ಪ್ರಾರಂಭ ಸೇರಿ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾಮೂಹಿಕ ನಾಯಕತ್ವದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಘಟಕದ ಕಾರ್ಯಕರ್ತರು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಹಕ್ಕೊತ್ತಾಯ ಮಾಡಿದರು.

ಬ್ಯಾಡಗಿ: ಹಾವೇರಿ ಜಿಲ್ಲೆ ಬರಗಾಲ ಪೀಡಿತ ಪ್ರದೇಶ ಘೋಷಣೆ, ರೈತರ ಕೃಷಿ ಸಾಲಮನ್ನಾ, ಆಣೂರ ಏತ ನೀರಾವರಿ ಬಾಂದಾರ ನಿರ್ಮಾಣ ಶೀಘ್ರ ಪ್ರಾರಂಭ ಸೇರಿ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾಮೂಹಿಕ ನಾಯಕತ್ವದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಘಟಕದ ಕಾರ್ಯಕರ್ತರು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಹಕ್ಕೊತ್ತಾಯ ಮಾಡಿದರು.

ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಬಳ್ಳಾರಿ, ಹಾವೇರಿ ಜಿಲ್ಲೆಯ ರೈತರು ಅನಾವೃಷ್ಟಿಯಿಂದ ಸರಾಸರಿ ಮಳೆ ಕೊರತೆಯಿಂದ ಭೀಕರ ಬರಗಾಲ ಎದುರಿಸುತ್ತಿದ್ದಾರೆ, ಸಾಲ ಮಾಡಿ ಎರೆಡೆರಡು ಬಾರಿ ಬಿತ್ತನೆ ಮಾಡಿ ಬಿತ್ತಿದ ಮಳೆ ಬೆಳೆ ಬಾರದೇ ಬತ್ತಿಹೋಗಿವೆ, ಸಾಲಕ್ಕೆ ಹೆದರಿ ರೈತರು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ, ಅನಾವೃಷ್ಟಿಯಿಂದ ಬರಗಾಲ ಇರುವುದರಿಂದ ರೈತರು ಮಾಡಿದ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡಿ ರೈತರ ಜೀವಗಳನ್ನು ರಕ್ಷಿಸಬೇಕು, ಕೂಡಲೇ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡುವ ಮೂಲಕ ರೈತರ ನೆರವಿಗೆ ಬರುವಂತೆ ಆಗ್ರಹಿಸಿದರು.

ಸ್ವಯಂ ಘೋಷಣೆ ಪತ್ರ ಹಿಂಪಡೆಯಿರಿ: ಗಂಗಣ್ಣ ಎಲಿ ಮಾತನಾಡಿ, ಬೆಳೆವಿಮೆ ತುಂಬುವ ಗೊಂದಲದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, ಸಹಕಾರಿ ಸಂಘಗಳು, ಗ್ರಾಮ-ಸೇವಾ ಕೇಂದ್ರಗಳು ರೈತರಿಂದ ಬೆಳೆವಿಮೆ ತುಂಬಿಸಿಕೊಳ್ಳಲು ಸಿದ್ಧರಿರುವುದಿಲ್ಲ, ಸರ್ಕಾರದಿಂದ ಯಾವುದೇ ಬ್ಯಾಂಕಿನಲ್ಲಿ ಕೃಷಿ ಸಾಲ ಪಡೆದಿರುವುದಿಲ್ಲ ಎಂಬ ಸ್ವಯಂ ಘೋಷಣೆ ಪತ್ರ ಕೊಡಬೇಕೆಂಬ ನಿಯಮ ಅವೈಜ್ಞಾನಿಕವಿದ್ದು, ಯಾವೊಬ್ಬ ರೈತನು ಬೆಳೆವಿಮೆ ತುಂಬಲು ನಿಗದಿತ ಅವಧಿಗೆ ಸಾಧ್ಯವಾಗುತ್ತಿಲ್ಲ. ಕಾರಣ ಸ್ವಯಂ ಘೋಷಣೆ ಪತ್ರವನ್ನು ರದ್ದುಪಡಿಸಿ ಮೊದಲಿನಂತೆ ಬೆಳೆವಿಮೆ ತುಂಬುವಂತಾಗಬೇಕು ಎಂದರು.

ಕೆಸಿಸಿ ಬ್ಯಾಂಕಿಗೆ ನಿರ್ದೇಶನ ನೀಡಿ: ಡಾ.ಕೆ.ವಿ. ದೊಡ್ಡಗೌಡ್ರ ಮಾತನಾಡಿ, ಸಹಕಾರಿ ಸಂಘಗಳಲ್ಲಿ ಬೆಳೆಸಾಲ ಪಡೆದ ರೈತನಿಗೆ ತಾನು ಪಡೆದ ಸಾಲದ ವಿಮಾ ಕಂತನ್ನು ತುಂಬಲು ಅವಕಾಶವಿರುತ್ತದೆ. ಆದರೆ ತನ್ನ ಜಮೀನಿನ ಉತಾರಕ್ಕೆ ಅನುಗುಣವಾಗಿ ಮಾಡಿದ ಬೆಳೆಗೆ ಬೆಳೆ ವಿಮೆ ತುಂಬಲು ಅವಕಾಶ ಇರುವುದಿಲ್ಲ. ಆದ್ದರಿಂದ ರೈತನಿಗೆ ತಾನು ಬೆಳೆದ ಬೆಳೆಗೆ ಜಮೀನಿನ ಕ್ಷೇತ್ರಕ್ಕೆ ಅನುಗುಣವಾಗಿ ಬೆಳೆವಿಮೆ ತುಂಬಲು ಕೆಸಿಸಿ ಬ್ಯಾಂಕಿಗೆ ನಿರ್ದೇಶನ ನೀಡುವಂತೆ ಆಗ್ರಹಿಸಿದರು.

ಬಾಂದಾರ ನಿರ್ಮಾಣಕ್ಕೆ ಮುಂದಾಗಿ: ಮಂಜಪ್ಪ ತೋಟದ ಮಾತನಾಡಿ, ಆಣೂರ ಏತ ನೀರಾವರಿ ಯೋಜನೆಯ ಬಾಂದಾರ ನಿರ್ಮಿಸುವ ಕಾರ್ಯ ಸ್ಥಗಿತಗೊಂಡಿರುವುದರಿಂದ ಈ ಕೂಡಲೇ ಗುತ್ತಿಗೆದಾರರನ್ನು ಕರೆಸಿ ಸಂಬಂಧಪಟ್ಟ ವ್ಯವಸ್ಥಾಪಕ ನಿರ್ದೇಶಕರಿಗೆ ಅವರು ಶೀಘ್ರ ಕಾಮಗಾರಿ ಪ್ರಾರಂಭಿಸುವಂತೆ ಆದೇಶಿಸಬೇಕು. ಮೇಲಿನ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಜಿಲ್ಲೆಯ ಸಾವಿರಾರು ರೈತರೊಂದಿಗೆ ಬೃಹತ್‌ ಪ್ರತಿಭಟನೆ ಕೈಗೊಳ್ಳುವುದಾಗಿ ಎಚ್ಚರಿಸಿದರು. ಈ ವೇಳೆ ಶಿವರುದ್ರಪ್ಪ ಮೂಡೇರ, ಮೌನೇಶ ಕಮ್ಮಾರ, ಫಕ್ಕೀರೇಶ ಅಜ್ಜಗೊಂಡ್ರ, ಜಾನ್ ಪುನೀತ್ ಸೇರಿದಂತೆ ಇನ್ನಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೀವನ ನಿರ್ವಹಣೆಗೆ ಪದವಿ ಮುಖ್ಯವಲ್ಲ, ಕೌಶಲ್ಯ ಬೇಕು
ಹೂಳು ತುಂಬಿದ ಚರಂಡಿ ದುರಸ್ತಿ ಮಾಡಿ: ಡಂಬಳ ಗ್ರಾಮಸ್ಥರ ಆಗ್ರಹ