ಜಮಖಂಡಿ ಶಹರ ಜಿಲ್ಲೆಯಾಗಿ ಘೋಷಿಸಲು ಆಗ್ರಹ: ಸಹಜಾನಂದ ಅವಧೂತರು

KannadaprabhaNewsNetwork | Published : Oct 14, 2024 1:22 AM

ಸಾರಾಂಶ

ಕನ್ನಡದ ಕೆಲಸಕ್ಕೆ ತಾವು ಸದಾ ಸಿದ್ಧರಿರುವುದಾಗಿ ತಿಳಿಸಿದರು. ಸಮ್ಮೇಳನಗಳು ರಾಷ್ಟ್ರೀಯತೆಗೆ ನೆರವಾಗಬೇಕು, ಕನ್ನಡದಲ್ಲಿಯೇ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಬೇಕೆಂದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ದೇಶಕ್ಕಾಗಿ ಸ್ವಾತಂತ್ರ್ಯ ಹೋರಾಟ ಮೊದಲು ಮಾಡಿಕೊಂಡು, ಕಲೆ, ಸಾಹಿತ್ಯ, ಸಂಸ್ಕೃತಿಗೆ ತನ್ನದೇ ಆದ ಕೊಡುಗೆ ನೀಡಿರುವ ಜಮಖಂಡಿ ಶಹರವನ್ನು ಜಿಲ್ಲೆಯಾಗಿ ಘೋಷಿಸಬೇಕೆಂದು ವೇದಾಂತ ಆಚಾರ್ಯ ಸಹಜಾನಂದ ಅವಧೂತರು ಆಗ್ರಹಿಸಿದರು.

ನಗರದ ಬಸವಭವನದಲ್ಲಿ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್‌ನ 9ನೇ ತಾಲೂಕು ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಜಮಖಂಡಿ ಛಟ್ಟುಸಿಂಗ, ಅನಂತರಾವ ಸಾಬಡೆಯಂಥವರು ಹೋರಾಟ ಮಾಡಿದ್ದಾರೆ. ತತ್ವಜ್ಞಾನಿ ಗುರುದೇವ ರಾನಡೆರ ಜನ್ಮಸ್ಥಳವಾಗಿರುವ ಈ ಶಹರ, ದೇಶದ ಏಕೀಕರಣ ಸಂದರ್ಭದಲ್ಲಿ ಇಲ್ಲಿನ ಪಟವರ್ಧನ ಮಹಾರಾಜರು ಮೊದಲು ಒಪ್ಪಿಗೆ ಸೂಚಿಸಿ ದೇಶದ ಅಖಂಡತೆಗೆ ಮುನ್ನುಡಿ ಬರೆದಿದ್ದಾರೆ, ಐತಿಹಾಸಿಕ ನಗರವಾಗಿರುವ ಜಮಖಂಡಿ ಸರ್ವಾಂಗೀಣ ಅಭಿವೃದ್ಧಿಗೆ ಜಿಲ್ಲಾಕೇಂದ್ರವಾಗಿ ಘೋಷಿಸಬೇಕೆಂದು ಒತ್ತಾಯಿಸಿದರು.

ತಾಲೂಕಿನ ಹೋಬಳಿ ಪ್ರದೇಶವಾಗಿರುವ ಸಾವಳಗಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕು, ಜಮಖಂಡಿ ಮುಖಾಂತರ ಹಾದು ಹೋಗುವ ರೈಲು ಮಾರ್ಗ ತ್ವರಿತವಾಗಿ ಪೂರ್ಣಗೊಳಿಸಬೇಕು, ವೈದ್ಯಕೀಯ, ಎಂಜನಿಯರಿಂಗ್‌, ಉತ್ತಮ ಆಸ್ಪತ್ರೆಗಳು ಮತ್ತು ಕೃಷಿ ಪದವಿ ಕಾಲೇಜುಗಳು ಜಮಖಂಡಿಯಲ್ಲಿ ಸ್ಥಾಪನೆಯಾಗಬೇಕು. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮಹರ್ಷಿ ವಿಠ್ಠಲರಾವ ಸಿಂಧೇ, ಸಮರ್ಥ ಗಿರಿಮಲ್ಲೇಶ್ವರ, ರುದ್ರಾವಧೂತರು ಮುಂತಾದವರು ಮಠಗಳನ್ನು ಸ್ಥಾಪಿಸಿ ಆಧ್ಯಾತ್ಮಿಕ ಮಾರ್ಗದರ್ಶನ ಮಾಡಿದ್ದಾರೆ, ಕಲಾಕ್ಷೇತ್ರದಲ್ಲಿ ಶ್ರೀಕೃಷ್ಣ ಪಾರಿಜಾತದ ಅಪ್ಪಾಲಾಲ್‌ ನದಾಫ, ವಿಠ್ಠಲ ಟಕ್ಕಳಕಿ, ಅನೇಕ ಕಲಾವಿದರು ಕಲಾಸೇವೆ ಮಾಡಿದ್ದಾರೆ ಎಂದರು.

ಜಮಖಂಡಿ ಕೃಷಿ ಪ್ರಧಾನ ಕ್ಷೇತ್ರವಾಗಿದ್ದು ಕಬ್ಬು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಮೂರು ಸಕ್ಕರೆ ಕಾರ್ಖಾನೆಗಳಿವೆ, ಕೃಷ್ಣಾನದಿಯು ಪರಮ ಪಾವನ ತೀರ್ಥರೂಪದಲ್ಲಿ ಹರಿದು ಇಲ್ಲಿಯ ಜನರನ್ನು ಹರಸಿದೆ. ಸರ್ಕಾರಿ ಶಾಲೆಗಳಲ್ಲಿ ಯೋಗ, ನೈತಿಕ ಶಿಕ್ಷಣ ದೋರಕುವಂತಾಗಬೇಕಿದೆ, ಕುಸ್ತಿ, ಸೈಕ್ಲಿಂಗ್‌, ಕಲ್ಲುಗುಂಡು ಎತ್ತುವ ಸ್ಪರ್ಧೆ, ಕಬಡ್ಡಿ ಮುಂತಾದ ದೇಶಿ ಕ್ರೀಡೆ ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ ಎಂಬುದು ತಮ್ಮ ಹೆಬ್ಬಯಕೆಯಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ಕನ್ನಡದ ಕೆಲಸಕ್ಕೆ ತಾವು ಸದಾ ಸಿದ್ಧರಿರುವುದಾಗಿ ತಿಳಿಸಿದರು. ಸಮ್ಮೇಳನಗಳು ರಾಷ್ಟ್ರೀಯತೆಗೆ ನೆರವಾಗಬೇಕು, ಕನ್ನಡದಲ್ಲಿಯೇ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಬೇಕೆಂದರು. ಕೇರಳದಂತೆ ನಮ್ಮ ರಾಜ್ಯವೂ ಸಾಕ್ಷರತೆಯಲ್ಲಿ ಮುಂದೆ ಬರಬೇಕೆಂದರು.

ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಕನ್ನಡಭಾಷೆಗೆ 2500 ವರ್ಷಗಳ ಇತಿಹಾಸವಿದೆ, ಆದರೆ ಈಗಿನ ಪರಿಸ್ಥಿತಿ ನೋಡಿದರೆ ಕುಸಿಯುತ್ತಿರುವ ಅನುಭವ ಬರುತ್ತದೆ. ರಾಜ್ಯಧಾನಿ ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಬಹಳ ಕಡಿಮೆಯಾಗಿದೆ. ಬಸವೇಶ್ವರರು, ಕನಕದಾಸರು, ಪುರಂದರ ದಾಸರು ಬಳಸಿದ ಭಾಷೆಯು ನಮ್ಮದು ಎಂಬ ಹೆಮ್ಮೆ ಇರಬೇಕು ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ, ಕನ್ನಡದಲ್ಲಿ ಸಹಿಮಾಡುವ ಮೂಲಕ ನಮ್ಮ ಮನೆಯಿಂದಲೇ ಕನ್ನಡ ಬೆಳೆಸುವ ಕೆಲಸವಾಗಬೇಕು, ಕನ್ನಡದ ಬಗ್ಗೆ ಗೌರವ ಹೆಮ್ಮೆ ಇರಬೇಕೆಂದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾಗಿದ್ದ ಪ್ರೊ.ಬಸವರಾಜ ಕಡ್ಡಿ ಮಾತನಾಡಿದರು. ತಾಲೂಕು ಕಸಾಪ ಅಧ್ಯಕ್ಷ ಸಂತೋಷ ತಳಕೇರಿ ಸ್ವಾಗತಿಸಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಮಾಜಿವಿಧಾನ ಪರಿಷತ್‌ ಸದಸ್ಯ ಜಿ,ಎಸ್‌.ನ್ಯಾಮಗೌಡ, ಡಾ.ವಿಜಯಲಕ್ಷ್ಮೀತುಂಗಳ, ಉಮೇಶ ಮಹಬಲಶೆಟ್ಟಿ. ಡಾ.ಎಚ್‌.ಜಿ.ಗಡ್ಡಿ, ತಾಪಂ ಇಒ ಸಂಜೀವ ಜುನ್ನೂರ, ಅರುಣಕುಮಾರ ಶಾ ಮುಂತಾದವರು ವೇದಿಕೆಯಲ್ಲಿದ್ದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಎಲ್ಲಾ ಸದಸ್ಯರು ಕಾರ್ಯಕ್ರಮದ ಉಸ್ತುವಾರಿ ನೋಡಿಕೊಂಡರು.

ನಗರದ ಹಳೇ ತಹಸೀಲ್ದಾರ್‌ ಕಚೇರಿಯಿಂದ ಪ್ರಾರಂಭಗೊಂಡ ಸ್ವರ್ಣರಥದ ಮೆರವಣಿಗೆ ಪೋಸ್ಟ್‌ ಆಫೀಸ್, ಅರ್ಬನ್‌ ಬ್ಯಾಂಕ್‌, ಅಶೋಕ ವೃತ್ತ ಸೇರಿದಂತೆ ಪ್ರಮುಖ ರಸ್ತೆ ಮೂಲಕ ಸಂಚರಿಸಿ ಬಸವ ಭವನವನ ತಲುಪಿತು. ಕನ್ನಡದ ಸ್ವರ್ಣ ರಥದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪೂಜ್ಯ ರುದ್ರಾವಧೂತ ಮಠದ ಸಹಜಾನಂದ ಅವಧೂತರು, ಜಿಲ್ಲಾಧ್ಯಕ್ಷ ಶಿವಾನಂದ ಶೆಲಿಕೇರಿ, ತಾಲೂಕಾಧ್ಯಕ್ಷ ಸಂತೋಷ ತಳಕೇರಿ ಮೆರವಣಿಗೆ ರಥದಲ್ಲಿ ಕುಳಿತಿದ್ದರು, ನೂರಾರು ಸಂಖ್ಯೆಯಲ್ಲಿ ಕುಂಭ ಹೊತ್ತ ಮಹಿಳೆಯರು, ಆರತಿ ಹಿಡಿದ ಮಹಿಳೆಯರು, ಕರಡಿಮಜಲು ಸೇರಿದಂತೆ ಹಲವಾರು ಕಲಾವಿದರ ಸದ್ದು ಜೋರಾಗಿತ್ತು. ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಸಮೇಳನಾಧ್ಯಕ್ಷರಾದ ಸಹಜಾನಂದ ಅವಧೂತರು, ಡಾ.ವಿಜಯಲಕ್ಷ್ಮೀತುಂಗಳ ವಿವಿಧ ಮಳಿಗೆಗಳನ್ನು ಉದ್ಘಾಟಿಸಿದರು. ಮೆರವಣಿಗೆಯಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಹಾಗೂ ಕನ್ನಡ ಪರ ಹೋರಾಟಗಾರರು, ಚಿಂತಕರು, ಸಾಹಿತಿಗಳು, ಕನ್ನಡ ಅಭಿಮಾನಿಗಳು, ವಿವಿಧ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.

Share this article