ಈ ಬಾರಿ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿರುವುದರಿಂದ ಕಾಫಿ, ಕರಿಮೆಣಸು, ಭತ್ತ ಸೇರಿದಂತೆ ವಿವಿಧ ಬೆಳೆಗಳ ಫಸಲಿನ ಮೇಲೆ ಗಂಭೀರ ಪರಿಣಾಮ ಬೀರುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿಗೂ ತೊಂದರೆ ಎದುರಾಗುವ ಸಾಧ್ಯತೆ ಇದೆ. ಕುಶಾಲನಗರ ಪ್ರದೇಶ ಬರಪೀಡಿತವಾಗಿದ್ದರೂ ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿರುವುದು ವಿಷಾಧನೀಯ. ಆದ್ದರಿಂದ ಕುಶಾಲನಗರ ತಾಲೂಕನ್ನು ಬರಪೀಡಿತವೆಂದು ಘೋಷಿಸಬೇಕೆಂದು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಈ ಬಾರಿ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿರುವುದರಿಂದ ಕಾಫಿ, ಕರಿಮೆಣಸು, ಭತ್ತ ಸೇರಿದಂತೆ ವಿವಿಧ ಬೆಳೆಗಳ ಫಸಲಿನ ಮೇಲೆ ಗಂಭೀರ ಪರಿಣಾಮ ಬೀರುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿಗೂ ತೊಂದರೆ ಎದುರಾಗುವ ಸಾಧ್ಯತೆ ಇದೆ. ಕುಶಾಲನಗರ ಪ್ರದೇಶ ಬರಪೀಡಿತವಾಗಿದ್ದರೂ ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿರುವುದು ವಿಷಾಧನೀಯ. ಆದ್ದರಿಂದ ಕುಶಾಲನಗರ ತಾಲೂಕನ್ನು ಬರಪೀಡಿತವೆಂದು ಘೋಷಿಸಬೇಕೆಂದು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಒತ್ತಾಯಿಸಿದರು.
ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪರವಾಗಿ ಸರ್ಕಾರಕ್ಕೆ ಈ ಕುರಿತು ಪತ್ರ ಬರೆದು ಒತ್ತಾಯಿಸಲು ಮಹಾಸಭೆಯಲ್ಲಿ ತೀರ್ಮಾನಿಸಲಾಯಿತು.
ಸಹಕಾರ ಸಂಘಗಳ ಆಡಳಿತ ವ್ಯವಸ್ಥೆಯನ್ನು ಗ್ರಾಮ ಪಂಚಾಯಿತಿಗಳ ರೀತಿಯಲ್ಲಿ ರೂಪಿಸಲು ಸರ್ಕಾರ ಮುಂದಾಗಿರುವುದು ಸರಿಯಲ್ಲ. ಹಿಂದಿನ ಸರ್ಕಾರಗಳು ರೈತರ ಕೃಷಿ ಸಾಲ ಮನ್ನಾ, ಬಡ್ಡಿ ಮನ್ನಾ ಹಾಗೂ ವಿವಿಧ ಪರಿಹಾರಗಳನ್ನು ಘೋಷಿಸುತ್ತಿದ್ದವು. ಆದರೆ ಪ್ರಸ್ತುತ ಸರ್ಕಾರದಿಂದ ರೈತರಿಗೆ ಯಾವುದೇ ರೀತಿಯ ಸಾಲಮನ್ನಾ ಅಥವಾ ಪರಿಹಾರ ಘೋಷಣೆ ಮಾಡದಿರುವುದು ಸರಿಯಲ್ಲ ಎಂದು ಅವರು ಹೇಳಿದರು.
ಗ್ರಾಮೀಣ ಪ್ರದೇಶಗಳ ರಸ್ತೆಗಳು ಹದಗೆಟ್ಟಿದ್ದರೂ ಸಮರ್ಪಕ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಕಾಡಾನೆಗಳ ನಿರಂತರ ದಾಳಿಯಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗುತ್ತಿದೆ. ರೈತರ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕೆಂದು ಆಗ್ರಹಿಸಿದರು.
ಆರ್‌ಟಿಸಿಯಲ್ಲಿ ಒಂದೇ ಕುಟುಂಬದ ಸದಸ್ಯರ ಜಂಟಿ ಹೆಸರುಗಳಿರುವ ಕಾರಣ ರೈತರಿಗೆ ಕೃಷಿ ಸಾಲ ಪಡೆಯಲು ತೊಂದರೆಯಾಗುತ್ತಿದೆ. ಈ ಹಿಂದೆ ಸಹಕಾರ ಸಂಘಗಳ ಮೂಲಕ ಕೃಷಿಕರಿಗೆ ನೀಡಲಾಗುತ್ತಿದ್ದ ರೀತಿಯಲ್ಲಿಯೇ, ಇಂತಹ ಸಮಸ್ಯೆಗಳಿಗೆ ಸರಳ ಪರಿಹಾರ ಕಂಡುಕೊಂಡು ಕೃಷಿ ಸಾಲ ನೀಡುವ ವ್ಯವಸ್ಥೆಯನ್ನು ಮುಂದುವರಿಸಬೇಕೆಂದು ಒತ್ತಾಯಿಸಿದರು.
ಸಂಘದ ಶ್ರೀ ನರೇಂದ್ರ ಮೋದಿ ರೈತ ಸಹಕಾರ ಭವನದ ಸಭಾಂಗಣದಲ್ಲಿ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಅವರು ಮಾತನಾಡಿ, ಸಂಘಕ್ಕೆ ಸುಮಾರು ರೂ.1.20 ಕೋಟಿ ಲಾಭವಿದ್ದರೂ ಸರ್ಕಾರದಿಂದ ಬರಬೇಕಾದ ಹಣ ಬಾಕಿ ಇರುವ ಹಿನ್ನೆಲೆಯಲ್ಲಿ ರೂ.75.34 ಲಕ್ಷ ಲಾಭಾಂಶ ತೋರಿಸಲಾಗಿದೆ. ಈ ಬಾರಿ ಸದಸ್ಯರಿಗೆ ಶೇ.20ರಷ್ಟು ಡಿವಿಡೆಂಡ್ ಹಾಗೂ ರೂ.700 ಸಭಾ ಭತ್ಯೆ ನೀಡಲಾಗುವುದು ಎಂದು ತಿಳಿಸಿದರು.
1976-77ರಲ್ಲಿ ನೋಂದಣಿಗೊಂಡಿರುವ ಹಿರಿಯರು ಕಟ್ಟಿಬೆಳೆಸಿದ ಈ ಸಹಕಾರ ಸಂಘ ಮುಂದಿನ ವರ್ಷ 50ನೇ ವರ್ಷಕ್ಕೆ ಕಾಲಿಡಲಿದೆ. ಈ ಹಿನ್ನೆಲೆಯಲ್ಲಿ 50ನೇ ವರ್ಷಾ ಚರಣೆಯನ್ನು ವಿಶೇಷವಾಗಿ ಆಚರಿಸಿ, ಸಂಘದ ಎಲ್ಲಾ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು.
ಸಂಘದ ಮುಖ್ಯ ಕಚೇರಿ ಹಾಗೂ ಈರಳೆ ಶಾಖೆಯ ಜಾಗಕ್ಕೆ ಸಂಬಂಧಿಸಿದಂತೆ ಸಂಘದ ಕೆಲವು ಸದಸ್ಯರು ನ್ಯಾಯಾಲಯ ದಲ್ಲಿ ದಾವೆ ಹೂಡಿದ್ದು, ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಸಂಘದ ಪರವಾಗಿ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ ಎಂದು ಮಣಿ ಉತ್ತಪ್ಪ ತಿಳಿಸಿದರು.
ಈರಳೆ ಶಾಖೆಯ ಗೋದಾಮು ಹಳೆಯದಾಗಿರುವುದರಿಂದ ಅದರ ದುರಸ್ತಿ ಕಾರ್ಯ ಕೈಗೊಳ್ಳಲು ಮಹಾಸಭೆಯ ಅನುಮತಿ ಪಡೆಯಲಾಗಿದೆ. ಸಂಘದಲ್ಲಿ ನೂತನ ತಂತ್ರಜ್ಞಾನ ವ್ಯವಸ್ಥೆ ಅಳವಡಿಸುವ ಉದ್ದೇಶದಿಂದ ಕಾಮನ್ ಸಾಫ್ಟ್‌ವೇರ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ಅವರು ಹೇಳಿದರು.
ಸಹಕಾರ ಸಂಘದ ಅಭಿವೃದ್ಧಿಗೆ ರೂ.1 ಲಕ್ಷ ದೇಣಿಗೆ ನೀಡಿದ ನಿವೃತ್ತ ವಾಯುಪಡೆ ಯೋಧ ಗಣೇಶ್ ಭೀಮಯ್ಯ ಹಾಗು ಪತ್ನಿ ಪ್ರೇಮಾ ಭೀಮಯ್ಯ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಮಗ ಪುತ್ತರಿರ ಸುಧೀರ್ ಗಣಪತಿ ಹಾಜರಿದ್ದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪುತ್ತರಿರ ಗಣೇಶ್ ಭೀಮಯ್ಯ ಅವರು, ಸಂಘದ ಅಭಿವೃದ್ಧಿಗಾಗಿ ಕೈಗೊಳ್ಳುತ್ತಿರುವ ಕಾರ್ಯಗಳನ್ನು ಶ್ಲಾಘಿಸಿದರು. ಐನ್‌ಮನೆ, ಕೈಮಡ ಹಾಗೂ ದೇವಾಲಯಗಳಿಗೆ ದೇಣಿಗೆ ನೀಡುವ ಸಂಘದ ಕಾರ್ಯವನ್ನು ಅಭಿನಂದಿಸಿದರು. ಸಂಘವು ಸ್ಥಳೀಯ ಹಲವು ಮಾಜಿ ಯೋಧರನ್ನು ಸನ್ಮಾನಿಸಿರುವುದು ಇಡೀ ದೇಶದ ಯೋಧರಿಗೆ ನೀಡಿದ ಗೌರವವಾಗಿದೆ ಎಂದರು.
ಆಂತರಿಕ ಲೆಕ್ಕಪರಿಶೋಧಕ ಚಂದ್ರಶೇಖರ್ ಮಾತನಾಡಿ, ಒಮ್ಮೆ ರೂ.4 ಲಕ್ಷ ಸಾಲದ ಸ್ಥಿತಿಯಲ್ಲಿದ್ದ ಸಹಕಾರ ಸಂಘ ಇಂದು ಅಭಿವೃದ್ಧಿಯತ್ತ ಸಾಗುತ್ತಿದ್ದು, ಉತ್ತಮ ಲಾಭಾಂಶ ಗಳಿಸುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಪ್ರತಿಭಾವಂತ ರೈತರ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್. ನಂದಿನಿ ಪ್ರಾರ್ಥಿಸಿದರು. ನಿರ್ದೇಶಕ ಅಕ್ಕಾರಿ ದಯಾನಂದ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.