ಕುಶಾಲನಗರ : ಕುಶಾಲನಗರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಒತ್ತಾಯಿಸಿ ಸುಂಟಿಕೊಪ್ಪ ಹೋಬಳಿ ರೈತ ಸಂಘದಿಂದ ಕುಶಾಲನಗರ ತಾಲೂಕು ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟಿಸಲಾಯಿತು.ಕೊಡಗು ಜಿಲ್ಲೆಯ ಇತರೆ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿ, ಕುಶಾಲನಗರ ತಾಲೂಕನ್ನು ಮಾತ್ರ ಕೈ ಬಿಟ್ಟಿರುವುದು ಖಂಡನೀಯ ಎಂದು ಆರೋಪಿಸಿದ ಪ್ರತಿಭಟನಾಕಾರರು, ಸರ್ಕಾರ ಮತ್ತು ಅಧಿಕಾರಿಗಳು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. ತಾಲೂಕಿನ ರೈತರನ್ನು ಕಡೆಗಣಿಸಲಾಗುತ್ತಿದೆ ಎಂದು ಶಾಸಕರು, ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಲಾಯಿತು.
ಕುಶಾಲನಗರಕ್ಕೆ ಮಾಡಿದ ಅನ್ಯಾಯದ ಬಗ್ಗೆ ಶಾಸಕರು ಗಮನಹರಿಸಿ ಸರ್ಕಾರದ ಗಮನ ಸೆಳೆಯಬೇಕಿದೆ. ತಪ್ಪಿದಲ್ಲಿ ಬಂದ್ ಗೆ ಕರೆ ನೀಡಲಾಗುವುದು, ತಾಲೂಕು ತಹಸೀಲ್ದಾರ್ ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ಮುಖಂಡ ಬಿ.ಬಿ.ಭಾರತೀಶ್ ಮಾತನಾಡಿ, ಈಗಾಗಲೇ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿದ್ದು ಮುಂದಿನ ದಿನಗಳಲ್ಲಿ ಕುಡಿವ ನೀರಿಗೂ ಹಾಹಾಕಾರ ಉಂಟಾಗುವ ಪರಿಸ್ಥಿತಿ ಎದುರಾಗಲಿದೆ. ಜಿಲ್ಲೆಯ ಎಲ್ಲಾ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ ಕುಶಾಲನಗರವನ್ನು ಕೈಬಿಟ್ಟಿರುವುದು ಯಕ್ಷಪ್ರಶ್ನೆಯಾಗಿದೆ. ಅಧಿಕಾರಿಗಳು ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲು ಶಾಸಕಾಂಗ ಕಾರ್ಯಾಂಗಕ್ಕೆ ಆದೇಶ ಮಾಡಬೇಕಿದೆ. ಆದಾಗ ಮಾತ್ರ ನಮ್ಮ ತಾಲೂಕಿನ ಸಮಸ್ಯೆ ಸಂಬಂಧಿಸಿದವರಿಗೆ ಮನವರಿಕೆಯಾಗಲಿದೆ ಎಂದರು.
ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.ರೈತ ಮುಖಂಡರಾದ ದಾಸಂಡ ರಮೇಶ್, ಕುಂಜಲಿನ್, ಮಂಜುನಾಥ್, ಅರುಣ್ ಚೆಂಗಪ್ಪ, ವಿನಯ್, ಹಿತೇಶ್, ಸುನಿತ್ ಕೊಮರಪ್ಪ , ಸ್ಟೀಫನ್ , ಗೌತಮ್, ಡಿಸಾಂತ್, ಮಂಜು , ವಸಂತ ಹಾರನಬೈಲ್, ಉದಯ, ಪ್ರಶಾಂತ್ ಕಲ್ಲೂರು ಮತ್ತಿತರರು ಇದ್ದರು.