ಕಾಂಗ್ರೆಸ್ ನಾಯಕರ ಸಂಸತ್ ಸ್ಥಾನ ಅನರ್ಹಗೊಳಿಸಲು ಒತ್ತಾಯ

KannadaprabhaNewsNetwork | Published : Apr 19, 2025 12:36 AM

ಸಾರಾಂಶ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸಿಲುಕಿರುವ ಕಾಂಗ್ರೆಸ್ ನಾಯಕರ ಸಂಸತ್ ಸ್ಥಾನವನ್ನು ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ನೇತೃತ್ವದಲ್ಲಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನ್ಯಾಷನಲ್ ಹೆರಾಲ್ಡ್ ಪ್ರಕರಣ । ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಪ್ರತಿಭಟನೆ

ಕನ್ನಡಪ್ರಭ ವಾರ್ತ ಹೊಸಪೇಟೆ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸಿಲುಕಿರುವ ಕಾಂಗ್ರೆಸ್ ನಾಯಕರ ಸಂಸತ್ ಸ್ಥಾನವನ್ನು ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ನೇತೃತ್ವದಲ್ಲಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಕಿಚಡಿ ಕೊಟ್ರೇಶ್ ಮಾತನಾಡಿ, ಗಾಂಧೀಜಿ ಹೆಸರಿನ ಅಧಿಕಾರ ನಡೆಸುತ್ತಿರುವ ನಕಲಿ ಗಾಂಧಿಗಳ ಕುಟುಂಬ ದೇಶವನ್ನು ಲೂಟಿ ಮಾಡಿದೆ. ಲಕ್ಷಾಂತರ ಸ್ವಾತಂತ್ರ‍್ಯ ಹೋರಾಟಗಾರರ ಪರಿಶ್ರಮದ ನ್ಯಾಷನಲ್ ಹೆರಾಲ್ಡ್ ಸಂಸ್ಥೆ, ಇದು, ಕೇವಲ ಐದು ಜನರ ಕೈಯಲ್ಲಿರುವುದು ದುರ್ದೈವದ ಸಂಗತಿ ಎಂದು ಆರೋಪಿಸಿದರು.

ಸ್ವಾತಂತ್ರ‍್ಯ ಹೋರಾಟದಲ್ಲಿ ಕಾಂಗ್ರೆಸ್ ಮುಖವಾಣಿಯಾಗಿ ಕಾರ್ಯನಿರ್ವಹಿಸಿದ ಸಂಸ್ಥೆ ಈಗ ನಕಲಿ ಗಾಂಧಿಗಳ ಕುಟುಂಬದಲ್ಲಿ ಸಿಲುಕಿ ಭಾರೀ ಭ್ರಷ್ಟಾಚಾರ ನಡೆಸಿದೆ. ೨೦೧೪ ರಲ್ಲಿ ನ್ಯಾ.ಸುಬ್ರಹ್ಮಣ್ಯಸ್ವಾಮಿ ದಾಖಲಿಸಿದ ಪ್ರಕರಣದಲ್ಲಿ ಸೋನಿಯಾಗಾಂಧಿ, ರಾಹುಲ್‌ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಹಲವು ಮಂದಿ ಭ್ರಷ್ಟಾಚಾರ ಶಾಮೀಲಾಗಿದ್ದರೆಂದು ಆರೋಪಿಸಲಾಗಿತ್ತು. ಕಾಂಗ್ರೆಸ್ ನಾಯಕರು ರಾಷ್ಟ್ರದ ಸ್ವಾತಂತ್ರ‍್ಯ ಹೋರಾಟಗಾರರು ಹಾಗೂ ಸಂವಿಧಾನಕ್ಕೆ ಅವಮಾನಿಸಿದ್ದಾರೆ. ಸತ್ಯ ಬಯಲಿ ಗೆಳೆಯಲು ಕೇಂದ್ರ ಸರ್ಕಾರ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದಾಗ ಕೆಲವು ನಕಲಿ ಗೂಂಡಾಗಳನ್ನು ಕಾಂಗ್ರೆಸ್ ನಾಯಕರು ಬಳಸಿಕೊಂಡು ಇಡಿ ಕಚೇರಿ ಮುಂಭಾಗ ಪ್ರತಿಭಟನೆ ನಾಟಕವಾಡಿ ದೇಶದ ಜನತೆಗೆ ಮಂಕುಬೂದಿ ಎರಚುತ್ತಿದ್ದಾರೆ ಎಂದು ದೂರಿದರು.

ಮಂಡಲ ಅಧ್ಯಕ್ಷ ಶಂಕರ್ ಮೇಟಿ ಮಾತನಾಡಿ, ಬಿಜೆಪಿ ವಿನಾಕಾರಣ ಕಾಂಗ್ರೆಸ್ ಮೇಲೆ ಸುಳ್ಳು ಆರೋಪ ವೆಸಗಲ್ಲ. ಸತ್ಯಾಸತ್ಯತೆ ಅರಿತು ದೂರುತ್ತಿದೆ. ಈ ಬಾರಿ ನ್ಯಾಷನಲ್ ಹೆರಾಲ್ಡ್ನ ಅಕ್ರಮ ಹಣ ವರ್ಗಾವಣೆ ಖಚಿತತೆ ಅರಿತು ಆರೋಪ ಮಾಡಿದೆ. ಅಲ್ಲದೇ ಪತ್ರಿಕೆಯ ಮೂಲ ವಾರಸುದಾರರಿಗೂ ನೆರವು ನೀಡದೇ ಸಂಪೂರ್ಣ ಲೂಟಿವೆಸಗಿದೆ ಎಂದು ದೂರಿದರು.

ಪ್ರಮುಖರಾದ ಬಂಗಾರು ಸೂರಿ, ವ್ಯಾಸರಾಜ, ಚಂದ್ರು ದೇವಲಾಪುರ, ಕವಿತಾ, ರಾಘವೇಂದ್ರ, ಹೊನ್ನೂರಪ್ಪ, ಅನುರಾಧ, ಜಯಶ್ರೀ, ಶ್ರೀನಿವಾಸ ಇತರರಿದ್ದರು.

Share this article