ಕನ್ನಡಪ್ರಭ ವಾರ್ತೆ ಹಾಸನ
ವೀರ ಕನ್ನಡಿಗ ಟಿಪ್ಪು ಸೇನೆಯ ಪದಾಧಿಕಾರಿ ಅಕ್ಮಲ್ ಪಾಷಾ ಮಾಧ್ಯಮದೊಂದಿಗೆ ಮಾತನಾಡಿ, ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡರು ಬಗರ್‌ಹುಕುಂ ಯೋಜನೆಯಡಿ ಕೆಲವು ಮುಸ್ಲಿಂ ಸಮಾಜದವರು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಲ್ಲಿ ದಾಖಲೆ ಮಾಡಿಕೊಡಲು ಅರ್ಜಿ ಸಲ್ಲಿಸಿರುವುದನ್ನು ಶಾಸಕರು ಬಹಿರಂಗವಾಗಿ ವಿರೋಧಿಸಿದ್ದಾರೆ. ಸಾಬರಿಗೆ ಬಗರ್‌ಹುಕ್ಕುಂ ಸರ್ಕಾರಿ ಜಮೀನಿಗೆ ಸಂಬಂಧಿಸಿದಂತೆ ಯಾರಾದರೂ ದಾಖಲೆ ಮಾಡಿಕೊಟ್ಟರೆ ಅಂಥವರನ್ನು ನೇಣಿಗೆ ಹಾಕುತ್ತೇನೆಂದು ಹೇಳಿರುವುದು ಸಂವಿಧಾನ ವಿರೋಧಿ ಹಾಗೂ ಅಲ್ಪಸಂಖ್ಯಾತರ ವಿರೋಧಿ ಹೇಳಿಕೆಯಾಗಿದೆ. ಇದನ್ನು ರಾಜ್ಯಾದ್ಯಾಂತ ಮುಸ್ಲಿಂ ಸಮುದಾಯ ತೀವ್ರವಾಗಿ ಖಂಡಿಸುತ್ತದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡಲೇ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡರವರನ್ನು ಪಕ್ಷದಿಂದ ಉಚ್ಛಾಟಿಸಿ, ಶಾಸಕ ಸ್ಥಾನದಿಂದಲೂ ಅನರ್ಹಗೊಳಿಸಬೇಕೆಂದು ಮನವಿ ಮಾಡಿದರು. ನಮ್ಮ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.ಜಿಲ್ಲಾ ಅಲ್ಪಸಂಖ್ಯಾತರ ಹಿತರಕ್ಷಣಾ ವೇದಿಕೆಯ ಮುಖ್ಯ ಸಂಚಾಲಕ ಸಮೀರ್ ಅಹಮದ್, ಸಂಚಾಲಕ ಆಜಂಖಾನ್, ಸದಸ್ಯ ಹಿಮಾಯಾನ್, ಶಾಹ ನವಾಜ್, ಅಕ್ಮಲ್ ಜಾವೀದ್, ಚಾಂದ್ ಪಾಷಾ, ವಜಾದ್ ಇತರರು ಉಪಸ್ಥಿತರಿದ್ದರು.