ಕೆರೆಗೆ ನೀರು ಹರಿಸಲು ಆಗ್ರಹಿಸಿ ಕೆರೆಯಲ್ಲೇ ಟೆಂಟ್‌ ಹಾಕಿ ಪ್ರತಿಭಟನೆ

KannadaprabhaNewsNetwork |  
Published : May 17, 2024, 12:33 AM IST
ಜಂಬಗಿ ಕೆರೆ ನೀರು ತುಂಬಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ಜಂಬಗಿ, ಆಹೇರಿ, ಅಂಕಲಗಿ, ಹುಣಶ್ಯಾಳ ಗ್ರಾಮದ ರೈತರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನೀರು ತುಂಬಿಸುವಂತೆ ಆಗ್ರಹಿಸಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜಂಬಗಿ ಕೆರೆ ನೀರು ತುಂಬಿಸುವಂತೆ ಆಗ್ರಹಿಸಿ ನೂರಾರು ರೈತರು ಕೆರೆಯಲ್ಲಿ ಟೆಂಟ್ ಹಾಕಿ ಹಸಿರು ಧ್ವಜ ಹಿಡಿದು ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಸಿದರು. ಜಿಲ್ಲಾಧಿಕಾರಿ ಹಾಗೂ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ಜಂಬಗಿ, ಆಹೇರಿ, ಅಂಕಲಗಿ, ಹುಣಶ್ಯಾಳ, ಮಾದಾಳ ಗ್ರಾಮದ ರೈತರು ಅನಿರ್ದಿಷ್ಟ ಧರಣಿ ಸತ್ಯಾಗ್ರಹಕ್ಕೆ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಂಬಗಿ ಕೆರೆ ನೀರು ತುಂಬಿಸುವಂತೆ ಆಗ್ರಹಿಸಿ ನೂರಾರು ರೈತರು ಕೆರೆಯಲ್ಲಿ ಟೆಂಟ್ ಹಾಕಿ ಹಸಿರು ಧ್ವಜ ಹಿಡಿದು ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಸಿದರು.

ಜಿಲ್ಲಾಧಿಕಾರಿ ಹಾಗೂ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ಜಂಬಗಿ, ಆಹೇರಿ, ಅಂಕಲಗಿ, ಹುಣಶ್ಯಾಳ, ಮಾದಾಳ ಗ್ರಾಮದ ರೈತರು ಅನಿರ್ದಿಷ್ಟ ಧರಣಿ ಸತ್ಯಾಗ್ರಹಕ್ಕೆ ಕರೆ ನೀಡಿದರು.ಜಂಬಗಿ ಗ್ರಾಮದ ಮಾಜಿ ಗ್ರಾಪಂ ಸದಸ್ಯ ಸಂಗಮೆಶ ಗುದಳೆ ಮಾತನಾಡಿ, ಜಂಬಗಿ ಕೆರೆಯೂ ಜಿಲ್ಲೆಯಲ್ಲಿಯೇ ೨ನೇ ಅತಿದೊಡ್ಡ ಕೆರೆಯಾಗಿದೆ. ಹುಣಶ್ಯಾಳ (ಮಾದಾಳ) ಕೆರೆಗಳಲ್ಲಿ ನೀರು ತುಂಬಿದರೆ ಸುತ್ತಮುತ್ತಲಿನ ೫-೬ ಹಳ್ಳಿಗಳ ರೈತರಿಗೆ ಜನ ಜಾನುವಾರುಗಳಿಗೆ ಕುಡಿಯಲು ನೀರಿನ ಅನುಕೂಲವಾಗುವುದು ಮಾತ್ರವಲ್ಲದೇ, ಅಂತರ್ಜಲ ಮಟ್ಟ ಹೆಚ್ಚಾಗಿ ನೀರಿನ ಮೂಲಗಳು ಅಭಿವೃದ್ಧಿ ಹೊಂದುತ್ತವೆ. ಈ ಕೆರೆಗಳು ತುಂಬಬೇಕಾದರೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ವಿಶೇಷ ಆಸಕ್ತಿ ತೋರಿಸಬೇಕಾಗಿದೆ. ಆದರೆ ದುರ್ಧೈವಯುತವಾಗಿ ಯಾರು ತಲೆ ಕೆಡೆಸಿಕೊಳ್ಳದೇ ಇರುವುದರಿಂದ ಇಂದು ಕೆರೆ ನೀರು ಖಾಲಿಯಾಗಿ ಜಾನುವಾರುಗಳಿಗೂ ಕುಡಿಯಲು ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಈ ಎಲ್ಲಾ ಕೆರೆಗಳನ್ನು ತುಂಬಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ ಮಾತನಾಡಿ, ಜಿಲ್ಲೆಯ ಎಲ್ಲಾ ಕೆರೆಗಳು ತುಂಬುತ್ತಿದ್ದರೂ ಜಂಬಗಿ ಹಾಗೂ ಹುಣಶ್ಯಾಳ ಕೆರೆ ಮಾತ್ರ ತುಂಬದೇ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಲ್ಲಿಯವರೆಗೆ ಕೆರೆ ನೀರು ತುಂಬದೇ ನೆಪ ಹೇಳುತ್ತಿದ್ದಾರೆ. ಕೇಳಿದರೆ ನಿಮಗೆ ನೀರು ಬರುವುದಿಲ್ಲ. ನೀವೂ ಮೇಲಿನ ಅಧಿಕಾರಿಗಳಿಗೆ ಕೇಳಿ, ನೀರಿನ ಒತ್ತಡ ಕಡಿಮೆ ಇದೆ ಎಂದು ಸಬೂಬ ಹೇಳುತ್ತಿದ್ದಾರೆ. ಅನೇಕ ಬಾರಿ ಕರೆ ಮಾಡಿದರೂ ಇಲ್ಲ ಸಲ್ಲದ ಕಥೆ ಹೇಳಿ ಹೋರಾಟದ ಸ್ಥಳಕ್ಕೆ ಬರದೇ ತಲೆ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಮುಖಂಡ ಪ್ರಕಾಶ ದಿಂಡವಾರ ಮಾತನಾಡಿ ,ರಾಂಪೂರ ವ್ಯಾಪ್ತಿಯಿಂದ ನಮಗೆ ಬರುವುದು ಅಸಾಧ್ಯದ ಮಾತು. ಸಮೀಪದ ಕಗ್ಗೊಡ ಗ್ರಾಮದಲ್ಲಿರುವ ಮುಖ್ಯ ಕಾಲುವೆಗಳಿಂದ ಹಳ್ಳದ ಮೂಲಕ ಜಂಬಗಿಯ ಕೆರೆ ನೀರು ತುಂಬಿಸಬಹುದು ಎಂದು ಸಲಹೆ ನೀಡಿದರು.

ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಗ್ರಾಪಂ ಅಧ್ಯಕ್ಷ ಶ್ರೀಶೈಲ ಮಸೂತಿ, ಸುರೇಶ ತಳವಾರ, ಮುತ್ತಪ್ಪ ನಾಯ್ಕೋಡಿ, ರಮೇಶ ಕೋಣಸಿರಸಗಿ, ಶರಣಪ್ಪ ಜಮಖಂಡಿ, ರಾಮಣ್ಣ ಸವಳಿ, ನಿಂಗಪ್ಪ ಗೇರಡೆ, ಬಸವರಾಜ ಗಾಣಗೇರ, ಬಸವರಾಜ ಮಸೂತಿ, ರಾಮಸಿಂಗ ರಜಪೂತ, ಅನಮೇಶ ಜಮಖಂಡಿ, ನಿಜಲಿಂಗಪ್ಪ ತೇಲಿ, ಬಸನಗೌಡ ಬಿರಾದಾರ, ಮಲ್ಲಿಕಾರ್ಜುನ ನಾಗಠಾಣ, ಬಸವಂತ ತೇಲಿ, ಮಹದೇವಪ್ಪ ತೇಲಿ, ಸಾತಲಿಂಗಯ್ಯ ಸಾಲಿಮಠ, ಮಹಾದೇವ ಕದಮ, ಕಲ್ಲಪ್ಪ ಪಾರಶೆಟ್ಟಿ, ರಾಜು ಹೊನ್ನಳ್ಳಿ, ಬಸಯ್ಯ ಆಲಗೋಡ, ಮಹಿಳಾ ಮುಖಂಡರಾದ ಗಂಗೂಬಾಯಿ ಹಚಡದ, ಸಂಗೀತಾ ರಾಠೋಡ ಸೇರಿದಂತೆ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ