ಬೇಸಿಗೆ ಬೆಳೆಗೆ ಹೇಮಾವತಿಯಿಂದ ನೀರು ಹರಿಸುವಂತೆ ಆಗ್ರಹ

KannadaprabhaNewsNetwork |  
Published : Feb 21, 2026, 02:15 AM IST
೧೯ಕೆಎಂಎನ್‌ಡಿ-೩ನೀರಿಲ್ಲದೆ ಬಣಗುಟ್ಟುತ್ತಿರುವ ಹೇಮಾವತಿ ಮುಖ್ಯ ನಾಲೆ. | Kannada Prabha

ಸಾರಾಂಶ

ಹೇಮಾವತಿ ಜಲಾಶಯದ ರೈತರ ಮೇಲಿನ ಸರ್ಕಾರದ ಮಲತಾಯಿ ಧೋರಣೆ ನಿಲ್ಲಬೇಕು. ತಕ್ಷಣವೇ ಹೇಮಾವತಿ ಜಲಾಶಯದ ಎಡದಂಡೆ ನಾಲೆಯ ಮೂಲಕ ತಾಲೂಕಿನ ಕೆರೆ ಕಟ್ಟೆಗಳಿಗೆ ಹೇಮೆಯ ನೀರು ಹರಿಸುವಂತೆ ಆಗ್ರಹಿಸಿದ್ದಾರೆ.

ಎಂ.ಕೆ.ಹರಿಚರಣತಿಲಕ್

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕೃಷ್ಣರಾಜಸಾಗರ ಜಲಾಯನ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದ ರೈತರ ಬೇಸಿಗೆ ಬೆಳೆಗೆ ಕಾವೇರಿ ನದಿಯಿಂದ ಕಟ್ಟು ನೀರು ಪದ್ಧತಿಯಡಿ ನೀರು ಹರಿಸುತ್ತಿರುವ ಮಾದರಿಯಲ್ಲೇ ‘ಹೇಮಾವತಿ’ ಜಲಾನಯನ ವ್ಯಾಪ್ತಿಯ ರೈತರ ಬೇಸಿಗೆ ಬೆಳೆಗೆ ನೀರು ಹರಿಸುವಂತೆ ಆ ಭಾಗದ ರೈತರ ಆಗ್ರಹವಾಗಿದೆ.

ಹೇಮಾವತಿ ಜಲಾಶಯದ ಎಡದಂಡೆ ತಾಲೂಕು ವ್ಯಾಪ್ತಿಯಲ್ಲಿ ೧೦೬ ನೇ ಕಿ.ಮೀ.ನಿಂದ ೧೫೦.೯೭೫ ನೇ ಕಿ.ಮೀ ವರೆಗೆ ಒಟ್ಟು ೪೫.೯೭೫ ಕಿ.ಮೀ ಉದ್ದ ನಾಲೆ ಹಾದು ಹೋಗಿದೆ. ಇದರಡಿಯಲ್ಲಿ ೪೭ ರಿಂದ ೬೪ ರವರೆಗೆ ಒಟ್ಟು ವಿತರಣಾ ನಾಲೆಗಳಿದ್ದು ಇದರ ಒಟ್ಟು ಉದ್ದ ೨೦೦.೮೦ ಕಿ.ಮೀ. ಆಗಿದೆ. ಈ ವಿತರಣಾ ನಾಲೆಗಳ ಮೂಲಕ ೫೪,೦೮೮ ಎಕರೆ ಅಚ್ಚುಕಟ್ಟು ಪ್ರದೇಶದ ಖಾರೀಫ್ ಮತ್ತು ರಾಬಿ ಬೆಳೆಗೆ ನೀರು ಕೊಡಲು ಉದ್ದೇಶಿತ ಯೋಜನೆಯಲ್ಲಿದ್ದರೂ ನೀರು ಹರಿಸದೆ ನಿರ್ಲಕ್ಷ್ಯ ವಹಿಸಲಾಗಿದೆ.

ಈ ನಾಲಾ ವ್ಯಾಪ್ತಿಯಲ್ಲಿ ನೀರಾವರಿ ಇಲಾಖೆಗೆ ಸೇರಿದ ೯೫ ಕೆರೆಗಳಿವೆ. ಈ ಎಲ್ಲಾ ಕೆರೆಗಳು ಹೇಮೆಯ ನೀರನ್ನು ಅವಲಂಬಿಸಿವೆ. ಕೆರೆ ಬಯಲಿನಲ್ಲಿಯೂ ೫,೨೫೫ ಎಕರೆ ಕೃಷಿ ಭೂಮಿ ಹೇಮೆಯ ನೀರನ್ನು ಆಶ್ರಯಿಸಿದೆ. ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ಹೇಮಾವತಿ ಜಲಾಶಯದಲ್ಲಿ ರೈತರ ಕೃಷಿಗೆ ನೀಡಬಹುದಾದಷ್ಟು ನೀರಿನ ಸಂಗ್ರಹವಿದೆ.

ರಾಜ್ಯ ಸರ್ಕಾರ ಈಗಾಗಲೇ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ಕೆಆರ್‌ಎಸ್ ಜಲಾನಯನ ವ್ಯಾಪ್ತಿಯ ರೈತರಿಗೆ ಬೇಸಿಗೆ ಬೆಳೆಗೆ ನೀರು ಹರಿಸುತ್ತಿದೆ. ಆದರೆ, ಹೇಮಾವತಿ ಜಲಾಶಯನ ಪ್ರದೇಶದ ರೈತರಿಗೆ ಇದುವರೆಗೂ ನಾಲೆಗಳ ಮೂಲಕ ನೀರು ಹರಿಸುವತ್ತ ಆಲೋಚಿಸಿಲ್ಲ. ಕಳೆದ ವರ್ಷವೂ ಹೇಮಾವತಿ ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹವಿದ್ದರೂ ರಾಜ್ಯ ಸರ್ಕಾರ ಹೇಮಾವತಿ ಕಾಲುವೆಗಳಲ್ಲಿ ನೀರು ಹರಿಸದೆ ರೈತರಿಗೆ ವಂಚನೆ ಮಾಡಿತ್ತು. ಪ್ರಸಕ್ತ ಸಾಲಿನಲ್ಲೂ ಈ ಭಾಗದ ರೈತರಿಗೆ ವಂಚನೆಯಾಗುತ್ತಿದೆ ಎನ್ನುವುದು ರೈತರ ಆರೋಪವಾಗಿದೆ.

ರಾಜ್ಯದ ಕೃಷಿ ಸಚಿವರು ಹೇಮಾವತಿ ಜಲಾನಯನ ಪ್ರದೇಶಕ್ಕೆ ಸೇರಿದವರಾಗಿದ್ದರೂ ಹೇಮಾವತಿ ರೈತರ ಹಿತರಕ್ಷಣೆಗೆ ಮುಂದಾಗುತ್ತಿಲ್ಲ. ಮಂಡ್ಯ ಜಿಲ್ಲೆಯ ಹೇಮಾವತಿ ಪ್ರದೇಶದ ಶಾಸಕರು ಹೇಮೆಯ ನೀರಿಗಾಗಿ ಸರ್ಕಾರದ ಮೇಲೆ ಅಗತ್ಯ ಒತ್ತಡ ಹಾಕುತ್ತಿಲ್ಲ. ನೀರಿಗಾಗಿ ಹೇಮಾವತಿ ಜಲಾನಯನ ಪ್ರದೇಶದ ರೈತರು ಸಂಘಟಿತ ಹೋರಾಟ ನಡೆಸದ ಪರಿಣಾಮ ಜನರ ಹಿತ ಕಾಯಬೇಕಾದ ಶಾಸಕರು ಹೇಮಾವತಿ ರೈತರ ಹಿತರಕ್ಷಣೆಗೆ ಮುಂದಾಗುತ್ತಿಲ್ಲ ಎಂದು ದೂರಿದ್ದಾರೆ.

ಹೇಮಾವತಿ ಜಲಾಶಯದ ರೈತರ ಮೇಲಿನ ಸರ್ಕಾರದ ಮಲತಾಯಿ ಧೋರಣೆ ನಿಲ್ಲಬೇಕು. ತಕ್ಷಣವೇ ಹೇಮಾವತಿ ಜಲಾಶಯದ ಎಡದಂಡೆ ನಾಲೆಯ ಮೂಲಕ ತಾಲೂಕಿನ ಕೆರೆ ಕಟ್ಟೆಗಳಿಗೆ ಹೇಮೆಯ ನೀರು ಹರಿಸುವಂತೆ ಆಗ್ರಹಿಸಿದ್ದಾರೆ.

-----------

ಪ್ರಸಕ್ತ ಸಾಲಿನಲ್ಲಿ ಬೇಸಿಗೆ ಝಳ ತೀವ್ರವಾಗುವ ಮುನ್ನೆಚ್ಚರಿಕೆಯನ್ನು ಈಗಾಗಲೇ ಹವಾಮಾನ ತಜ್ಞರು ನೀಡಿದ್ದಾರೆ. ಬಿರು ಬೇಸಿಗೆಯಲ್ಲಿ ಕೆರೆ- ಕಟ್ಟೆಗಳನ್ನು ಹೇಮೆಯ ನೀರಿನಿಂದ ಭರ್ತಿ ಮಾಡಿದರೆ ಜನ, ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಅಲ್ಲದೇ, ಅಂತರ್ಜಲ ವೃದ್ಧಿಗೊಂಡು ಪಂಪ್‌ಸೆಟ್ ಆಧಾರಿತ ರೈತರ ಕೃಷಿಗೂ ಅನುಕೂಲವಾಗುತ್ತದೆ. ಹೇಮೆಯ ನೀರಿಗಾಗಿ ರೈತಸಂಘ ಹೋರಾಟಕ್ಕಿಳಿಯುವ ಮುನ್ನವೇ ರಾಜ್ಯ ಸರ್ಕಾರ ರೈತಪರ ನಿಲುವು ವ್ಯಕ್ತಪಡಿಸಿ ತಕ್ಷಣವೇ ಹೇಮಾವತಿ ಜಲಾನಯನ ಪ್ರದೇಶದ ಅಚ್ಚುಕಟ್ಟು ಪ್ರದೇಶಕ್ಕೆ ಅಗತ್ಯ ನೀರು ಹರಿಸಬೇಕು.

- ಕಾರಿಗನಹಳ್ಳಿ ಪುಟ್ಟೇಗೌಡ, ತಾಲೂಕು ಅಧ್ಯಕ್ಷರು, ರೈತಸಂಘ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನದಾಫ್‌-ಪಿಂಜಾರ ಸಮುದಾಯ ಒಪ್ಪಿಕೊಳ್ಳದ ಮುಸ್ಲಿಂ ಸಮುದಾಯ
ಜೈಲಲ್ಲಿ ಜಿಹಾದಿ: ಶಂಕಿತನ ಸುಳಿವಿಗೆ ₹5 ಲಕ್ಷ