ಕನ್ನಡಪ್ರಭ ವಾರ್ತೆ ಇಂಡಿ
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಮುಖಂಡರಾದ ಗುರುನಾಥ ಬಗಲಿ, ಮಲ್ಲನಗೌಡ ಪಾಟೀಲ,ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ ಅವರು, ಭೀಕರ ಬರಗಾಲ ತಾಲೂಕಿನಲ್ಲಿ ಆವರಿಸಿದ್ದರಿಂದ ನೀರಿಲ್ಲದೇ ಅಂತರ್ಜಲ ಬತ್ತಿ ಹೋಗಿದ್ದರಿಂದ ಬೆಳೆಗಳಿಗೆ ನೀರು ಇಲ್ಲದಿರುವುದರಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಕಾಲುವೆಗಳ ಮೂಲಕ ಕೆರೆಗಳನ್ನು ತುಂಬಿಸಿದರೆ, ನದಿ, ಹಳ್ಳ, ಬಾಂದಾರಗಳಿಗೆ ನೀರು ಹರಿಸಿದರೆ ಅಂತರ್ಜಲ ಮಟ್ಟ ಹೆಚ್ಚಾಗಿ ಬೋರ್‌ವೆಲ್, ಭಾವಿಗಳಿಗೆ ನೀರು ಬರುತ್ತಿತ್ತು. ಕೃಷಿ ಮಾಡಲು ಅನುಕೂಲವಾಗುತ್ತಿತ್ತು. ಮಳೆಗಾಲದಲ್ಲಿ ಹಾಳಾಗಿ ಹೋಗುವ ನೀರನ್ನು ಕೆರೆಗಳಿಗೆ ತುಂಬಿಸಿದ್ದರೆ ಇಂದು ಬೇಸಿಗೆಯಲ್ಲಿ ರೈತರು ಕೃಷಿ ಚಟುವಟಿಕೆಗಳನ್ನು ಸೇರಿದಂತೆ ಜನ ಜಾನುವಾರುಗಳಿಗೆ ಕುಡಿಯಲು ನೀರಿನ ಅನುಕೂಲವಾಗುತ್ತಿತ್ತು. ಕೂಡಲೇ ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಬೇಕು. ಇಂಡಿ ಶಾಖಾ ಕಾಲುವೆ ಹಾಗೂ ಗುತ್ತಿಬಸವಣ್ಣ ಏತ ನೀರಾವರಿ ಕಾಲುವೆಗಳ ಟೆಲ್ ಎಂಡ್ ವರೆಗೆ ನೀರು ಹರಿಸಬೇಕು. ತಾಲೂಕಿನ ಹಳ್ಳಿ ಹಾಗೂ ಜನವಸತಿ ಪ್ರದೇಶದಲ್ಲಿ ಕಳ್ಳತನ ಹೆಚ್ಚಾಗುತ್ತಿದ್ದು ಅದನ್ನು ನಿಯಂತ್ರಿಸಬೇಕು. ನಮ್ಮ ಬೇಡಿಕೆಗಳು ಈಡೇರಿಸುವವರೆಗೆ ರಸ್ತೆ ತಡೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ನಮ್ಮನ್ನು ಬಂಧನ ಮಾಡಿದರೂ ಅಂಜುವುದಿಲ್ಲ ಎಂದು ಪಟ್ಟು ಹಿಡಿದರು.
ರೈತರ ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಮಂಜುಳಾ ನಾಯಕ,ಕಂದಾಯ ನಿರೀಕ್ಷಕ ಎಚ್.ಎಚ್.ಗುನ್ನಾಪುರ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು. ರೈತರ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಇಂದು ನಿಮ್ಮೇಲ್ಲ ರೈತರ ಸಭೆ ಕರೆದು ಸಮಸ್ಯೆ ಬಗೆಹರಿಸಲಾಗುತ್ತದೆ. ತಾವು ಪ್ರತಿಭಟನೆ ಕೈಬಿಡಬೇಕು ಎಂದು ಮನವಿ ಮಾಡಿದರು.ನಂತರ ರೈತರು ಪ್ರತಿಭಟನೆಯಿಂದ ಹಿಂದೆ ಸರಿದರು. ಕೆಲಕಾಲ ರಸ್ತೆ ತಡೆ ನಡೆಸಿದ್ದರಿಂದ ಪ್ರಯಾಣಿಕರಿಗೆ ತೊಂದರೆಯಾಯಿತು. ವಿವಿಧ ಗ್ರಾಮದ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.