ಹೊಸಪೇಟೆ: ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಗಣಿ ಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಹಾಗೂ ಈ ಪ್ರದೇಶಗಳ ವಿಕಾಸಕ್ಕಾಗಿ ಕೆಎಂಇಆರ್‌ಸಿಯ ₹25 ಸಾವಿರ ಕೋಟಿ ನಿಧಿ ಬಳಕೆ ಮಾಡಬೇಕು. ಯಾವುದೇ ಕಾರಣಕ್ಕೂ ಈ ಅನುದಾನ ಬೇರೆ ಕಡೆ ವರ್ಗಾವಣೆ ಆಗಬಾರದು ಎಂದು ಸಮಾಜ ಪರಿವರ್ತನಾ ಸಮುದಾಯ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ಹಿರೇಮಠ ಒತ್ತಾಯಿಸಿದರು. ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಬಳ್ಳಾರಿ, ವಿಜಯನಗರ ಜಿಲ್ಲಾಧಿಕಾರಿಗಳು ಕೆಎಂಇಆರ್‌ಸಿ ಯೋಜನೆ ಕಾರ್ಯಕ್ರಮಗಳ ಬಗ್ಗೆಯೇ ಸರಿಯಾಗಿ ತಿಳಿದುಕೊಂಡಿಲ್ಲ. ಬಳ್ಳಾರಿ ನಗರ, ಹಗರಿಬೊಮ್ಮನಹಳ್ಳಿ ತಾಲೂಕು ಕೂಡ ಇದರ ವ್ಯಾಪ್ತಿಗೆ ಬರುವುದಿಲ್ಲ. ಆದರೂ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಆಶ್ರಯ ಮನೆಗಳ ನಿರ್ಮಾಣ ಯೋಜನೆ ರೂಪಿಸಲಾಗಿದೆ. ಮೊದಲು ಈ ಯೋಜನೆ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಕೆಎಂಇಆರ್‌ಸಿ ನಿಧಿ ಬಳಕೆ ವಿಷಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಬರುವುದಿಲ್ಲ. ಡಿಎಂಎಫ್ ನಿಧಿಯೇ ಬೇರೆ, ಕೆಎಂಇಆರ್‌ಸಿ ನಿಧಿಯೇ ಬೇರೆ. ಈ ಬಗ್ಗೆ ಆಯಾ ಜಿಲ್ಲಾಧಿಕಾರಿಗಳು ಆಯಾ ಶಾಸಕರಿಗೆ ತಿಳಿಸಬೇಕು. ತುಮಕೂರಿನ ಗುಬ್ಬಿಯಲ್ಲಿ ಕಮಿಷನ್‌ಗೋಸ್ಕರ ಅಲ್ಲಿನ ಶಾಸಕರು ಹಾಗೂ ಗುತ್ತಿಗೆದಾರನ ನಡುವೆ ಜಗಳವಾಗಿದೆ. ಗುತ್ತಿಗೆದಾರನ ಮೇಲೆ ಹಲ್ಲೆಯಾಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದರು.ಕೆಎಂಇಆರ್‌ಸಿ ಅಧ್ಯಕ್ಷೆ ಶಾಲಿನಿ ರಜನೀಶ್ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದ್ದಾರೆ. ಅವರ ಧೋರಣೆಯಿಂದ ಹಲವು ಅಧಿಕಾರಿಗಳು ಬೇಸತ್ತಿದ್ದಾರೆ. ಕೆಎಂಇಆರ್‌ಸಿ ಮಾರ್ಗಸೂಚಿಯಂತೆ ನಡೆದುಕೊಳ್ಳಬೇಕಿದೆ. ಈಗಾಗಲೇ ಅವರನ್ನು ಬದಲಿಸಲು ಸಿಎಂ ಸಿದ್ದರಾಮಯ್ಯಗೂ ಮನವಿ ಸಲ್ಲಿಸಲಾಗಿದೆ ಎಂದರು.
ನಿಧಿಯು ಬೇರೆ ಕಡೆ ವರ್ಗಾವಣೆಯಾಗುತ್ತಿರುವ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಸಂಸ್ಥೆಯು ಈ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಕೆಎಂಇಆರ್‌ಸಿ ನಿಧಿ ಸರ್ಕಾರದ ಬಜೆಟ್ ಅನುದಾನವಲ್ಲ, ಈ ಹಣ ಬಳಕೆ ಕುರಿತ ಕ್ರಿಯಾಯೋಜನೆ ರೂಪಿಸುವಾಗ ಭಾರೀ ಮುತುವರ್ಜಿ ವಹಿಸಬೇಕು ಎಂದರು.ಮುಖಂಡರಾದ ಶ್ರೀಶೈಲ ಆಲ್ದಳ್ಳಿ, ಟಿ.ಎಂ. ಶಿವಕುಮಾರ, ಸೈಯದ್ ಹೈದರ್ ಇದ್ದರು.