ಸರ್ಕಾರಿ ಶಾಲೆಗಳ ಮುಚ್ಚುವ ನಿರ್ಧಾರ ಕೈಬಿಡಲು ಒತ್ತಾಯ

KannadaprabhaNewsNetwork |  
Published : May 29, 2025, 01:10 AM ISTUpdated : May 29, 2025, 01:11 AM IST
27ಎಚ್‌ಪಿಟಿ8- ಹೊಸಪೇಟೆಯಲ್ಲಿ ಮಂಗಳವಾರ ಸರ್ಕಾರಿ ಶಾಲೆಗಳ ಮುಚ್ಚುವ ನಿರ್ಧಾರ ಕೈಬಿಡಲು ಒತ್ತಾಯಿಸಿ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ವತಿಯಿಂದ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು. | Kannada Prabha

ಸಾರಾಂಶ

ರಾಜ್ಯದಲ್ಲಿ 6200ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವ ಸರ್ಕಾರದ ನಿರ್ಧಾರ ಕೈ ಬಿಡಲು ಒತ್ತಾಯಿಸಿ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ವತಿಯಿಂದ 50 ಲಕ್ಷ ಸಹಿ ಸಂಗ್ರಹ ಅಭಿಯಾನ ಆರಂಭಿಸಲಾಗಿದೆ.

ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯಿಂದ ಸಹಿ ಸಂಗ್ರಹ ಅಭಿಯಾನ

ಕನ್ನಡಪ್ರಭ ವಾರ್ತೆ ಹೊಸಪೇಟೆ

ರಾಜ್ಯದಲ್ಲಿ 6200ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವ ಸರ್ಕಾರದ ನಿರ್ಧಾರ ಕೈ ಬಿಡಲು ಒತ್ತಾಯಿಸಿ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ವತಿಯಿಂದ 50 ಲಕ್ಷ ಸಹಿ ಸಂಗ್ರಹ ಅಭಿಯಾನ ಆರಂಭಿಸಲಾಗಿದೆ. ನಗರದ ಬಸ್ ನಿಲ್ದಾಣ ಮತ್ತು ತರಕಾರಿ ಮಾರುಕಟ್ಟೆಯಲ್ಲಿ ಸಾರ್ವಜನಿಕರಿಂದ ಮಂಗಳವಾರ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು. ಎಐಡಿಎಸ್‌ಓ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ರವಿಕಿರಣ್ ಜೆ.ಪಿ. ಮಾತನಾಡಿ, ರಾಜ್ಯದಲ್ಲಿ ಒಟ್ಟು 46, 755 ಸರ್ಕಾರಿ ಶಾಲೆಗಳಿವೆ. ಅದರಲ್ಲಿ 21,255 ಶಾಲೆಗಳ ಕಟ್ಟಡಗಳು ಶಿಥಿಲಗೊಂಡು ಅಪಾಯದಲ್ಲಿವೆ. ಇದರಲ್ಲಿ ವಿಜಯನಗರ ಜಿಲ್ಲೆಯ 208 ಶಾಲೆಗಳು ಇದೆ. ಹಲವು ವರ್ಷಗಳಿಂದ ದುರಸ್ತಿ ಕಾಣದ ಶಾಲೆಗಳ ಚಾವಣಿ ಕುಸಿದು ಮಕ್ಕಳು ಗಾಯಗೊಳ್ಳುತ್ತಿದ್ದಾರೆ. ಪಕ್ಕದ ಬಳ್ಳಾರಿ ಜಿಲ್ಲೆಯ ಶಂಕರ ಬಂಡೆ ಗ್ರಾಮದ ಓರ್ವ ಎಂಟನೇ ತರಗತಿ ವಿದ್ಯಾರ್ಥಿನಿ, ಶಾಲೆಯ ಚಾವಣಿ ಕುಸಿದು ಗಾಯಗೊಂಡು ನಂತರ ಸಾವಿಗೀಡಾಗಿದ್ದು ಅತ್ಯಂತ ನೋವಿನ ಘಟನೆಯಲ್ಲೊಂದಾಗಿದೆ. ಈ ಘಟನೆ ರಾಜ್ಯದಲ್ಲಿನ ಶಾಲೆಗಳ ಶೋಚನೀಯ ಪರಿಸ್ಥಿತಿಗೆ ಕನ್ನಡಿ ಹಿಡಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆಗಳು ಬಡಮಕ್ಕಳ ಶಿಕ್ಷಣದ ಆಶಾಕಿರಣವಾಗಿವೆ. ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯದ ಅಡಿಪಾಯವಾಗಿವೆ. ಈ ಶಾಲೆಗಳಿಗೆ ಶಿಕ್ಷಣದ ಕನಸು ಹೊತ್ತು ಬರುವವರು ಬಹುತೇಕ ಬಡವರ, ರೈತ, ಕಾರ್ಮಿಕರ ಮಕ್ಕಳಾಗಿದ್ದಾರೆ. ಅಂತಹ ಸರ್ಕಾರಿ ಶಾಲೆಗಳ ಇಂದಿನ ಪರಿಸ್ಥಿತಿ ಬಹಳ ಶೋಚನೀಯ ಹಾಗೂ ಚಿಂತಾಜನಕವಾಗಿದೆ. ಸರ್ಕಾರಗಳು ಮೂಲಭೂತ ಸೌಕರ್ಯಗಳನ್ನು ಒದಗಿಸದೆ, ಕಟ್ಟಡಗಳನ್ನು ದುರಸ್ತಿ ಮಾಡದೆ, ಶಿಕ್ಷಕರ ನೇಮಕಾತಿ ಮಾಡದೆ, ದಾಖಲಾತಿ ಕಡಿಮೆ ಎಂಬ ನೆಪವೊಡ್ಡಿ 6,200 ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು ಸರಿಯಲ್ಲ ಎಂದರು.

ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಸಚಿವರು, ಪೋಷಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿಲ್ಲ ಎಂಬ ಮಾತನ್ನು ಹೇಳಿ, ಖಾಸಗಿ ಶಾಲೆಗಳಿಗೆ ಪರವಾನಗಿ ಕೊಟ್ಟು, ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡುವ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದು ಖಂಡನೀಯ ಎಂದರು.

ಮೇ 29ರಂದು ಶಾಲೆಗಳು ಶುರುವಾಗಲಿದೆ. ಈ ಬಾರಿ ಹೆಚ್ಚು ಮಳೆ ಆಗುತ್ತಿರುವ ಹಿನ್ನೆಲೆ ಸರ್ಕಾರ ಹಾಗೂ ಶಿಕ್ಷಣ ಸಚಿವರು ಈ ಕೂಡಲೇ ಕಾರ್ಯ ಪ್ರವೃತ್ತರಾಗಿ ಶಿಥಿಲಗೂಂಡಿರುವ ಸರ್ಕಾರಿ ಶಾಲೆಗಳ ಕಟ್ಟಡಗಳನ್ನು ತ್ವರಿತವಾಗಿ ದುರಸ್ತಿ ಮಾಡಿಸಬೇಕು ಮತ್ತು ಅಗತ್ಯ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ರಾಜ್ಯ ಸಮಿತಿ ಸದಸ್ಯೆ ಉಮಾ ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

PREV

Recommended Stories

ಡಾ.ಪ್ರಭಾಕರ್‌ ಕೋರೆ 78ನೇ ಜನ್ಮದಿನ ಅರ್ಥಪೂರ್ಣ ಆಚರಣೆ
ರಾಜಕೀಯ ದುರುದ್ದೇಶಕ್ಕೆ ದೇವಾಲಯಗಳ ಬಳಕೆ ಸಲ್ಲದು