ಹಾವೇರಿ: ಜಿಲ್ಲೆಯಲ್ಲಿ ಮೂರು ಸಕ್ಕರೆ ಕಾರ್ಖಾನೆಗಳಿದ್ದು, ಕಾರ್ಖಾನೆಯ ಮಾಲೀಕರು ಕಬ್ಬಿನ ದರವನ್ನು ನಿಗದಿ ಮಾಡದೇ ಕಾರ್ಖಾನೆ ಪ್ರಾರಂಭ ಮಾಡುವ ಹುನ್ನಾರ ನಡೆಸಿದ್ದಾರೆ. ದರ ನಿಗದಿಪಡಿಸಿಯೇ ಕಬ್ಬು ಅರೆಯುವ ಕಾರ್ಯ ಆರಂಭಿಸಬೇಕು ಎಂದು ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಈಗಾಗಲೇ ಕೆಲವು ಕಾರ್ಖಾಯನೆಯವರು ಕಬ್ಬು ಕಟಾವು ಮಾಡಿಸಿದ್ದಾರೆ. ಬೇಗ ಕಾರ್ಖಾನೆ ಆರಂಭಿಸುವುದಕ್ಕೆ ನಮ್ಮ ತಕರಾರಿಲ್ಲ. ಆದರೆ, ಸಂಗೂರು ಜಿ.ಎಂ. ಶುಗರ್ಸ್‌ನವರು ರೈತರಿಗೆ ಹಿಂದಿನ ವರ್ಷದ ಬಾಕಿ ₹80 ಲಕ್ಷ ನೀಡುವುದು ಬಾಕಿಯಿದೆ. ಆ ಹಣವನ್ನು ರೈತರಿಗೆ ಮೊದಲು ಕೊಟ್ಟು ಆನಂತರ ಕಾರ್ಖಾನೆ ಪ್ರಾರಂಭ ಮಾಡಬೇಕು. ಈ ವರ್ಷ ಕಬ್ಬಿನ ಇಳುವರಿ ಕಡಿಮೆ ಇದೆ. ಕಾರ್ಖಾನೆಗಳಿಗೆ ಬೇಕಾಗುವಷ್ಟು ಕಬ್ಬು ಸಹ ನಮ್ಮ ಜಿಲ್ಲೆಯಲ್ಲಿ ಇಲ್ಲ. ಈಗಾಗಲೇ ಉತ್ತರ ಕರ್ನಾಟಕದ ಕಾರ್ಖಾನೆಗಳು ಹೆಚ್ಚಿಗೆ ದರವನ್ನು ಕೊಟ್ಟು ಕಟಾವು ಹಾಗೂ ಸಾಗಾಣಿಕೆ ವೆಚ್ಚವನ್ನು ಅವರೇ ಭರಿಸಿ ಕಬ್ಬನ್ನು ಒಯ್ಯಲು ಮುಂದಾಗಿವೆ. ಆದ ಕಾರಣ ಬೇಗನೆ ದರ ನಿಗದಿ ಮಾಡಬೇಕು. ಮಾಡುವ ತನಕ ಜಿಲ್ಲೆಯ ರೈತ ಬಾಂಧವರು ಕಬ್ಬನ್ನು ಕಡಿಸಬಾರದೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಮನವಿ ಮಾಡಿದರು.ಕಬ್ಬಿನ ದರ ನಿಗದಿ ಮಾಡುವ ತನಕ ಹಳೆಯ ಬಾಕಿ ಕೊಡುವ ತನಕ ಕಬ್ಬು ಕಟಾವು ಮಾಡಬಾರದು. ಕಾರ್ಖಾನೆಯವರನ್ನು ಕರೆಸಿ ಜಿಲ್ಲಾಡಳಿತ ಸಭೆ ನಡೆಸಬೇಕು. ರೈತರಿಗೆ ಬರಬೇಕಾದ ಹಳೆ ಬಾಕಿಯನ್ನು ಕಾರ್ಖಾನೆ ಗುತ್ತಿಗೆದಾರರಿಂದ ಕೊಡಿಸಬೇಕು ಎಂದು ಮನವಿ ಮಾಡಿದರು. ಅಪರ ಜಿಲ್ಲಾಧಿಕಾರಿ ನಾಗರಾಜ್ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಯಿತು.
ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ, ಮುಖಂಡರಾದ ಈರಣ್ಣ ಮಾಕನೂರ, ನಿಂಗನಗೌಡ ಗೌಡಗೇರಿ, ರಾಜಶೇಖರ ಹಲಸೂರು, ನಿಂಗಪ್ಪ ಕಡೆಮನಿ, ಶಶಿಧರ ಶಿಗೀಹಳ್ಳಿ ಇತರರು ಇದ್ದರು.