ಭೂ ಒಡೆತನ ಯೋಜನೆಯ ಆಯ್ಕೆ ಸಮಿತಿ ರಚನೆ ಮಾಡಲು ಆಗ್ರಹ

KannadaprabhaNewsNetwork | Published : Jun 10, 2024 12:47 AM

ಸಾರಾಂಶ

ಡಾ. ಬಿ.ಆರ್‌. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿಯ ಭೂ ಒಡೆತನ ಯೋಜನೆಯ ಆಯ್ಕೆ ಸಮಿತಿ ರಚನೆ ಮಾಡುವಂತೆ ಒತ್ತಾಯಿಸಿ ರಾಜ್ಯ ಚಲವಾದಿ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಗದಗ

ಡಾ. ಬಿ.ಆರ್‌. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿಯ ಭೂ ಒಡೆತನ ಯೋಜನೆಯ ಆಯ್ಕೆ ಸಮಿತಿ ರಚನೆ ಮಾಡುವಂತೆ ಒತ್ತಾಯಿಸಿ ರಾಜ್ಯ ಚಲವಾದಿ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಡಾ. ಬಿ.ಆರ್. ಅಂಬೇಡ್ಕರ್‌ ಅಭಿವೃದ್ಧಿ ನಿಗಮದಲ್ಲಿ ಪ.ಜಾತಿ, ಪಪಂ ಜನರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಈ ಯೋಜನೆಗಳಲ್ಲಿ ಭೂ ರಹಿತ ಕೃಷಿ ಕೂಲಿ ಕಾರ್ಮಿಕರಿಗಾಗಿ ಭೂ ಒಡೆತನ ವಿಶಿಷ್ಟ ಯೋಜನೆಯೊಂದು ಚಾಲ್ತಿಯಲ್ಲಿದೆ. ಈ ಯೋಜನೆಯ ಉದ್ದೇಶ ಮತ್ತು ಗುರಿ ಉತ್ತಮವಾಗಿದೆ. ಆದರೆ, ಈ ನಿಗಮಗಳಿಗೆ ಬರುವ ವ್ಯವಸ್ಥಿತ ನಿರ್ದೇಶಕರು ಅಷ್ಟೊಂದು ಕಾಳಜಿ ತೋರುತ್ತಿಲ್ಲ. ಯೋಜನೆಯ ಬಗ್ಗೆ ಅವರಿಗೆ ತಾತ್ಸಾರ ಮನೋಭಾವವಿದೆ ಎಂಬುದು ಪ್ರತಿಯೊಂದು ಜಿಲ್ಲೆಯಲ್ಲಿ ಎದ್ದು ಕಾಣುತ್ತಿದೆ. ಈ ರೀತಿಯ ಜಾತಿವಾದಿ ಅಧಿಕಾರಿಗಳು ಮತ್ತು ಪಟ್ಟಭದ್ರ ಹಿತಾಸಕ್ತಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಅಗತ್ಯವಿದೆ.

ಗದಗ ಜಿಲ್ಲೆಯಲ್ಲಿ ಈ ಯೋಜನೆಯ ಫಲಾನುಭವಿಗಳನ್ನು ಕಳೆದ ಎರಡು ವರ್ಷಗಳಿಂದ ಆಯ್ಕೆ ಸಮಿತಿ ರಚಿಸಿದೆ. ಆದರೆ, ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ ರೈತರಿಗೆ ಮತ್ತು ಕೃಷಿಕೂಲಿ ಕಾರ್ಮಿಕರಿಗೆ ಮೋಸ ಮಾಡುತ್ತಿದ್ದಾರೆ. ಈ ರೀತಿಯ ಅಧಿಕಾರಿಗಳ ನಡೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಆದಷ್ಟು ಬೇಗನೇ ಫಲಾನುಭವಿಗಳ ಆಯ್ಕೆ ಸಮಿತಿ ರಚಿಸಿ ಪಟ್ಟಿ ಸಿದ್ಧಪಡಿಸಿ ಸರ್ಕಾರಕ್ಕೆ ಮತ್ತು ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಕಳುಹಿಸಬೇಕು ಎಂದು ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಡಿ.ಎಸ್.ಎಸ್. ಸಂಚಾಲಕ ಪ್ರಕಾಶ ಕಲ್ಲೂರ, ರಾಜ್ಯ ಚಲವಾದಿ ಮಹಾಸಭಾದ ಅಧ್ಯಕ್ಷ ಎಲ್. ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಈರಣ್ಣವರ, ಬಸವರಾಜ ಗಂಡಗೋಳಿ, ಮಂಜುನಾಥ ಚಲವಾದಿ ಇದ್ದರು.

Share this article