ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ಅರ್ಧಕ್ಕೆ ನಿಂತಿರುವ ದೇಗಾಂವ, ಹೊಸೂರ, ಶಿರಗಾಪುರ ಗ್ರಾಮಗಳ ರಸ್ತೆ ಕಾಮಗಾರಿಯನ್ನು ಶೀಘ್ರ ಪೂರ್ಣ ಗೊಳಿಸುವುದರ ಜತೆಗೆ ತೆಗ್ಗು, ಗುಂಡಿಗಳಿಂದ ಧೂಳಿನಿಂದ ಮುಕ್ತಿ ನೀಡುವಂತೆ ಆಗ್ರಹಿಸಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಯ ಮುಂದೆ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.2021 ಮತ್ತು 22ನೇ ಸಾಲಿನಲ್ಲಿ ₹3 ಕೋಟಿ ವೆಚ್ಚದ ಗ್ರಾಮದ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿತ್ತು. ಗುತ್ತಿಗೆದಾರರು ಕೆಲಸ ಪ್ರಾರಂಭಿಸಿ ಅರ್ಧಕ್ಕೆ ಕಾಮಗಾರಿಯನ್ನು ಬಿಟ್ಟಿದ್ದಾರೆ. ರಸ್ತೆಯಲ್ಲಿ ತೆಗ್ಗು ಗುಂಡಿಗಳು ಬಿದ್ದು ಸಾರ್ವಜನಿಕರು, ವಿದ್ಯಾರ್ಥಿಗಳು, ಪ್ರತಿದಿನ ನರಕಯಾತನೆ ಅನುಭವಿಸುತ್ತಿದ್ದಾರೆ.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ನಿರ್ಲಕ್ಷ್ಯ ವಹಿಸಲಾಗಿದೆ. ರಸ್ತೆ ಕಾಮಗಾರಿಗೆ ತಂದಿದ್ದ ಎಲ್ಲ ವಸ್ತುಗಳನ್ನು ಗುತ್ತಿಗೆದಾರರು ವಾಪಸ್ ತೆಗೆದುಕೊಂಡು ಹೋಗಿದ್ದಾರೆ. ಕಾಮಗಾರಿ ಪೂರ್ಣಗೊಳ್ಳಲು ಇನ್ನು ಎಷ್ಟು ವರ್ಷ ಬೇಕು. ರಸ್ತೆಯೂ ಸಂಪೂರ್ಣ ಹಾಳಾಗಿದೆ. ವಾಹನಗಳ ಸವಾರರು ಗ್ರಾಮದೊಳಗೆ ಬರಲು ಹಿಂಜರೆಯುತ್ತಿದ್ದಾರೆ. ಈ ಕೂಡಲೇ ಕಾಮಗಾರಿ ಪೂರ್ಣಗೊಳಿಸದಿದ್ದರೇ ರಸ್ತೆ ತಡೆ ನಡೆಸಿ ಪ್ರತಿಭಟಿಸಿ ಬೆಳಗಾವಿ ಲೋಕೋಪಯೋಗಿ ಮುಖ್ಯ ಕಚೇರಿಯ ಮುಂದೆ ಧರಣಿ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸಂಜೀವ ಮಿರಜಕರ ಮಾತನಾಡಿ, ರಸ್ತೆಯ ಕುರಿತು ಗ್ರಾಮಸ್ಥರು ಹಲವಾರು ಬಾರಿ ಗಮನಕ್ಕೆ ತಂದಿದ್ದಾರೆ. ಗುತ್ತಿಗೆದಾರರಿಗೆ ಅನೇಕ ಸಲ ಕಾಮಗಾರಿ ಆರಂಭಿಸುವಂತೆ ಹೇಳಿದರೂ ಕಾಮಗಾರಿ ಆರಂಭಿಸಿಲ್ಲ. ಗುತ್ತಿಗೆದಾರರಿಗೆ ನೋಟಿಸ್ ಸಹ ನೀಡಲಾಗಿದೆ. ಬೆಳಗಾವಿ ಲೋಕೋಪಯೋಗಿ ಇಲಾಖೆ ಕಾರ್ಯಪಾಲ ಅಭಿಯಂತರರನ್ನು ನಾನೇ ಕರೆಸುತ್ತೇನೆ. ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಅವರ ಮುಂದೆ ಹೇಳಿರಿ ಎಂದ ಅವರು ಇನ್ನೂ 8 ದಿವಸಗಳಲ್ಲಿ ಕಾಮಗಾರಿಯನ್ನು ಆರಂಭಿಸುವ ಭರವಸೆಯನ್ನು ಗ್ರಾಮಸ್ಥರಿಗೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.
ರಮೇಶ ಉಗರಖೋಡ, ಪರಶುರಾಮ ಬೇಕವಾಡಕರ, ಮಹಾಂತೇಶ ದುಗ್ಗಾಣಿ, ಬಸಯ್ಯ ಮುಪ್ಪಿನಮಠ, ಈರಣ್ಣ ಮಾರಿಹಾಳ, ಶಂಕರ ಗಳಗಿ, ಕಲ್ಲಪ್ಪ ಕಾದ್ರೋಳ್ಳಿ, ಪ್ರಕಾಶ ಕಡತನಾಳ, ರುದ್ರಪ್ಪ ಬೇಡಿಗೇರಿ, ಪಾರಿಶ್ ದೇಗುಲಹಳ್ಳಿ, ಈರಣಗೌಡ ಪಾಟೀಲ, ರುದ್ರಪ್ಪ ಬಿದರಿ ಸೇರಿದಂತೆ ಹಲವು ಗ್ರಾಮಸ್ಥರು ಇದ್ದರು.