ಕನ್ನಡಪ್ರಭ ವಾರ್ತೆ ಕಲಬುರಗಿ/ ಆಳಂದ
ಬೀದರ್ ಲೋಕಸಭೆ ಬಿಜೆಪಿ ಟಿಕೆಟ್ ಈ ಬಾರಿ ಆಳಂದದ ಪಡಸಾವಳಿ-ಡೋಣಗಾಂವ ಶಿವಲಿಂಗೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಡಾ. ಶಂಭುಲಿಂಗ ಶಿವಾಚಾರ್ಯರಿಗೆ ಕೊಡಬೇಕೆಂಬ ಜನಾಗ್ರಹ ಹೆಚ್ಚುತ್ತಿದೆ.ಗುರುವಾರ ಪಡಸಾವಳಗಿಯಲ್ಲಿ ನಡೆದ ಪಡಸಾವಳಿ, ಸಾವಳೇಶ್ವರ ಸಕ್ಕರಗಾ, ಮಟಕಿ, ಚಿಂಚೋಳಿ ಸೇರಿದಂತೆ ಹತ್ತಾರು ಹಳ್ಳಿಗಳ ಸಾರ್ವಜನಿಕರು, ಮುಖಂಡರ ಬಹಿರಂಗ ಸಭೆಯಲ್ಲಿ ಈ ವಿಚಾರ ಮತ್ತೆ ಹೆಚ್ಚಿನ ರೀತಿಯಲ್ಲಿ ಚರ್ಚೆಗೆ ಬಂದಿದೆ.
ಆಳಂದ ಅಸೆಂಬ್ಲಿ ಮತಕ್ಷೇತ್ರ ಬೀದರ್ ಲೋಕಸಭೆಯಡಿ ಬರಲಿದೆ. ಆಳಂದದಿಂದ ಬಿಜೆಪಿಯವರು ಇಂದಿಗೂ ಟಿಕೆಟ್ ನೀಡಿಲ್ಲ. ಪಡಸಾವಳಿ ಶ್ರೀಗಳು ಜನಸೇವೆಗೆ ಉತ್ಸುಕರಾಗಿದ್ದಾರೆಂದು, ಬಿಜೆಪಿ ವರಿಷ್ಠರು ನಮ್ಮ ಆಗ್ರಹ ಮನ್ನಿಸಬೇಕೆಂದು ಸಭೆಯಲ್ಲಿ ಮಠದ ಭಕ್ತರು, ಪಕ್ಷದ ಮುಖಂಡರು ಆಗ್ರಹಿಸಿದ್ದಾರೆ.ಬೀದರ್ ಕ್ಷೇತ್ರಕ್ಕೆ ಒಳಪಡುವ ಆಳಂದವು ಕಳೆದ ಕೆಲವು ವರ್ಷಗಳಿಂದ ಶೈಕ್ಷಣಿಕ, ಅಭಿವೃದ್ಧಿ, ಕೈಗಾರಿಕೆ, ಕೌಶಲ್ಯ, ರಸ್ತೆ ಸಂಪರ್ಕ, ಕುಡಿವ ನೀರು ಸೇರಿ ಇನ್ನಿತರ ಯೋಜನೆಗಳು ಹಿಂದೆ ಬಿದ್ದಿವೆ. ಅಲ್ಲದೇ ಪ್ರತಿ ಸಲವೂ ಆಳಂದ ಮತಕ್ಷೇತ್ರವೂ 30-40 ಸಾವಿರ ಬಿಜೆಪಿ ಅಭ್ಯರ್ಥಿಗೆ ಮುನ್ನಡೆ ಕೊಡುತ್ತಾ ಬಂದರೂ ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚು ಅಭಿವೃದ್ಧಿಯಲ್ಲಿ ಕುಂಠಿತಗೊಂಡಿದೆ. ಬೀದರ್ ಜಿಲ್ಲೆ ಗಡಿ ಭಾಗವಾದರೂ ಆಳಂದ ಕ್ಷೇತ್ರವೂ ಸಹ ಗಡಿ ಭಾಗವಾಗಿದೆ, ಪ್ರಗತಿಯತ್ತ ಮುಂದುವರೆಯಬೇಕಾದರೆ ಒಬ್ಬ ನಿಷ್ಠಾವಂತ ಅಭ್ಯರ್ಥಿ ಹಾಗೂ ಇಲ್ಲಿಯ ಅಭ್ಯರ್ಥಿಗೆ ಚುನಾವಣೆ ಸ್ಪರ್ಧಿಸಿದರೆ ಗಡಿಭಾಗ ಕೆಲಸಗಳು ಆಗುತ್ತವೆಂಬ ಅಭಿಮತವೂ ಸಭೆಯಲ್ಲಿ ಮೂಡಿಬಂತು.
ಸಮಾಜದ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸಲು, ಯಾವುದೇ ಆಸೆ ಇಲ್ಲದ ಭಕ್ತರ ಏಳಿಗೆಗಾಗಿ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗುವ ಪಡಸಾವಳಿ-ಡೋಣಗಾಂವ ಮಠದ ಡಾ.ಶಂಭುಲಿಂಗ ಶಿವಾಚಾರ್ಯರು ಶ್ರೀಗಳಿಗೆ ಇಲ್ಲಿಯ ಜನ ಪ್ರತಿನಿಧಿಗಳು ಪಕ್ಷಾತೀತವಾಗಿ ಬೆಂಬಲ ಸೂಚಿಸುತ್ತಿದ್ದಾರೆ ಹಾಗೂ ತಾಲೂಕಿನ ಮಠಾಧೀಶರ ಒಕ್ಕೂಟವು ಸಹ ಶ್ರೀಗಳ ಬೆಂಬಲ ನಿಂತಿದ್ದು, ಭಕ್ತವೃಂದವೂ ಸಹ ಪಕ್ಷ ಎನ್ನದೇ ಇವರಿಗೆ ಬಾಹ್ಯ ಬೆಂಬಲ, ತನು, ಮನ, ಧನದಿಂದ ಬೆಂಬಲಕ್ಕೂ ಸಿದ್ದವೆಂಬ ಮಾತುಗಳು ಕೇಳಿ ಬಂದಿವೆ.ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಮಂತ್ರಿ ಅಮಿತ್ ಶಾ ಅವರನ್ನು ಸಾವಿರಾರು ಭಕ್ತ ಸಮೂಹದೊಂದಿಗೆ ಭೇಟಿ ನೀಡಿ ಈ ಸಲ ಶ್ರೀಗಳಿಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡುತ್ತೇವೆ ಎಂದು ಸಭೆಯಲ್ಲೇ ಸಾವಳೇಶ್ವರದ ರೇವಣಸಿದ್ಧ ಸ್ವಾಮಿ, ಬಸವಂತರಾವ ಶೇರಿಕರ, ಶಿವಾನಂದ ತೀರ್ಥೇ, ಯಶ್ವಂತ ಪೂಜಾರಿ, ಮಹೇಶ ಮುನ್ನಹಳ್ಳಿ ಹೇಳಿದರು.
ಕೇಂದ್ರ ಸಚಿವರಾಗಿರುವ ಭಗವಂತ ಖೂಬಾ ಅವರಿಗೆ 2014, 2019ರ ಚುನಾವಣೆಯಲ್ಲಿ ಆಳಂದ ಕ್ಷೇತ್ರವೂ ಹೆಚ್ಚು ಮತ ಕೊಡುತ್ತಾ ಬಂದಿದೆ. ಹಾಗಾದರೆ ಗಡಿ ಭಾಗ ಕ್ಷೇತ್ರ ಹೊಂದಿಕೊಂಡಿದೆ ಕಡಗಣನೆಯೇ, 9 ವರ್ಷದ ಅವಧಿಯಲ್ಲಿ ಈ ಕ್ಷೇತ್ರಕ್ಕೆ ಅನುದಾನ ಎಷ್ಟು ಎಂಬ ಪ್ರಶ್ನೆಯೂ ಸಭೆಯಲ್ಲಿ ಕೇಳಿ ಬಂತು. ಸನಾತನ ಹಿಂದು ಧರ್ಮದ ಉಳಿವಿಗಾಗಿ ಶ್ರೀಗಳಿಗೆ ಟಿಕೆಟ್ ಕೊಡಿ, ಕರ್ನಾಟಕದಿಂದ ಲೋಕಸಭೆಗೆ ಒಬ್ಬ ಸ್ವಾಮೀಜಿಗೆ ಕಳುಹಿಸಿ ಮಾದರಿಯಾಗಲಿ ಎಂದು ಯಶ್ವಂತ ಪೂಜಾರಿ, ಸಾವಳೇಶ್ವರ ಆಗ್ರಹಿಸಿದರು.ಶ್ರೀಗಳಿಗೆ ಟಿಕೆಟ ಕೊಟ್ಟು ಉತ್ತರ ಪ್ರದೇಶ ಯೋಗಿಯಂತೆ, ಕರ್ನಾಟಕದ ಯೋಗಿಗೆ ಲೋಕಸಭೆ ಟಿಕೆಟ್ ನೀಡಿ, ಈ ಕ್ಷೇತ್ರವೂ ಪ್ರಗತಿಯತ್ತ ಕಾಣಲು ಇವರೇ ಸರಿಯಾದ ಆಯ್ಕೆ ಎಂದೂ ಬಸವಂತರಾಯ ಶೇರಿಕರ, ಪಡಸಾವಳಿ ಗ್ರಾಮಸ್ಥರು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಪಡಸಾವಳಿ , ಸಾವಳೇಶ್ವರ, ಸಕ್ಕರಗಾ, ಮಟಕಿ, ಚಿಂಚೋಳಿ (ಕೆ), ನಿರಗುಡಿ, ಚಿಂಚೋಳಿ (ಬಿ) ಗಳ ಭಕ್ತರಾದ ಸೋಮನಾಥ ಪಾಟೀಲ್, ಗಣಪತಿ ಕುಂಬಾರ, ಶಿವಾನಂದ ತೀರ್ಥೆ, ಪ್ರಕಾಶ ಮುನ್ನಹಳ್ಳಿ, ಶಾಂತಮಲ್ಲಪ್ಪ ಅಚಲೇರಿ, ಶಿವಶರಣಪ್ಪ ಪಾಟೀಲ್, ಸಂತೋಷ ಮರಬೇ, ವಿರುಪಾಕ್ಷಪ್ಪ ಪಾಟೀಲ್, ಮಲ್ಲಿನಾಥ ಮುಲಗೆ, ಸತ್ತೆಶ್ವರ ಖಜೂರಿ, ರೇವಣಸಿದ್ಧಯ್ಯ ಸ್ವಾಮಿ, ಕುಪೇಂದ್ರ ಪಾಟೀಲ್, ಮಹಾದೇವ ಪೂಜಾರಿ, ಶರಣಬಸಪ್ಪ ಬಿರಾದಾರ, ಶರಣಬಸಪ್ಪ ಬಿರಾಜದಾರ, ರಾಜಕುಮಾರ ದೇಶಮುಖ, ಗುಂಡಪ್ಪ ಅಣ್ಣೂರೆ ಸೇರಿದಂತೆ 500ಕ್ಕೂ ಭಕ್ತಾಧಿಗಳು ಪಾಲ್ಗೊಂಡಿದ್ದರು.