ಕನ್ನಡಪ್ರಭ ವಾರ್ತೆ ಕಾಪು
ಬುಧವಾರ ಇಲ್ಲಿನ ಶಿರ್ವ ಸಾರ್ವಜನಿಕ ಶ್ರೀ ಗಣೇಶೋತ್ಸವ ವೇದಿಕೆ ಬಳಿಯ ಮಹಿಳಾ ಸೌಧದಲ್ಲಿ ಶಿರ್ವ ಗ್ರಾಪಂ ೨೦೨೪ - ೨೫ನೇ ಸಾಲಿನ ದ್ವಿತೀಯ ಗ್ರಾಮ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು
ಜಿಲ್ಲೆಯಲ್ಲಿ ೨೫ ಸೆಂಟ್ಸ್ ಜಮೀನಿನವರೆಗೆ ನೊಂದಾಯಿತ ಖಾಸಗಿ ವಾಸ್ತುಶಿಲ್ಪಿಯವರು ಮಾಡಿದ ಏಕ ನಿವೇಶನ (ಸಿಂಗಲ್ ಲೇಔಟ್) ನಕ್ಷೆಗೆ ಅನುಮೋದನೆ ನೀಡುವ ಅಧಿಕಾರ ಗ್ರಾ.ಪಂ.ಗೆ ಇವತ್ತು. ಈಗ ಅದನ್ನು ಯೋಜನಾ ಪ್ರಾಧಿಕಾರಕ್ಕೆ ನೀಡಲಾಗಿದೆ. ಆದರೆ ಪ್ರಾಧಿಕಾರದಲ್ಲಿ ಸೂಕ್ತ ವ್ಯವಸ್ಥೆ ಇಲ್ಲದೆ ಅನುಮೋದನೆ ಪ್ರಕ್ರಿಯೆ ತೀರಾ ವಿಳಂಬವಾಗುತ್ತಿದ್ದು, ಸಾವಿರಾರು ಗ್ರಾಮಸ್ಥರಿಗೆ ಸಮಸ್ಯೆಯಾಗಿದೆ. ಆದ್ದರಿಂದ ಹಿಂದಿನಂತೆ ಸಿಂಗಲ್ ಲೇಔಟ್ ನಕ್ಷೆಗೆ ಅನುಮೋದನೆ ನೀಡುವ ಅಧಿಕಾರವನ್ನು ಪಂಚಾಯಿತಿಗೆ ನೀಡಬೇಕು ಎಂದು ಗ್ರಾಮಸ್ಥರ ಮತ್ತು ಜನಪ್ರತಿನಿಧಿಗಳ ಸರ್ವಾನುಮತದ ನಿರ್ಣಯ ಮಂಡಿಸಲಾಯಿತು.ಗ್ರಾ.ಪಂ. ಅಧ್ಯಕ್ಷೆ ಸವಿತಾ ರಾಜೇಶ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನೋಡಲ್ ಅಧಿಕಾರಿಯಾಗಿ ಶಿರ್ವ ಪಶುವೈದ್ಯಾಧಿಕಾರಿ ಡಾ.ಅರುಣ್ ಕುಮಾರ್ ಹೆಗ್ಡೆ ಮಾತನಾಡಿ ಸಭೆಯಲ್ಲಿ ಗ್ರಾಮಸ್ಥರ ಹಾಜರಾತಿ ಕಡಿಮೆ ಇರುವುದನ್ನು ಗಮನ ಸಳೆದರು. ಪಂಚಾಯತ್ ಕಾರ್ಯದರ್ಶಿ ಚಂದ್ರಮಣಿ ವಾರ್ಷಿಕ ವರದಿ ಮಂಡಿಸಿದರು. ಗ್ರಂಥಪಾಲಕಿ ಅಮ್ಮಿ ವಾರ್ಡ್ ಸಭೆಯ ವರದಿ ಮಂಡಿಸಿದರು.
ಗ್ರಾಮಸಭೆಯಲ್ಲಿ ಕಿಂಡಿ ಆಣೆಕಟ್ಟು ದುರಸ್ತಿ, ಕೃಷಿಗೆ ಮಂಗಗಳ ಹಾವಳಿ, ಕಸದ ಸಮಸ್ಯೆ, ಪಂಜಿಮಾರು ಭಾಗದಲ್ಲಿ ನೇತಾಡುವ ಹಳೆಯ ವಿದ್ಯುತ್ ತಂತಿಗಳ ಸಮಸ್ಯೆ ಬಗ್ಗೆ ದಿನೇಶ್ ಸುವರ್ಣ, ರಮೇಶ್ ಬಂಗೇರಾ, ಲೂಕಸ್ ಡಿಸೋಜಾ, ಶೈಲೇಶ್, ರಿಚರ್ಡ್ ಫೆರಾವೋ ಸಭೆಯ ಗಮನ ಸೆಳೆದರು.