ದೇವದಾಸಿ ಮಹಿಳೆಯರ ಮನೆಗಳಿಗೆ ತೆರಳಿ ಮರುಗಣತಿ ನಡೆಸಲು ಆಗ್ರಹ

KannadaprabhaNewsNetwork |  
Published : Jan 07, 2025, 12:30 AM IST
ಸ | Kannada Prabha

ಸಾರಾಂಶ

ದೇವದಾಸಿ ಮಹಿಳೆಯರ ಮರುಗಣತಿಗೆ ಕ್ರಮವಹಿಸಿರುವುದನ್ನು ಸಂಘವು ಸ್ವಾಗತಿಸುತ್ತದೆ.

ಸಂಡೂರು: ದೇವದಾಸಿ ಮಹಿಳೆಯರ ಮನೆಗಳಿಗೆ ತೆರಳಿ ಮರುಗಣತಿಯನ್ನು ನಡೆಸಲು ಕೋರಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ತಾಲೂಕು ಸಮಿತಿ ಸದಸ್ಯರು ಸೋಮವಾರ ತಹಶೀಲ್ದಾರ್ ಜಿ. ಅನಿಲ್‌ಕುಮಾರ್ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.ಮನವಿ ಪತ್ರ ಸಲ್ಲಿಸಿ ಮಾತನಾಡಿದ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎ. ಸ್ವಾಮಿ, ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ನಿರಂತರ ಒತ್ತಾಯದ ಮೇರೆಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿ ದೇವದಾಸಿ ಮಹಿಳೆಯರ ಮರುಗಣತಿಗೆ ಕ್ರಮವಹಿಸಿರುವುದನ್ನು ಸಂಘವು ಸ್ವಾಗತಿಸುತ್ತದೆ. ಆದರೆ, ಇದನ್ನು ಗ್ರಾಮ ಪಂಚಾಯ್ತಿ ಅಥವ ತಾಲೂಕು ಮಟ್ಟದಲ್ಲಿ ನಡೆಸುವುದು ಸಾಧುವಲ್ಲ. ಹಾಗೆ ಮಾಡುವುದು ತೀವ್ರ ಭ್ರಷ್ಟಾಚಾರಕ್ಕೆ ಕಾರಣವಾಗಲಿದೆಯಲ್ಲದೆ, ದೇವದಾಸಿ ಮಹಿಳೆಯರಲ್ಲದ ಬೇರೆ ವ್ಯಕ್ತಿಗಳು ಸೇರಲು ಕಾರಣವಾಗಲಿದೆ ಎಂದರು.

ದೇವದಾಸಿ ಮಹಿಳೆಯರ ಕುಟುಂಬದ ಎಲ್ಲಾ ಸದಸ್ಯರು ಗಣತಿಗೆ ದೊರೆಯಬೇಕಾದುದರಿಂದ ಅವರೆಲ್ಲರನ್ನು ಬೇರೊಂದು ಸ್ಥಳಗಳಿಗೆ ಕರೆಸಿ, ಗಣತಿಗೆ ಕ್ರಮವಹಿಸುವುದು ಆ ಕುಟುಂಬಗಳಿಗೆ ತೊಂದರೆದಾಯಕವಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಿ, ಅವರ ಮೂಲಕವೇ ದೇವದಾಸಿ ಮಹಿಳೆಯರ ಮನೆಗಳಿಗೆ ತೆರಳಿ, ಅವರ ಮನೆಗಳ ಬಳಿಯೇ ಗಣತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಸಂಘದ ಮುಖಂಡರು ತಹಶೀಲ್ದಾರ್ ಅವರ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಿಗೆ ಮನವಿ ಪತ್ರ ಸಲ್ಲಿಸಿ, ಸಮರ್ಪಕವಾಗಿ ಕೆಲಸ ಮಾಡದ ಜಿಲ್ಲಾ ಅನುಷ್ಠಾನಾಧಿಕಾರಿ ಮುಕ್ಕಣ್ಣನನ್ನು ಕೆಲಸದಿಂದ ತೆಗೆದುಹಾಕಿ, ಆ ಜಾಗಕ್ಕೆ ದೇವದಾಸಿ ಮಕ್ಕಳನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು. ಜಿಲ್ಲಾ ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಸುಧಾ ಚಿದ್ರಿ ಸ್ಥಾನಕ್ಕೆ ಬೇರೆಯವರನ್ನು ನಿಯೋಜನೆ ಮಾಡಬೇಕು. ದೇವದಾಸಿ ಮಹಿಳಯರಿಗೆ ಸಮರ್ಪಕವಾಗಿ ಮಾಸಾಶನ ಹಣ ಜಮಾ ಆಗುತ್ತಿಲ್ಲ. ಈ ಕುರಿತು ತನಿಖೆ ಮಾಡಬೇಕು. ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುವ ಬಡ ದೇವದಾಸಿ ಮಹಿಳೆಯರಿಗೆ ಹಕ್ಕುಪತ್ರ ನೀಡಬೇಕು ಎಂದು ಮನವಿ ಮಾಡಿದರು.

ಸಂಘದ ಅಧ್ಯಕ್ಷೆ ಮಾರೆಮ್ಮ, ಕಾರ್ಯದರ್ಶೀ ಹೆಚ್. ದುರುಗಮ್ಮ, ಸದಸ್ಯರಾದ ತಾಯಮ್ಮ, ಹುಲಿಗೆಮ್ಮ, ದುರುಗಮ್ಮ ಮುಂತಾದವರು ಉಪಸ್ಥಿತರಿದ್ದರು.

ಸಂಡೂರಿನಲ್ಲಿ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಸದಸ್ಯರು ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ತಹಶೀಲ್ದಾರ್ ಜಿ. ಅನಿಲ್‌ಕುಮಾರ್ ಅವರಿಗೆ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ