ಕನ್ನಡಪ್ರಭ ವಾರ್ತೆ ಖಾನಾಪುರ
ಮೆರವಣಿಗೆಯಲ್ಲಿ ಭಾಗವಹಿಸಿದ್ದ ನೂರಾರು ಹಿಂದು ಕಾರ್ಯಕರ್ತರು ಕೇಸರೆಕರ ದಂಪತಿಯ ಹಂತಕನ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ತಹಸೀಲ್ದಾರ್ ಕಚೇರಿ ಆವರಣದಲ್ಲಿ ಪ್ರತಿಭಟನಾ ಸಭೆ ಆಯೋಜಿಸಿದ ಪ್ರತಿಭಟನಾಕಾರರು ತಹಸೀಲ್ದಾರ್‌ರ ಮೂಲಕ ಮಹಾರಾಷ್ಟ್ರ ಸಿಎಂ ಮತ್ತು ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಿ ಹಂತಕನ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶಾಸಕ ವಿಠ್ಠಲ ಹಲಗೇಕರ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿ, ಕಳೆದ ಆ.15ರಂದು ಮಹಾರಾಷ್ಟ್ರದ ಸಾಂಗ್ಲಿ ಬಳಿ ಪಕ್ಕದ ಮನೆಯ ಅನ್ಯಧರ್ಮೀಯ ಮತಾಂಧ ವ್ಯಕ್ತಿಯಿಂದ ಕೇಸರೆಕರ ದಂಪತಿಯ ಬರ್ಬರವಾಗಿ ಕೊಲೆಗೀಡಾಗಿದ್ದಾರೆ. ಈ ದಂಪತಿಯ ಕೊಲೆ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಅಭಿಯೋಜಕರನ್ನು ನೇಮಕ ಮಾಡಬೇಕು. ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದಲ್ಲಿ ಕಲಾಪ ನಡೆಸಬೇಕು ಮತ್ತು ಆದಷ್ಟು ಬೇಗ ಆರೋಪಿಗೆ ಕಠಿಣ ಶಿಕ್ಷೆ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂಬುದು ವಿವಿಧ ಸಂಘಟನೆಗಳು, ಹಿಂದು ಧರ್ಮದ ಬಾಂಧವರು ಮತ್ತು ತಾಲೂಕಿನ ನಾಗರಿಕರ ಒಕ್ಕೂರಲ ಆಗ್ರಹವಾಗಿದೆ ಎಂದರು.ಕೇಸರೆಕರ ದಂಪತಿಯ ಇಬ್ಬರೂ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಅಗತ್ಯ ಆರ್ಥಿಕ ನೆರವು ಒದಗಿಸುವಂತೆ ತಾವು ಮಾಡಿದ್ದ ಮನವಿ ಆಲಿಸಿದ ರಾಜ್ಯದ ಸಿಎಂ ಡಿ.ಕೆ.ಶಿವಕುಮಾರ್ ಇಬ್ಬರೂ ಮಕ್ಕಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ ₹1 ಲಕ್ಷದ ಆರ್ಥಿಕ ನೆರವು ಒದಗಿಸಿದ್ದಾರೆ. ಈಗ ಮುಖ್ಯಮಂತ್ರಿಗಳಿಂದ ನೀಡಲಾದ ನೆರವಿನ ಚೆಕ್ ಮಕ್ಕಳಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ತಿಳಿಸಿದ ಶಾಸಕರು ತುಂಬಿದ ಸಭೆಯಲ್ಲಿ ಕೇಸರೆಕರ ದಂಪತಿಗಳ ಮಕ್ಕಳಿಗೆ ಸರ್ಕಾರದಿಂದ ಮಂಜೂರಾದ ಸಹಾಯಧನದ ಚೆಕ್ ಹಸ್ತಾಂತರಿಸಿದರು.ಈ ಮಕ್ಕಳಿಗೆ ಮಹಾರಾಷ್ಟ್ರ ರಾಜ್ಯ ಸರ್ಕಾರದಿಂದಲೂ ಅಗತ್ಯ ನೆರವಿನ ಭರವಸೆ ದೊರೆತಿದೆ. ಕೇಸರೆಕರ ಅವರ ಇಬ್ಬರೂ ಮಕ್ಕಳ ಪಾಲನೆ-ಪೋಷಣೆಯ ಜವಾಬ್ದಾರಿಯನ್ನು ಹೊತ್ತಿರುವ ಕುರಿತು ಮಹಾರಾಷ್ಟ್ರ ಸರ್ಕಾರ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಒಟ್ಟಾರೆ ಕೇಸರೆಕರ ಕುಟುಂಬಕ್ಕೆ ಎದುರಾದ ಈ ಆತಂಕದ ಸಂದರ್ಭದಲ್ಲಿ ಅವರ ಕುಟುಂಬದ ಜೊತೆ ಕರ್ನಾಟಕ-ಮಹಾರಾಷ್ಟ್ರ ಸರ್ಕಾರಗಳು, ತಾಲ್ಲೂಕಿನ ಜನರು ಮತ್ತು ಸಂಘ-ಸಂಸ್ಥೆಗಳು ನಿಲ್ಲಲಿವೆ ಎಂದು ಶಾಸಕರು ತಿಳಿಸಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಅರವಿಂದ ಪಾಟೀಲ, ಮುಖಂಡರಾದ ಪ್ರಮೋದ ಕೊಚೇರಿ, ಧನಶ್ರೀ ದೇಸಾಯಿ, ಜ್ಯೋತಿಬಾ ರೇಮಾಣಿ, ಬಾಬುರಾವ್ ದೇಸಾಯಿ, ಪಂಡಿತ ಓಗಲೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ನಾಗರಿಕರು ಇದ್ದರು.