ಕನ್ನಡಪ್ರಭ ವಾರ್ತೆ ಗಂಗಾವತಿ
ಸಂಗಾಪುರ ಗ್ರಾಪಂಯು ನಾಗರಿಕರ ಅನುಕೂಲಕ್ಕಾಗಿ ನರೇಗಾ ಯೋಜನೆಯಡಿಯಲ್ಲಿ ಸಾಕಷ್ಟು ಅನುದಾನವನ್ನು 2023-2024ರಲ್ಲಿ ಕೆರೆ ಹೂಳೆತ್ತುವ ಕಾರ್ಯಕ್ಕಾಗಿ ಬಳಕೆ ಮಾಡಿರುತ್ತದೆ. ಇತ್ತೀಚೆಗೆ ಹಲವರು ಕೂಡಿಕೊಂಡು ಕೆರೆ ಅಭಿವೃದ್ಧಿ ಸಂಘದ ಹೆಸರಿನಲ್ಲಿ ಅನಧಿಕೃತವಾಗಿ ಕೆರೆಯ ಮಾಲೀಕತ್ವ ಪಡೆಯುವ ಹುನ್ನಾರ ನಡೆಸಿದ್ದು, ಅದರಿಂದ ತಮ್ಮ ವೈಯಕ್ತಿಕ ಲಾಭಕ್ಕಾಗಿ ಕೆರೆಯ ನೀರು, ಕೆರೆಯ ಮಣ್ಣನ್ನು ದುರ್ಬಳಕೆ ಮಾಡಿಕೊಳ್ಳುವ ಪ್ರಯತ್ನದಲ್ಲಿರುತ್ತಾರೆ. ಈ ಸರ್ಕಾರದ ಆಸ್ತಿ ಅನ್ಯ ಜನರ ಕೈವಶವಾಗುವುದನ್ನು ತಪ್ಪಿಸುವ ದೃಷ್ಟಿಯಿಂದ ಸದರಿ ಕೆರೆಯನ್ನು ಈಗಾಗಲೇ ಸಾಕಷ್ಟು ಹಣ ವ್ಯಯಿಸಿ ನಿರ್ವಹಣೆ ಮಾಡುತ್ತಿರುವ ಗ್ರಾಪಂಗೆ ನೀಡಿದಲ್ಲಿ ಅದನ್ನು ಇನ್ನೂ ಸುಸ್ಥಿರವಾಗಿ ಅಭಿವೃದ್ಧಿ ಮಾಡಲು ಸಾಧ್ಯವಾಗಲಿದೆ. ಇದೇ ಪ್ರದೇಶದ ಅಂಜನಾದ್ರಿ ಬೆಟ್ಟವು ಪ್ರವಾಸೋದ್ಯಮದ ದೃಷ್ಟಿಯಿಂದ ಅಭಿವೃದ್ಧಿ ಹೊಂದುತ್ತಿರುವುದರಿಂದ ಗ್ರಾಪಂಯು ಈ ಕೆರೆಯನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮೀನು ಸಾಕಾಣಿಕೆ, ಬೋಟಿಂಗ್ ವ್ಯವಸ್ಥೆ, ವಾಕಿಂಗ್ ಟ್ರ್ಯಾಕ್, ಮಕ್ಕಳಿಗೆ ಮನೋರಂಜನಾ ಉಪಕರಣಗಳನ್ನು ಅಳವಡಿಸುವ ಮೂಲಕ ಕೆರೆಯನ್ನು ಅಭಿವೃದ್ಧಿಪಡಿಸಿದಲ್ಲಿ ಸಾರ್ವಜನಿಕರಿಗೆ ಹಾಗೂ ಈ ಭಾಗದಲ್ಲಿ ಸಂಚರಿಸುವ ಪ್ರವಾಸಿಗಳಿಗೆ ಅನುಕೂಲವಾಗುತ್ತದೆ.
ಹಾಗಾಗಿ ಕೆರೆಯ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿಗೆ ಒಪ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಸಂದರ್ಭ ಉಪ್ಪಾರ್ ಕೃಷ್ಣಪ್ಪ, ರವಿ ನಾಯಕ, ಗ್ರಾಪಂ ಉಪಾಧ್ಯಕ್ಷರಾದ ರಾಘು, ಯಮನೂರು ಅಗಸರ, ಮರಿಯಪ್ಪ, ಕೃಷ್ಣ ನಾಯಕ್, ರಾಚಯ್ಯ ಸ್ವಾಮಿ, ಗೋವಿಂದ ಲಮಾಣಿ, ನಾಗರಾಜ್ ಗದ್ವಾಲ್ ಸೇರಿದಂತೆ ಗ್ರಾಮದ ಹಲವು ಮುಖಂಡರು ಭಾಗವಹಿಸಿದ್ದರು.